ADVERTISEMENT

ನಾಯಕರ ಮುನಿಸಿನಿಂದ ಕಡಿಮೆ ಮತ

ಯಲ್ಲಾಪುರ: ಪರಾಜಿತ ಅಭ್ಯರ್ಥಿ ವಿ.ಎಸ್.ಪಾಟೀಲ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಮೇ 2018, 9:53 IST
Last Updated 17 ಮೇ 2018, 9:53 IST

ಯಲ್ಲಾಪುರ: ಪಕ್ಷದ ಕಾರ್ಯಕರ್ತರು ಗೆಲುವಿಗಾಗಿ ಹಗಲುರಾತ್ರಿ ಶ್ರಮಿಸಿದ್ದಾರೆ. ಮುಂಡಗೋಡ ನಾಯಕರ ಮುನಿಸಿನಿಂದ ಕಡಿಮೆ ಮತ  ಬಂದಿವೆ ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ್ ಹೇಳಿದರು.

ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ ಅವರು, ‘ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಬೇಕಾಗಿದೆ. ಎಲ್ಲ ಕಾರ್ಯಕರ್ತರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಯಲ್ಲಾಪುರ ಮತದಾರರು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಬಿಜೆಪಿಗೆ ಮತ ನೀಡಿದ ಎಲ್ಲ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸುವೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ ಮಾತನಾಡಿ, ‘ಬಿಜೆಪಿ ಕಾರ್ಯಕರ್ತರು ಅಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಪಕ್ಷದ ಪರವಾಗಿ ಕೆಲಸ ನಿರ್ವಹಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾದರೂ ಈ ಭಾಗದ ಅಭಿವೃದ್ಧಿಗೆ ಹಾಗೂ ಜನರ ಕಷ್ಟಗಳಿಗೆ ಬಿಜೆಪಿಯು ಸದಾ ಸ್ಪಂದಿಸುತ್ತದೆ’ ಎಂದು ಹೇಳಿದರು.

ADVERTISEMENT

‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಜಿಲ್ಲೆಯನ್ನು ಬಿಜೆಪಿ ಭದ್ರಕೋಟೆಯನ್ನಾಗಿ ಪರಿವರ್ತಿಸುವ ಉದ್ದೇಶ ಹೊಂದಿದ್ದರು. ಈ ಚುನಾವಣೆಯನ್ನು ಅವರು ಸವಾಲಾಗಿ ಸ್ವೀಕರಿಸಿ 4 ಕ್ಷೇತ್ರದಲ್ಲಿ ಕಮಲ ಅರಳಸಿದ್ದಾರೆ’ ಎಂದರು.

‘ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಈ ಬಾರಿ ಜೆಡಿಎಸ್‍ ಮತಗಳನ್ನೂ ಸಹ ಪಡೆದು 40 ಸಾವಿರ ಮತಗಳ ಅಂತರದಿಂದ ಜಯಗಳಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಹಣಬಲ ಹಾಗೂ ಅಧಿಕಾರದ ಬಲದ ಮೇಲೆ ಕಾಂಗ್ರೆಸ್ ಕೇವಲ 1400 ಮತಗಳಿಗೆ ಇಳಿದಿದ್ದು, ಇದು ನೈತಿಕ ಸೋಲಾಗಿದೆ’ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮಾತನಾಡಿ, ‘ಯಲ್ಲಾಪುರ ತಾಲ್ಲೂಕಿನಲ್ಲಿ 96 ಬೂತ್‍ಗಳಲ್ಲಿ ಬಿಜೆಪಿಗೆ 5,621 ಮತಗಳ ಅಂತರವನ್ನು ನೀಡಿದ್ದೇವೆ. ಪಕ್ಷದ ಪರವಾಗಿ ಪ್ರತಿಯೊಬ್ಬರೂ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಉಮೇಶ ಭಾಗ್ವತ್, ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಭಟ್ಟ ಹಾಸಣಗಿ, ನಗರಘಟಕಾಧ್ಯಕ್ಷ ಬಾಬು ಬಾಂದೇಕರ, ಕಾರ್ಯದರ್ಶಿ ಪ್ರಸಾದ ಹೆಗಡೆ ಪ್ರಮುಖರಾದ ಗಣಪತಿ ಬೋಳ್ಗುಡ್ಡೆ, ಅಶೋಕ ಚಲವಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.