ADVERTISEMENT

ನಾವು ಹೋಗಿ ಬರುತ್ತೇವೆ...!

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 9:15 IST
Last Updated 22 ಜನವರಿ 2011, 9:15 IST

ಕಾರವಾರ: ಹಾಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಶುಕ್ರವಾರ ಮಾಜಿಗಳಾದರು. ಅಧ್ಯಕ್ಷರ ಶಾನಭಾಗರ ಗಜ ನಡಿಗೆ, ಜಿ.ಎನ್.ಹೆಗಡೆ ಮುರೇಗಾರ ಅವರ ಲಾ ಪಾಯಿಂಟ್, ಉಮಾಮಹೇಶ್ವರ ಭಾಗ್ವತ ಅವರ ಗಂಭೀರ ನುಡಿಗಳು, ಭೀಮಣ್ಣ ನಾಯ್ಕರ ತೂಕ ಭರಿತ ಮಾತುಗಳು, ಶಂಭು ಗೌಡರ ಹಾಸ್ಯ ಚಟಾಕಿ, ಶೋಭಾ ಹೆಗಡೆ ಅಧಿಕಾರಿಗಳ ಮೇಲೆ ಹರಿಹಾಯುವ ಪರಿ ಇನ್ನೂ ನೋಡಲು, ಕೇಳಲು ಸಿಗುವುದಿಲ್ಲ.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರನ್ನು ಶುಕ್ರವಾರ ಜಿಲ್ಲಾ ಪಂಚಾಯಿತಿಯಲ್ಲಿ ಬೀಳ್ಕೊಡಲಾಯಿತು. ಎಲ್ಲ ಸದಸ್ಯರನ್ನು ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಶಾಲು ಹೊದಿಸಿ, ಫಲಕ ನೀಡಿ ಸನ್ಮಾನಿಸಿದರು.

ಕಳೆದ ಜಿಲ್ಲಾ ಪಂಚಾಯಿತಿಯಲ್ಲಿದ್ದ ಬಹುತೇಕ ಸದಸ್ಯರು ಅನುಭವಿಗಳು, ಜ್ಞಾನಿಗಳು, ಕಾನೂನು ಬಲ್ಲವರ ತಂಡವಾಗಿತ್ತು. ಒಟ್ಟು 36 ಜಿಲ್ಲಾ ಪಂಚಾಯಿತಿ ಸದಸ್ಯರ ಪೈಕಿ ಉಪಾಧ್ಯಕ್ಷೆ ಪುಷ್ಪಾ ನಾಯ್ಕ ಹಾಗೂ ಸದಸ್ಯ ಮಂಕಾಳು ವೈದ್ಯ ಮಾತ್ರ ಜಿ.ಪಂ.ಗೆ ಮರು ಪ್ರವೇಶ ಮಾಡಲಿದ್ದು, ಉಳಿದವರೆಲ್ಲರೂ ‘ನಾವು ಹೋಗಿ ಬರುತ್ತೇವೆ’ ಎಂದು ಪರಸ್ಪರ ಕೈಕುಲುಕಿ ಹೊರ ನಡೆದರು.

ಸನ್ಮಾನ ಸ್ವೀಕರಿಸಿದ ಸದಸ್ಯರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡವರೇ ಅಧಿಕಾರಿಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು ವಿಶೇಷವಾಗಿತ್ತು. ಎಲ್ಲ ಸದಸ್ಯರು ಕಾಮಗಾರಿಗಳು, ಅಧಿಕಾರಿಗಳ ಬಗ್ಗೆ ಮಾತನಾಡಿದರೆ ಅಧ್ಯಕ್ಷ ಎಲ್.ವಿ.ಶಾನಭಾಗ್ ಅವರು ಇವೆಲ್ಲ ಹೊರತು ಪಡಿಸಿ ಸ್ನೇಹ ಸಂಬಂಧಗಳ ಬಗ್ಗೆ ಮಾತನಾಡಿದರು.

‘ಅಧಿಕಾರ ಶಾಶ್ವತವಲ್ಲ ಸ್ನೇಹ ಶಾಶ್ವತ. 17 ತಿಂಗಳ ಕಾಲ ಅಧ್ಯಕ್ಷ ಗಾದಿಯಲ್ಲಿ ವಿಶೇಷ ಅನುಭಗಳನ್ನು ಪಡೆದಿದ್ದೇನೆ. ರಾಜಕೀಯ ಜೀವನದಲ್ಲಿ ಕಷ್ಟ ಸುಖಗಳನ್ನು ಕಂಡಿದ್ದೇನೆ ಸದಸ್ಯರ ಎಲ್ಲ ಬೇಡಿಕೆಗಳನ್ನು ಪೂರ್ಣ ಮಾಡಲಿಲ್ಲ ಎನ್ನುವ ಕೊರತೆಯೂ ನನಗೆ ಕಾಡುತ್ತಿದೆ’ ಎಂದರು.

ಅಧ್ಯಕ್ಷನಾಗಿರುವುದಕ್ಕಿಂತ ಸದಸ್ಯನಾಗಿರುವುದೇ ಒಳ್ಳೆಯದು ಏಕೆಂದರೆ ನಾನೇ ಸದಸ್ಯನಾಗಿದ್ದಾಗ ಅಧ್ಯಕ್ಷರತ್ತ ಆರೋಪಗಳ ಬಾಣಗಳನ್ನು ಬಿಡುತ್ತಿದೆ. ಈಗ ಆ ಅನುಭವ ನನಗಾಯಿತು. ರಾಜ್ಯದಲ್ಲಿ ಆಡಳಿತ ನಡೆಸುವುದು ಒಂದು ಪಕ್ಷ ಜಿ.ಪಂ.ನಲ್ಲಿ ಅಧಿಕಾರಕ್ಕಿರುವುದು ಒಂದು ಪಕ್ಷವಾದರೆ ಅನುದಾನದ ಕೊರತೆ, ಅಭಿವೃದ್ಧಿ ಕಾಮಗಾರಿ ಅಡೆತಡೆಗಳು ಬರುತ್ತವೆ ಎಂದರು. 

ಜಿ.ಪಂ.ನಲ್ಲಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಉಸ್ತುವಾರಿ ಸಚಿವ ಕಾಗೇರಿ ಹೇಳಿದ್ದಾರೆ. ಅನುದಾನ ಬಂದರಲ್ಲವೇ ದುರ್ಬಳಕೆ ಆಗುವುದು ಎಂದು ಶಾನಭಾಗ್ ಪ್ರಶ್ನಿಸಿದರು.

ಹಿರಿಯ ಸದಸ್ಯ ದಾಮೋದರ ಗರ್ಡೀಕರ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಕಾಲದಿಂದ ಹಿಡಿದು ಇಲ್ಲಿಯವರೆಗೆ ಅನೇಕ ಬದಲಾವಣೆಗಳನ್ನು ಜಿಲ್ಲಾ ಪಂಚಾಯಿತಿಯಲ್ಲಿ ಆಗಿವೆ. ಐದು ವರ್ಷದ ಅಧ್ಯಕ್ಷರ ಅವಧಿಯನ್ನು ಮೊಟಕುಗೊಳಿಸಿ ಎರಡು ಅವಧಿ ಮಾಡಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಒಂದು ರೀತಿಯಲ್ಲಿ ಗೌರವವೇ ಇಲ್ಲದಂತಾಗಿದೆ ಎಂದರು.

ಸದಸ್ಯ ಉಮಾಮಹೇಶ್ವರ ಭಾಗ್ವತ ಮಾತನಾಡಿ, ಶಾಸಕಾಂಗ ಕಾರ್ಯಾಂಗ ಸೇರಿ ಕೆಲಸ ಮಾಡಿದಾಗ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ಕೊರತೆ ಇರುವುದಿಲ್ಲ ಎಂದರು.

ಸದಸ್ಯೆ ಶೋಭಾ ಹೆಗಡೆ ಮಾತನಾಡಿ, ಸಭೆ ನಡೆಯುವ ಸಂದರ್ಭದಲ್ಲಿ ಅಧಿಕಾರಿ ಹಾಗೂ ಸದಸ್ಯರ ಮಧ್ಯೆ ವಾದ-ವಿವಾದಗಳು ಸಹಜ. ಸಭೆಯಿಂದ ಹೊರ ಹೋದ ಮೇಲೆ ನಾವೆಲ್ಲ ಮಿತ್ರರಾಗಿರುತ್ತಿದ್ದೇವು ಎಂದರು.

ಸದಸ್ಯರಾದ ಬಿ.ಟಿ.ನಾಯ್ಕ, ಗಾಯತ್ರಿ ಗೌಡ, ಕೆ.ಆರ್. ಬಾಳೇಕಾಯಿ. ಹೊನ್ನಪ್ಪ ನಾಯ್ಕ, ಮಾಂಕಾಳು ವೈದ್ಯ, ಮಿರಾಶಿ, ಜಿ.ಎಸ್.ಭಟ್, ಜಿ.ಎನ್.ಹೆಗಡೆ ಮುರೇಗಾರ, ವಿ.ಎಸ್.ಪಾಟೀಲ, ಜಿ.ಪಂ. ಸಿಇಓ ವಿಜಯ ಮೋಹನರಾಜ್ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.