ADVERTISEMENT

`ನೂತನ ಶೈಕ್ಷಣಿಕ ವರ್ಷದಲ್ಲಿ ಕಮ್ಯುನಿಟಿ ಕಾಲೇಜು'

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 9:32 IST
Last Updated 3 ಸೆಪ್ಟೆಂಬರ್ 2013, 9:32 IST
ಶಿರಸಿಯ ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ನಡೆದ ನೂತನ ಕೋರ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕವಿವಿ ಕುಲಪತಿ ಎಚ್.ಬಿ.ವಾಲೀಕಾರ್ ಮಾತನಾಡಿದರು. ವರೇಂದ್ರ ಕಾಮತ್, ಎಂ.ಎಂ.ಹೆಗಡೆ ಬಕ್ಕಳ, ವಿ.ಎಸ್.ಸೋಂದೆ, ಜಿ.ಎಂ.ಹೆಗಡೆ ಮುಳಖಂಡ, ಶಾಂತಾರಾಮ ಹೆಗಡೆ ಚಿತ್ರದಲ್ಲಿದ್ದಾರೆ
ಶಿರಸಿಯ ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ನಡೆದ ನೂತನ ಕೋರ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕವಿವಿ ಕುಲಪತಿ ಎಚ್.ಬಿ.ವಾಲೀಕಾರ್ ಮಾತನಾಡಿದರು. ವರೇಂದ್ರ ಕಾಮತ್, ಎಂ.ಎಂ.ಹೆಗಡೆ ಬಕ್ಕಳ, ವಿ.ಎಸ್.ಸೋಂದೆ, ಜಿ.ಎಂ.ಹೆಗಡೆ ಮುಳಖಂಡ, ಶಾಂತಾರಾಮ ಹೆಗಡೆ ಚಿತ್ರದಲ್ಲಿದ್ದಾರೆ   

ಶಿರಸಿ: `ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಸೂಚನೆ ಅನ್ವಯ ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಕಮ್ಯುನಿಟಿ ಕಾಲೇಜನ್ನು ಪ್ರಾರಂಭಿಸಲಾಗುತ್ತಿದೆ' ಎಂದು ಕವಿವಿ ಕುಲಪತಿ ಡಾ. ಎಚ್.ಬಿ.ವಾಲೀಕಾರ್ ತಿಳಿಸಿದರು.

ಸುವರ್ಣ ಸಂಭ್ರಮ ಆಚರಿಸುತ್ತಿರುವ ಇಲ್ಲಿನ ಮಾಡರ್ನ್ ಎಜುಕೇಶನ್ ಸೊಸೈಟಿಯಲ್ಲಿ ಹೊಸದಾಗಿ ಪ್ರಾರಂಭಿಸಿರುವ ಎಂ.ಎಸ್ಸಿ. (ಗಣಿತ) ಹಾಗೂ ಎಂ.ಕಾಂ. ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಸೋಮವಾರ ವಿಧ್ಯುಕ್ತವಾಗಿ ಉದ್ಘಾಟಿಸಿ ಅವರು ಮಾತನಾಡಿದರು.

`ಪ್ರಸ್ತುತ ಸಂದರ್ಭದಲ್ಲಿ ಸ್ನಾತಕೋತ್ತರ ಪದವಿಗೂ ಉದ್ಯೋಗ ಅಲಭ್ಯತೆ ಎದುರಾಗುತ್ತಿದೆ. ಪ್ರವಾಸೋದ್ಯಮ, ಹೋಟೆಲ್ ಉದ್ಯಮದಂತಹ ಕೋರ್ಸ್‌ಗಳಿಗೆ ಐದು ವರ್ಷಗಳ ತರಗತಿಯ ಅಗತ್ಯವಿಲ್ಲ. ಇವನ್ನು ಸರಿದೂಗಿಸಲು, ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಹೊರೆಯಾಗುವುದನ್ನು ತಪ್ಪಿಸಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಕಮ್ಯುನಿಟಿ ಕಾಲೇಜು ಪ್ರಾರಂಭಿಸಲು ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಸಭೆ ನಡೆಸಿ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಈ ಕುರಿತು ಸೂಚನೆ ನೀಡಿದೆ. 

ಪ್ರವಾಸೋದ್ಯಮ, ಹೋಟೆಲ್ ಉದ್ಯಮ, ಪರಿಸರ ಪ್ರವಾಸೋದ್ಯಮ, ಕ್ಯಾಟರಿಂಗ್, ಜಾನಪದ ಸೇರಿದಂತೆ ವಿವಿಧ ಕೋರ್ಸ್‌ಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿಯೊಂದು ಕೋರ್ಸ್ ಆರು ತಿಂಗಳ ಅವಧಿಯ ಸರ್ಟಿಫಿಕೇಟ್ ಕೋರ್ಸ್ ಆಗಿದ್ದು, ಸ್ನಾತಕೋತ್ತರ ಪದವಿಗೆ ಪೂರಕವಾಗಿ ಪಠ್ಯಕ್ರಮ ಸಿದ್ಧಪಡಿಸಲಾಗುವುದು' ಎಂದರು.

ವೇದಿಕೆಯಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ನಿಕಟಪೂರ್ವ ಅಧ್ಯಕ್ಷರಾದ ಡಾ.ವಿ.ಎಸ್. ಸೋಂದೆ, ಶಾಂತಾರಾಮ ಹೆಗಡೆ ಶೀಗೇಹಳ್ಳಿ, ಸದಸ್ಯರಾದ ಎಂ.ಎಂ.ಹೆಗಡೆ ಬಕ್ಕಳ, ವರೇಂದ್ರ ಕಾಮತ, ಕವಿವಿ ಸಿಂಡಿಕೇಟ್ ಸದಸ್ಯ ಮಹೇಶ ಬೊಳಿಕಟ್ಟಿ, ಎಂ.ಎಂ. ಕಾಲೇಜಿನ ಪ್ರಾಚಾರ್ಯ ಎಂ.ಜಿ.ಹೆಗಡೆ ಉಪಸ್ಥಿತರಿದ್ದರು. ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಜಿ.ಹೆಗಡೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.