ADVERTISEMENT

ನೂರಾರು ವಿದ್ಯಾರ್ಥಿಗಳು ಮರಳಿ ಕ್ಯಾಂಪ್‌ಗೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 6:00 IST
Last Updated 18 ಆಗಸ್ಟ್ 2012, 6:00 IST

ಮುಂಡಗೋಡ: ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಯಲಿದೆ ಎನ್ನುವ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ತಾಲ್ಲೂಕಿನ ಟಿಬೆಟನ್ನರ ಕ್ಯಾಂಪಿನ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಇಲ್ಲಿನ ಕ್ಯಾಂಪಿಗೆ ಮರಳಿ ಬಂದರು.

ದೂರದ ಊರುಗಳಿಂದ ತಮ್ಮವರನ್ನು ಬರ ಮಾಡಿಕೊಳ್ಳಲು ಟಿಬೆಟನ್ನರ ಕ್ಯಾಂಪ್‌ನ ನೂರಾರು ಜನರು ಇಲ್ಲಿಯ ಬಸ್ ನಿಲ್ದಾಣದಲ್ಲಿ ಸೇರಿದ್ದರು. ಬೇರೆಬೇರೆ ಮಾರ್ಗವಾಗಿ ಬರುತ್ತಿದ್ದ ಬಸ್‌ನಲ್ಲಿ ಬಂದ ವಿದ್ಯಾರ್ಥಿಗಳನ್ನು ಪಾಲಕರು ಬರಮಾಡಿಕೊಂಡು, ಕ್ಯಾಂಪ್‌ಗೆ ಕರೆದುಕೊಂಡು ಹೋದರು.

ಟಿಬೆಟನ್ನರಲ್ಲಿ ಧೈರ್ಯ ತುಂಬಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ, ಹುಬ್ಬಳ್ಳಿ- ಧಾರವಾಡ ಎಸಿಪಿ ಸಂಜೀವ ಪಾಟೀಲ, ಧಾರವಾಡ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರು ಸಂಜೆ ಟೆಬೆಟನ್ ಕ್ಯಾಂಪ್‌ಗೆ ಭೇಟಿ ನೀಡಿ ಕ್ಯಾಂಪ್‌ನ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು.

ಕ್ಯಾಂಪ್‌ನ ಭದ್ರತೆ ಮತ್ತು ಅಲ್ಲಿರುವ ನಿವಾಸಿಗಳಿಗೆ ರಕ್ಷಣೆ ನೀಡುವುದಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದರು. ಎಸ್‌ಎಮ್‌ಎಸ್ ವದಂತಿ, ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಸಂದೇಶಗಳಿಗೆ ಗಮನ ನೀಡಬಾರದು ಎಂದರು.

ದುರುಪಯೋಗ: `2010ರಲ್ಲಿ ಚೀನಾದಲ್ಲಿ ಸಂಭವಿಸಿದ ಭೂಕಂಪದ ಸಂದರ್ಭದಲ್ಲಿ ತೆಗೆಯಲಾದ ಚಿತ್ರಗಳನ್ನು ದುರುಪಯೋಗಪಡಿಸಿಕೊಂಡು ಬೌದ್ಧ ಬಿಕ್ಕುಗಳಿಂದ ಹಲ್ಲೆ ನಡೆದಿದೆ ಎಂಬಂತೆ ಅಂತರ್ಜಾಲದಲ್ಲಿ ಕೆಲವು ಚಿತ್ರಗಳನ್ನು ಅಪ್‌ಲೋಡ್ ಮಾಡಲಾಗಿದೆ. ಇದರಿಂದ ಪ್ರಚೋದನೆಗೊಂಡ ಕೆಲ ವ್ಯಕ್ತಿಗಳು ಟಿಬೆಟನ್‌ರ ಮೇಲೆ ದಾಳಿ ಮಾಡುತ್ತಿದ್ದಾರೆ. ಹುಬ್ಬಳ್ಳಿ ಹಾಗೂ ಮೈಸೂರಲ್ಲಿ ಟಿಬೇಟನ್‌ರ ಮೇಲೆ ದಾಳಿ ಮಾಡಲಾಗಿದೆ~ ಎಂದು ಕ್ಯಾಂಪ್‌ನ ಚೇರಮನ್ ಸೋನಂ ತೆಂಜಿಂಗ್ ಹೇಳಿದರು.

ಕ್ಯಾಂಪ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳಿಂದ ಸಣ್ಣಪುಟ್ಟ ಘಟನೆಗಳು ನಡೆದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಲ್ಲಿ ಚರ್ಚೆ ನಡೆಸಲಾಗಿದೆ. ಟಿಬೆಟನ್‌ರು ಹುಬ್ಬಳ್ಳಿಗೆ ಹೋಗಿಬರುವ ಮಾರ್ಗದಲ್ಲಿ ಸೂಕ್ತ ಪೊಲೀಸ್ ಭದ್ರತೆ ನೀಡುವುದಾಗಿ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆಕಸ್ಮಿಕವಾಗಿ ದಾಳಿ ಮಾಡಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.