ADVERTISEMENT

ಪಂಚಾಯಿತಿ ಸದಸ್ಯರ ರಹಸ್ಯ ಯಾತ್ರೆ!

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 9:44 IST
Last Updated 22 ಡಿಸೆಂಬರ್ 2012, 9:44 IST

ಕಾರವಾರ: `ಕುದುರೆ ವ್ಯಾಪಾರ'ದ ರಾಜಕಾರಣದ ಭೀತಿ ಗ್ರಾಮ ಪಂಚಾಯಿತಿ ಸದಸ್ಯರನ್ನೂ ಬಿಟ್ಟಿಲ್ಲ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ತಮ್ಮಲ್ಲೇ ಉಳಿಸಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಹಾವೇರಿ ಜಿಲ್ಲೆ ಗುತ್ತಲ ಗ್ರಾಮ ಪಂಚಾಯಿತಿಯ ಐವರು ಮಹಿಳಾ ಸದಸ್ಯರೂ ಸೇರಿದಂತೆ ಒಟ್ಟು 25 ಮಂದಿ ಸದಸ್ಯರು `ರಹಸ್ಯ ಯಾತ್ರೆ' ಹೊರಟಿದ್ದಾರೆ.

ನಗರಕ್ಕೆ ಶುಕ್ರವಾರ ಆಗಮಿಸಿದ ಸದಸ್ಯರು ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿರುವ ಮಯೂರವರ್ಮ ವೇದಿಕೆ ಹಿಂಭಾಗದಲ್ಲಿ ಬೆಳಿಗ್ಗೆ 8.30ರ ಸುಮಾರಿಗೆ ಗ್ಯಾಸ್ ಒಲೆಯ ಮೇಲೆ ಉಪ್ಪಿಟ್ಟು ಸಿದ್ಧಪಡಿಸಿ ಬೆಳಗಿನ ಉಪಾಹಾರ ಸೇವಿಸುತ್ತಿದ್ದರು. ರಾಜ್ಯದ ನಾಲ್ಕನೇ ದೊಡ್ಡ ಗ್ರಾಮ ಪಂಚಾಯಿತಿ ಆಗಿರುವ ಗುತ್ತಲ ಗ್ರಾಮ ಪಂಚಾಯಿತಿಯ ಸದಸ್ಯರು ಮೂರು ಟ್ರ್ಯಾಕ್ಸ್ ಹಾಗೂ ಎರಡು ಕಾರಿನಲ್ಲಿ ಇಲ್ಲಿಗೆ ಬಂದಿದ್ದರು. ಡಿ.19ರಂದು ಮಧ್ಯಾಹ್ನ 2ಕ್ಕೆ ಗುತ್ತಲ ತೊರೆದ ಸದಸ್ಯರು 20ರಂದು ಬೆಳಗಿನ ಜಾವ 2ರ ಸುಮಾರಿಗೆ ಇಲ್ಲಿಗೆ ತಲುಪಿದ್ದಾರೆ. ಬೆಳಿಗ್ಗೆ ಕಡಲತೀರದಲ್ಲಿ ಸುತ್ತಾಡಿದ ಸದಸ್ಯರು ನಂತರ ಯುದ್ಧನೌಕೆ ವಸ್ತುಸಂಗ್ರಾಲಯ ವೀಕ್ಷಣೆ ಮಾಡಿ 11ರ ಸುಮಾರಿಗೆ ತಮ್ಮ ಪ್ರಯಾಣ ಬೆಳೆಸಿದರು.

ಗುತ್ತಲ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇದೇ 23 ರಂದು ನಡೆಯಲಿದೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ (ಮಹಿಳೆ) ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಒಟ್ಟು 38 ಸದಸ್ಯ ಬಲದ ಪಂಚಾಯಿತಿಯಲ್ಲಿ ಈ ಅವಧಿಗೆ ಅವಧಿಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಎರಡೂ ಸ್ಥಾನವನ್ನು ತಮ್ಮಲ್ಲೇ ಉಳಿಸಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಎಲ್ಲರೂ ಯಾತ್ರೆಗೆ ಹೊರಟಿದ್ದಾರೆ. ಹಾಲಿ ಅಧ್ಯಕ್ಷರೂ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ತಾವು ಎಲ್ಲಿಗೆ ಹೋಗುತ್ತಿದ್ದಾರೆ ಎನ್ನುವುದನ್ನು ಸದಸ್ಯರು ರಹಸ್ಯವಾಗಿಟ್ಟಿದ್ದಾರೆ. ಎಲ್ಲರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಸದಸ್ಯರ ಗುಂಪಿನಲ್ಲಿರುವ ಮುಖಂಡರೊಬ್ಬರು ಮೊಬೈಲ್ ಮಾತ್ರ ಆನ್ ಆಗಿದೆ. ಸದಸ್ಯರೆಲ್ಲರೂ ಗುತ್ತಲದಿಂದ ಗೋವಾಕ್ಕೆ ಹೋಗುವ ವಿಚಾರ ಹೊಂದಿದ್ದರು ಆದರೆ, ಗಡಿಯಲ್ಲಿ ದುಪ್ಪಟ್ಟು ತೆರಿಗೆ ಪಾವತಿಸಬೇಕಾಗಿದ್ದರಿಂದ ಗೋವಾಕ್ಕೆ ಹೋಗುವ ವಿಚಾರ ಕೈಬಿಟ್ಟು ಪುನಃ ಕಾರವಾರಕ್ಕೆ ಮರಳಿ ವಿಶ್ರಾಂತಿ ಪಡೆದಿದ್ದರು.

'ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಾವು ಯಾತ್ರೆಗೆ ಹೊರಟಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಆಯ್ಕೆ ಪ್ರಕ್ರಿಯೆ ನಡೆಯುವ ಒಂದು ಗಂಟೆ ಮುಂಚಿತವಾಗಿ ನಾವು ಗ್ರಾಮಕ್ಕೆ ಹೋಗುತ್ತೇವೆ' ಎಂದು ಹೆಸರು ಹೇಳಲು ಇಚ್ಛಿಸದ ಸದಸ್ಯರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.