ADVERTISEMENT

ಪಟಾಕಿ ಖರೀದಿಗೆ ಜನರ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 7:13 IST
Last Updated 21 ಅಕ್ಟೋಬರ್ 2017, 7:13 IST

ಕಾರವಾರ: ಪರಿಸರ ಸ್ನೇಹಿ ದೀಪಾವಳಿ ಆಚರಣೆಯತ್ತ ಮುಖ ಮಾಡಿರುವ ಜಿಲ್ಲೆಯ ಜನತೆ ಈ ಬಾರಿ ಪಟಾಕಿ ಖರೀದಿಗೆ ನಿರಾಸಕ್ತಿ ತೋರಿದ್ದಾರೆ. ಇದರಿಂದ ಪಟಾಕಿ ಮಳಿಗೆಗಳು ಗ್ರಾಹಕರಿಲ್ಲದೇ ಭಣಗುಡುತ್ತಿದ್ದವು.

ವರ್ಷದಿಂದ ವರ್ಷಕ್ಕೆ ಪಟಾಕಿ ಮಾರಾಟ ಕುಸಿತವಾಗುತ್ತಿದ್ದು, ವ್ಯಾಪಾರಿಗಳಿಗೆ ಸಿಗುತ್ತಿದ್ದ ಲಾಭವು ಕಡಿಮೆಯಾಗಿದೆ. ಈ ಬಾರಿ ಹಣತೆಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ನಗರದ ಸುಭಾಷ್ ವೃತ್ತ, ನ್ಯಾಯಾಲಯದ ರಸ್ತೆ, ಎಂ.ಜಿ.ರಸ್ತೆ, ಸವಿತಾ ಹೋಟೆಲ್‌ ವೃತ್ತದ ಬಳಿ ಮಣ್ಣಿನ ಹಣತೆಗಳು ಭರ್ಜರಿ ವ್ಯಾಪಾರ ಆಗಿವೆ.

ಶಿವಕಾಶಿ ಪಟಾಕಿಗೆ ಬೇಡಿಕೆ: ಇಲ್ಲಿನ ಮಿತ್ರಾ ಸಮಾಜ ಆವರಣದಲ್ಲಿ 4 ಪಟಾಕಿ ಮಳಿಗೆಗಳಿದ್ದು, ವ್ಯಾಪಾರಸ್ಥರು ಪ್ರತಿ ವರ್ಷ ತಮಿಳುನಾಡಿನ ಶಿವಕಾಶಿಯಿಂದ ಪಟಾಕಿಯನ್ನು ಆಮದು ಮಾಡಿಕೊಳ್ಳುತ್ತಾರೆ. ಗಣೇಶ ಚತುರ್ಥಿ ವೇಳೆ ಮಳಿಗೆಗಳನ್ನು ತೆರೆಯಲಾಗಿದೆ. ದೀಪಾವಳಿಯಲ್ಲಿ ನಾಲ್ಕೈದು ದಿನ ವ್ಯಾಪಾರ ವಹಿವಾಟು ನಡೆಯುತ್ತದೆ.

ADVERTISEMENT

‘ಜಿಲ್ಲೆಯ ಜನತೆ ಮೇಡ್‌ ಇನ್ ಇಂಡಿಯಾ ಅಭಿಯಾನಕ್ಕೆ ಬೆಂಬಲ ನೀಡುತ್ತಿದ್ದು, ಸ್ವದೇಶಿ ನಿರ್ಮಿತ ಆಕಾಶ ಬುಟ್ಟಿಗಳನ್ನೇ ಹೆಚ್ಚಾಗಿ ಖರೀದಿಸಿದ್ದಾರೆ. ಪಟಾಕಿಯನ್ನು ಖರೀದಿಸುವಾಗ ಅದು ಸ್ವದೇಶದ್ದೇ ಅಥವಾ ಚೀನಾದೇ ಎಂದು ಜನರು ಕೇಳಿ ಪಡೆಯುತ್ತಿದ್ದರು. ನಮ್ಮ ಅಂಗಡಿಯಲ್ಲಿ ಶಿವಕಾಶಿ ಪಟಾಕಿಗಳೆ ಇದ್ದು, ತಕ್ಕಮಟ್ಟಿಗೆ ವ್ಯಾಪಾರ ಆಗಿದೆ’ ಎನ್ನುತ್ತಾರೆ ಪಟಾಕಿ ವ್ಯಾಪಾರಿ ಅಶೋಕ ಜೋಶಿ.

ಶೇ 30ರಷ್ಟು ವ್ಯಾಪಾರ ಇಳಿಕೆ:
‘ಕಳೆದ ಬಾರಿಗಿಂತ ಈ ವರ್ಷ ಶೇ 30ರಿಂದ 50 ರಷ್ಟು ವ್ಯಾಪಾರದಲ್ಲಿ ಇಳಿಕೆಯಾಗಿದೆ. ದಿನಕ್ಕೆ ₹ 30 ಸಾವಿರದಿಂದ ₹ 50 ಸಾವಿರದವರೆಗೆ ವ್ಯಾಪಾರ ಆಗುತ್ತಿದೆ. ನಗರದ ಕೆಲ ಕಿರಾಣಿ ಅಂಗಡಿ, ಹೂವು– ಹಣ್ಣು ವ್ಯಾಪಾರ ಮಾಡುವವರು ಕೂಡ ಪಟಾಕಿ ಮಾರಾಟ ಮಾಡುತ್ತಿರುವುದರಿಂದ ನಮ್ಮ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ’ ಎನ್ನುತ್ತಾರೆ ಅವರು.

‘ಗ್ರಾಹಕರನ್ನು ಸೆಳೆಯಲು ಪಟಾಕಿ ತಯಾರಿಕಾ ಕಂಪೆನಿಗಳು ವಿವಿಧ ಹೆಸರಿನ ಪಟಾಕಿಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಈ ಬಾರಿ ಮಕ್ಕಳಿಗೆ ಇಷ್ಟವಾಗುವ ಟಾಮ್‌ ಅಂಡ್ ಜೆರ್ರಿ, ನಾಸಾ ರಾಕೆಟ್, ಫೇಸ್‌ಬುಕ್‌ ಹೆಸರಿನ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇನ್ನು ಮಾರ್ಚ್, ನವೆಂಬರ್ ತಿಂಗಳ ಹೆಸರಿನ ಪಟಾಕಿಗಳು ಕೂಡ ಜನರ ಗಮನ ಸೆಳೆಯುತ್ತಿವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.