ADVERTISEMENT

ಪಾಳು ಬಿದ್ದ ಎಂಟು ವಿದ್ಯಾರ್ಥಿ ನಿಲಯಗಳು!

ಜಿಲ್ಲೆಯಲ್ಲಿ ಉದ್ಘಾಟನೆಗೊಂಡರೂ ಈವರೆಗೆ ಬಾಗಿಲು ತೆರೆಯದ ಕಟ್ಟಡಗಳು

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 11:47 IST
Last Updated 13 ಜೂನ್ 2018, 11:47 IST
ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಆವರಣದಲ್ಲಿರುವ ವಿದ್ಯಾರ್ಥಿ ನಿಲಯ
ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಆವರಣದಲ್ಲಿರುವ ವಿದ್ಯಾರ್ಥಿ ನಿಲಯ   

ಕಾರವಾರ: ಕಾಲೇಜು ಶಿಕ್ಷಣ ಇಲಾಖೆಯಿಂದ 2016ರಲ್ಲಿ ಉದ್ಘಾಟನೆಗೊಂಡಿರುವ ಜಿಲ್ಲೆಯ ಎಂಟು ವಿದ್ಯಾರ್ಥಿ ನಿಲಯಗಳಿಗೆ ಈವರೆಗೂ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಿಲ್ಲ.

ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಹಾಗೂ ಬುಡಕಟ್ಟು ವಿಶೇಷ ಘಟಕ ಯೋಜನೆ (ಟಿಎಸ್‌ಪಿ) ಅಡಿಯಲ್ಲಿ ಈ ಕಟ್ಟಡಗಳು ನಿರ್ಮಾಣವಾಗಿವೆ. ಕಾರವಾರ, ಹೊನ್ನಾವರ, ಭಟ್ಕಳ, ಅಂಕೋಲಾ, ಮುಂಡಗೋಡ, ಶಿರಸಿ, ಹಳಿಯಾಳ, ಸಿದ್ದಾಪುರ ತಾಲ್ಲೂಕುಗಳಲ್ಲಿ ಈಗಾಗಲೇ ಉದ್ಘಾಟನೆಯಾಗಿವೆ. ಆದರೆ, ಈವರೆಗೂ ಮೂಲಸೌಕರ್ಯ ಕಲ್ಪಿಸದ ಕಾರಣ ಅವು ಪಾಳು ಬಿದ್ದಿವೆ.

ದೂರದೂರಿನಿಂದ ಬರುವ ವಿದ್ಯಾರ್ಥಿಗಳಿಗೆ ಕಾಲೇಜುಗಳಿಗೆ ದಾಖಲಾತಿ ನೀಡಲೂ ಪ್ರಾಂಶುಪಾಲರು ಹಿಂಜರಿಯುವ ಸ್ಥಿತಿ ಇದರಿಂದ ನಿರ್ಮಾಣವಾಗಿದೆ. ಇತ್ತ ಇಲಾಖೆ ಕೂಡ ಈ ಬಗ್ಗೆ ಗಮನ ಹರಿಸದಿರುವುದು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ADVERTISEMENT

‘ಪೀಠೋಪಕರಣ ಪೂರೈ ಕೆಯೂ ಆಗಿಲ್ಲ’:  ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ನಿಲಯದ ಕಟ್ಟಡವು ₹ 1.13 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿದೆ. ‘ಸುಮಾರು 48 ವಿದ್ಯಾರ್ಥಿಗಳು ಇರಬಹುದಾದ ಈ ಕಟ್ಟಡಕ್ಕೆ, ಸಿಬ್ಬಂದಿ ನೇಮಕ ಆಗಿಲ್ಲ. ಪೀಠೋಪಕರಣದ ಪೂರೈಕೆಯೂ ಆಗಿಲ್ಲ. ಈ ಬಗ್ಗೆ ಈಗಾಗಲೇ ಹಲವು ಬಾರಿ ಕಾಲೇಜು ಶಿಕ್ಷಣ ಇಲಾಖೆಯ ಗಮನಕ್ಕೆ ತರಲಾಗಿದೆ’ ಎನ್ನುತ್ತಾರೆ ಪ್ರಾಂಶುಪಾಲರಾದ ಕಲ್ಪನಾ ಕೆರವಡಿಕರ್.

‘ರಾಜ್ಯದಾದ್ಯಂತ ಇದೇ ಸಮಸ್ಯೆ’: ‘ರಾಜ್ಯದ ವಿವಿಧೆಡೆಯ ವಿದ್ಯಾರ್ಥಿ ನಿಲಯಗಳಲ್ಲೂ ಇದೇ ಸಮಸ್ಯೆ ಇದೆ. ಅನೇಕ ಕಡೆಗಳಲ್ಲಿ ಕಟ್ಟಡಗಳು ಪೂರ್ಣಗೊಂಡಿದ್ದು, ಇನ್ನು ಕೆಲವೆಡೆ ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ. ಆದರೆ, ನಿಲಯಗಳ ಕುರಿತಾಗಿ ಇಲಾಖೆಯ ಮುಖ್ಯ ಕಚೇರಿಯು ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಲ್ಲಿಂದಲೇ ಎಲ್ಲವೂ ಆಗಬೇಕಿದೆ’ ಎನ್ನುತ್ತಾರೆ ಕಾಲೇಜು ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಜಂಟಿ ನಿರ್ದೇಶಕ ಪ್ರೊ.ನಿಡವಾನಿ ಡಿ.ಎಂ.

‘ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ’:  ‘ಈಗೆಲ್ಲ ಹೆಚ್ಚಾಗಿ ವಿದ್ಯಾರ್ಥಿಗಳು ಬಸ್‌ ಪಾಸ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಜತೆಗೆ, ವಿವಿಧ ಇಲಾಖೆಗಳ ವಸತಿ ನಿಲಯಗಳೂ ವಿದ್ಯಾರ್ಥಿಗಳಿಗೆ ಈಗ ಲಭ್ಯವಿರುತ್ತದೆ. ಹೀಗಾಗಿ ಇಲಾಖೆಯ ನಿಲಯಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದರೆ ನಿರ್ವಹಣೆ ಸಮಸ್ಯೆ ಆಗಬಹುದು ಎನ್ನುವುದೂ ಒಂದು ಕಾರಣ ಇರಬಹುದು. ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರಿಗೆ ಮುಖ್ಯ ಕಚೇರಿಗೆ ಮಾಹಿತಿಗಳನ್ನು ರವಾನಿಸಲು ಸೂಚಿಸುತ್ತೇನೆ’ ಎಂದು ಅವರು ತಿಳಿಸಿದರು.

ವಿದ್ಯಾರ್ಥಿ ನಿಲಯ ಕುರಿತಾಗಿ ಮುಖ್ಯ ಕಚೇರಿಯಿಂದ ನಮಗೆ ಯಾವುದೇ ಸೂಚನೆಗಳು ಬಂದಿಲ್ಲ. ಅವರೇ ಕಟ್ಟಡಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ
ಪ್ರೊ.ನಿಡವಾನಿ ಡಿ.ಎಂ, ಕಾಲೇಜು ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಜಂಟಿ ನಿರ್ದೇಶಕರು 

ದೇವರಾಜ ನಾಯ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.