ADVERTISEMENT

ಪಿ.ಎಂ. ಪ್ರೌಢಶಾಲೆ ವಜ್ರ ಮಹೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 6:59 IST
Last Updated 3 ಆಗಸ್ಟ್ 2013, 6:59 IST

ಅಂಕೋಲಾ: ಕೆನರಾ ವೆಲ್‌ಫೇರ್ ಟ್ರಸ್ಟ್‌ನ ಪಿ.ಎಂ. ಪ್ರೌಢಶಾಲೆಯು ವಜ್ರಮಹೋತ್ಸವ ಸಂಭ್ರಮದಲ್ಲಿದೆ. ಇದೇ 3ರಂದು ವಜ್ರಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಡಾ. ದಿನಕರ ದೇಸಾಯಿ ಅವರು ಶಿಕ್ಷಣಕ್ಕೆ ಮಹತ್ವ ನೀಡುವ ಉದ್ದೇಶದಿಂದ 1953ರಲ್ಲಿ ಪ್ರೌಢಶಾಲೆ ಆರಂಭಿಸಿದರು. ಶಾಲೆಯು ಹಂತ ಹಂತವಾಗಿ ಬೆಳೆದು ಇದೀಗ 60 ವರ್ಷ ಪೂರೈಸಿದೆ.

ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣ, ಎನ್.ಸಿ.ಸಿ. ತರಬೇತಿ, ಎಲ್‌ಸಿಡಿ ಮೂಲಕ ಬೋಧನೆ, ಸಂಚಯಿಕಾ ಬ್ಯಾಂಕ್, ಬಡ ಮಕ್ಕಳ ಕಲ್ಯಾಣ ನಿಧಿ ಹೀಗೆ ವಿಶಿಷ್ಟ ರೀತಿಯಿಂದ ಗುರುತಿಸಿಕೊಂಡಿದೆ. ವಜ್ರಮಹೋತ್ಸವದ ಹಿನ್ನೆಲೆಯಲ್ಲಿ ಶಾಲೆಯು ವರ್ಷವಿಡಿ ಕಾರ್ಯಕ್ರಮಗಳನ್ನು ಸಂಘಟಿಸಿದೆ. ವಜ್ರ ಮಹೋತ್ಸವ ಜಾಗೃತಿ ಮೂಡಿಸಲು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಹಳೆಯ ವಿದ್ಯಾರ್ಥಿಗಳ ಸಮ್ಮೇಳನ, ಜಾನಪದ ನೃತ್ಯೋತ್ಸವ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಶಾಲಾ ಆವರಣದಲ್ಲಿ ಬೆಳಿಗ್ಗೆ 11 ಗಂಟೆಗೆ ಶಾಸಕ ಸತೀಶ ಸೈಲ್ ಉದ್ಘಾಟಿಸಲಿದ್ದಾರೆ. ಕೆನರಾ ವೆಲ್‌ಫೆರ್ ಟ್ರಸ್ಟ್ ಅಧ್ಯಕ್ಷ ಎಸ್.ಪಿ. ಕಾಮತ ಅಧ್ಯಕ್ಷತೆ ವಹಿಸಲಿದ್ದಾರೆ. ಆಡಳಿತಾಧಿಕಾರಿ ಕೆ.ವಿ. ಶೆಟ್ಟಿ, ಡಿಡಿಪಿಐ ಎಂ. ರೇವಣಸಿದ್ದಪ್ಪ, ಸಾಹಿತಿ ವಿಷ್ಣು ನಾಯ್ಕ ಭಾಗವಹಿಸುವರು. ಶಾಲೆಯ ಪ್ರಥಮ ವರ್ಷದ ವಿದ್ಯಾರ್ಥಿನಿ ಹಾಗೂ ನಿವೃತ್ತ ಮುಖ್ಯಾಧ್ಯಾಪಕಿ ಶಿರಕುಳಿಯ ಸುಶೀಲಾ ಲಕ್ಷ್ಮಣ ನಾಯ್ಕ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಸಮಿತಿಯ ಅಧ್ಯಕ್ಷ ರವೀಂದ್ರ ಕೇಣಿ, ಉಪಾಧ್ಯಕ್ಷ ಪಿ.ಪಿ. ಮಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.