ಕಾರವಾರ: ಪ್ರವಾಸೋದ್ಯಮ ಇಲಾಖೆ ಜಾರಿಗೆ ತಂದಿರುವ ‘ಟೂರಿಸ್ಟ್ ಮಿತ್ರ’ ಸೇವಾ ಸೌಲಭ್ಯವು ಪ್ರವಾಸಿ ಸ್ನೇಹಿಯಾಗಿದ್ದು, ಯೋಜನೆಯಲ್ಲಿ ನೇಮಕಗೊಂಡ ಸಿಬ್ಬಂದಿ ನಿಸರ್ಗ ತಾಣಗಳ ಬಗ್ಗೆ ಅಗತ್ಯ ಮಾಹಿತಿ ನೀಡುವ ಮೂಲಕ ಪ್ರವಾಸಿಗರಿಗೆ ನೆರವಾಗುತ್ತಿದ್ದಾರೆ.
ಪ್ರವಾಸಿ ತಾಣಗಳ ನೆಲೆಬೀಡು ಎನಿಸಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ರೀತಿಯ ಪ್ರವಾಸೋದ್ಯಮಕ್ಕೆ ಅವಕಾಶಗಳಿವೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ನೂರಾರು ಜಲಪಾತಗಳು, ಕರಾವಳಿಯಲ್ಲಿನ ಕಡಲ ಕಿನಾರೆಗಳು, ಕಾಳಿ ನದಿಯಲ್ಲಿನ ರೀವರ್ ರ್‍್ಯಾಫ್ಟಿಂಗ್, ಅರಣ್ಯ ಪ್ರದೇಶದಲ್ಲಿನ ಸಫಾರಿ, ಚಾರಣ ಹಾಗೂ ಧಾರ್ಮಿಕ ಕ್ಷೇತ್ರಗಳು ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ.
ಮಾಹಿತಿ ಕೊರತೆಯಿಂದ ಕೆಲ ಸಂದರ್ಭಗಳಲ್ಲಿ ಪ್ರವಾಸಿಗರು ತೊಂದರೆಗೆ ಸಿಲುಕುವಂತಹ ಸನ್ನಿವೇಶಗಳು ಎದುರಾಗುತ್ತಿದ್ದವು. ಇದನ್ನು ತಪ್ಪಿಸಲು ಸರ್ಕಾರ ಟೂರಿಸ್ಟ್ ಮಿತ್ರ ಎನ್ನುವ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ರಾಜ್ಯದ 13 ಜಿಲ್ಲೆಗಳಲ್ಲಿ 174 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೃಹರಕ್ಷಕ ದಳದಿಂದ ಇವರಿಗೆ ತರಬೇತಿ ನೀಡಲಾಗಿದೆ. ದಿನಗೂಲಿ ಲೆಕ್ಕದಲ್ಲಿ ನೇಮಕ ಮಾಡಿಕೊಂಡಿದ್ದು, ದಿನಕ್ಕೆ ₹ 325 ನೀಡಲಾಗುತ್ತದೆ. ಕರ್ತವ್ಯಕ್ಕೆ ಗೈರಾಗದೇ ಕಾರ್ಯ ನಿರ್ವಹಿಸಿದರೆ ದೋಬಿ ಭತ್ಯೆ ₹ 20 ನೀಡಲಾಗುತ್ತದೆ.
ಜಿಲ್ಲೆಯಲ್ಲಿ 10 ಮಂದಿಯ ನೇಮಕ
ಜಿಲ್ಲೆಯ ಮುರ್ಡೇಶ್ವರ ಕಡಲತೀರ, ಗೋಕರ್ಣ ಕಡಲತೀರ, ಓಂ ಬೀಚ್, ರವೀಂದ್ರನಾಥ ಟ್ಯಾಗೋರ್ ಕಡಲ ತೀರ, ದಾಂಡೇಲಿಯ ಮೌಳಂಗಿ ಇಕೊ ಪಾರ್ಕ್‌ನಲ್ಲಿ ತಲಾ ಇಬ್ಬರು ಹಾಗೂ ಕುಮಟಾ ತಾಲ್ಲೂಕಿನ ಪ್ರವಾಸಿ ತಾಣ ಯಾಣದಲ್ಲಿ ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದು, ಒಟ್ಟು 10 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಖಾಕಿ ಸಮವಸ್ತ್ರ ಹಾಗೂ ನೀಲಿ ವರ್ಣದ ಜಾಕೆಟ್ ನೀಡಲಾಗಿದೆ.
ಟೂರಿಸ್ಟ್ ಮಿತ್ರನ ಕಾರ್ಯವೇನು?: ಈ ಯೋಜನೆಯಲ್ಲಿ ನೇಮಕಗೊಂಡ ಸಿಬ್ಬಂದಿ ಆಯಾ ತಾಣಗಳ ನಿರ್ದಿಷ್ಟ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಾರೆ. ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಹಾಗೂ ಪ್ರವಾಸಿ ತಾಣದಲ್ಲಿ ಸ್ವಚ್ಛತೆ ಕಾಪಾಡಲು ತಿಳಿ ಹೇಳುತ್ತಾರೆ. ಅಲ್ಲದೇ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಒದಗಿಸಲಿ ದ್ದಾರೆ. ಅಪಾಯಕ್ಕೆ ಸಿಲುಕಿದ ಪ್ರವಾಸಿಗರ ರಕ್ಷಣೆಗೂ ಅವರು ಮುಂದಾಗಲಿದ್ದಾರೆ.
‘ಪ್ರವಾಸರಿಗರ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ‘ಟೂರಿಸ್ಟ್ ಮಿತ್ರ’ನನ್ನು ನೇಮಕ ಮಾಡಲಾಗಿದೆ. ಇವರಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತಂತೆ ಕಿರುಹೊತ್ತಿಗೆಯನ್ನು ನೀಡಲಾಗಿದ್ದು, ಅದರ ನೆರವಿನಿಂದ ಪ್ರವಾಸಿಗರಿಗೆ ಮಾಹಿತಿ ನೀಡುತ್ತಾರೆ. ಒಟ್ಟಿನಲ್ಲಿ ಅವರು ಪ್ರವಾಸಿಸ್ನೇಹಿಯಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮೋತಿಲಾಲ್ ಲಮಾಣಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಬರುವ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ಒದಗಿಸುತ್ತಿದ್ದೇನೆ. ಅವರು ನೀರಿಗಿಳಿಯುವ ಸಂದರ್ಭದಲ್ಲಿ ಆಳ ಇರುವ ಕಡೆ ಹೋಗದಂತೆ, ಸುತ್ತಲಿನ ಪ್ರದೇಶದಲ್ಲಿ ಪ್ಲಾಸ್ಟಿಕ್ ಎಸೆಯದಂತೆ, ಮದ್ಯಪಾನ ಸೇವನೆ ಮಾಡದಂತೆ ಅವರಿಗೆ ತಿಳಿ ಹೇಳುತ್ತೇನೆ. ಬೆಳಿಗ್ಗೆ 6ರಿಂದ 10, ಸಂಜೆ 4ರಿಂದ 8 ಗಂಟೆವರೆಗೆ ಒಟ್ಟು ಎಂಟು ತಾಸುಗಳ ಕಾಲ ಕಾರ್ಯನಿರ್ವಹಿಸು ತ್ತೇನೆ’ ಎನ್ನುತ್ತಾರೆ ಟೂರಿಸ್ಟ್ ಮಿತ್ರ ಸಿಬ್ಬಂದಿ ರಾಘವೇಂದ್ರ.
ಅಪಾಯಕ್ಕೆ ಸಿಲುಕಿದ ಪ್ರವಾಸಿಗರ ರಕ್ಷಣೆಗಾಗಿ ನಮಗೆ ಇನ್ನೂ ಅಗತ್ಯ ಸಲಕರಣೆಗಳನ್ನು ನೀಡಿಲ್ಲ. ಅಂತಹ ಸಂದರ್ಭಗಳಲ್ಲಿ ಅಧಿಕಾರಿಗಳ ಗಮನಕ್ಕೆ ತರಲಾಗುವುದು
– ರಾಘವೇಂದ್ರ,
ಟೂರಿಸ್ಟ್ ಮಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.