ADVERTISEMENT

ಪ್ರವಾಸಿಗರ ಸ್ವರ್ಗ.... `ವನಭೋಜನ' ಜಲಪಾತ

ಜಿ.ಡಿ.ಪಾಲೇಕರ
Published 14 ಜುಲೈ 2013, 7:18 IST
Last Updated 14 ಜುಲೈ 2013, 7:18 IST
ವೈಯ್ಯಾರದಿಂದ ಧುಮ್ಮಿಕುತ್ತಿರುವ ಕಾರವಾರದ ಕಿನ್ನರ ಗ್ರಾಮದಲ್ಲಿನ `ವನಭೋಜನ' ಜಲಪಾತ
ವೈಯ್ಯಾರದಿಂದ ಧುಮ್ಮಿಕುತ್ತಿರುವ ಕಾರವಾರದ ಕಿನ್ನರ ಗ್ರಾಮದಲ್ಲಿನ `ವನಭೋಜನ' ಜಲಪಾತ   

ಮಳೆಗಾಲದ ಅವಧಿಯಲ್ಲಿ ಎತ್ತಲೂ ಹಸಿರು ವನರಾಶಿಯಿಂದ ಕೆಳಗಡೆ ಧುಮ್ಮಿಕುವ ಅನೇಕ ಜಲಪಾತಗಳು ಕಾರವಾರ ತಾಲೂಕಿನಲ್ಲಿ ಹಾಲ್ನೊರೆಯಂತೆ ಗೋಚರಿಸುತ್ತವೆ. ಇವುಗಳಲ್ಲಿ `ವನಭೋಜನ ಫಾಲ್ಸ್' ಕೂಡ ಒಂದು.

ಕಾರವಾರದಿಂದ ಕೈಗಾ ಮಾರ್ಗವಾಗಿ 12 ಕಿ.ಮೀ. ಸಾಗಿದಾಗ ಕಿನ್ನರ ಗ್ರಾಮದಲ್ಲಿ ಬೆಟ್ಟದ ಬದಿಗೆ ಎತ್ತರ ಗುಡ್ಡದ ಬಳಿ ಈ ಜಲಪಾತ ಸಿಗುತ್ತದೆ. ಇದು ನೋಡಲು ವಿಶಿಷ್ಟ ಮನಮೋಹಕ ಜಲಪಾತವಾಗಿದೆ. ಮುಖ್ಯರಸ್ತೆಯಿಂದ ಇಳಿದು ದಕ್ಷಿಣ ದಿಕ್ಕಿಗೆ ಕಾಲ್ನಡಿಗೆಯಲ್ಲಿ 10 ನಿಮಿಷ ಚಾರಣ ಮಾಡಿದರೆ ಜಲಪಾತದ ಸ್ಥಳಕ್ಕೆ ತಲುಪುತ್ತೇವೆ. ಇಲ್ಲಿನ ಜಲಧಾರೆಯ ನೋಟ ಮನಮೋಹಕವಾಗಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ವಿಶಾಲವಾದ ಬಂಡೆಯಿಂದ ಐದು ಕವಲುಗಳಾಗಿ ಸುಮಾರು ಐವತ್ತು ಅಡಿ ಎತ್ತರದಿಂದ ಕೆಳಗಡೆ ಧುಮುಕುವ ಜಲರಾಶಿಯ ನೋಟ ನಯನ ಮನೋಹರ. ಒನ್ನ ಎಂಬ ಹಳ್ಳ ಈ ಸುಂದರ ಜಲಪಾತ ನಿರ್ಮಿಸಿದ್ದು, ಬಳಕುತ್ತ ಧರೆಗಿಳಿಯುವ ಜಲಕನ್ಯೆಯರಂತೆ ತೋರುತ್ತದೆ. ಪ್ರತಿ ವರ್ಷ ನವಂಬರ್ ತಿಂಗಳಲ್ಲಿ ಜರುಗುವ ಗ್ರಾಮದೇವತೆಯ ಜಾತ್ರೆಯಲ್ಲಿ ದೇವರ ಪಲ್ಲಕ್ಕಿಯು ಇದೇ ಬಂಡೆಯ ಬಳಿ ಇಟ್ಟು ಪೂಜೆ ಪುನಸ್ಕಾರ ನೆರವೇರಿಸಲಾಗುತ್ತದೆ. ಅಲ್ಲದೇ ಇಲ್ಲಿ ವನಭೋಜನ ಜರುಗುತ್ತದೆ. ಹೀಗಾಗಿ ಈ ಜಲಪಾತವನ್ನು `ವನಭೋಜನ ಫಾಲ್ಸ್' ಎಂದು ಕರೆಯುತ್ತಾರೆ.

ಭಾನುವಾರ ಹಾಗೂ ರಜಾ ದಿನಗಳಲ್ಲಿ ಅನೇಕರು ಇಲ್ಲಿಗೆ ಪ್ರವಾಸ ಬರುತ್ತಾರೆ. ಈ ಜಲಪಾತದ ಮೇಲೆ ಸುಮಾರು 50 ಜನ ಕುಳಿತುಕೊಳ್ಳುವಷ್ಟು ವಿಶಾಲ ಬಂಡೆಯ ಹಾಸುವಿದ್ದು, ಇಲ್ಲಿಂದ ಜಲಪಾತದ ವೈಭವವನ್ನು ಹಾಗೂ ಹಸಿರು ಹೊಲ ಗದ್ದೆಗಳ ಸುಂದರ ದೃಶ್ಯಗಳನ್ನು ವೀಕ್ಷಿಸಬಹುದು. ಮುಂದೆ ಒನ್ನ ಹಳ್ಳ ಇಲ್ಲಿಂದ ಸುಮಾರು 3 ಕಿ.ಮೀ. ನಷ್ಟು ದೂರ ಹೊಲ ಗದ್ದೆಗಳ ಮೂಲಕ ಸಾಗುತ್ತಾ ಕಾಳಿನದಿಯನ್ನು ಸೇರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.