ಯಲ್ಲಾಪುರ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತಾಲ್ಲೂಕಿನ ಮಂಚಿಕೇರಿಯ ಸಮಾಜ ಮಂದಿರದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅರಣ್ಯ ಇಲಾಖೆ, ರಾಜರಾಜೇಶ್ವರಿ ವಿದ್ಯಾ ಸಂಸ್ಥೆ, ಕಂಪ್ಲಿ ಗ್ರಾಮ ಪಂಚಾಯ್ತಿ, ಹಾಸಣಗಿ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ ಸದಸ್ಯ ರಾಘವೇಂದ್ರ ಭಟ್ಟ ಮಾತನಾಡಿ, ಪಶ್ಚಿಮಘಟ್ಟ ಅರಣ್ಯ ಪ್ರದೇಶದ ನಿವಾಸಿಗಳಾದ ನಾವು ಅರಣ್ಯ ಸಂಪತ್ತಿನ ಸಂರಕ್ಷಣೆ ಕುರಿತಾಗಿ ಇನ್ನೂ ಹೆಚ್ಚಿನ ಕಾಳಜಿ ವಹಿಸುವ ಅವಶ್ಯಕತೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಟಿಎಂಎಸ್ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ ಮಾತನಾಡಿ, `ಶಾಲಾ ವಿದ್ಯಾರ್ಥಿಗಳು ಸಂಘ-ಸಂಸ್ಥೆಗಳ ಸದಸ್ಯರಾದಿಯಾಗಿ ಪ್ರತಿಯೊಬ್ಬರೂ ತಲಾ ಐದು ಗಿಡ ನೆಡುವ ಸಂಕಲ್ಪದೊಂದಿಗೆ ದಿಟ್ಟ ಹೆಜ್ಜೆ ಇಡಬೇಕು. ಅಲ್ಲದೇ ಆ ಗಿಡಗಳನ್ನು ಜೋಪಾನವಾಗಿ ನೋಡಿಕೊಳ್ಳಬೇಕು. ಅಲ್ಲದೇ ಅರಣ್ಯ ಸಂಪತ್ತು ಕಳ್ಳ ಸಾಗಾಣಿಕೆಯಾಗದಂತೆಯೂ ಸ್ಥಳೀಯ ಸಾರ್ವಜನಿಕರು ಎಚ್ಚರಿಕೆ ವಹಿಸಿ, ಅರಣ್ಯ ಇಲಾಖೆಯ ಜೊತೆಗೆ ಸಹಕರಿಸಬೇಕು' ಎಂದರು.
ಮಂಚಿಕೇರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸುಬ್ರಹ್ಮಣ್ಯ ಭಟ್ಟ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಅರಣ್ಯ ಸಂರಕ್ಷಣೆ ಮತ್ತು ಅದರ ಅಗತ್ಯ ಕುರಿತು ಉಪನ್ಯಾಸ ನೀಡಿದರು.ಅತಿಥಿಗಳಾಗಿ ಧ.ಗ್ರಾ.ಯೋ ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿಜಯಾ ಹೆಗಡೆ, ಮಂಚಿಕೇರಿ ವಲಯಾರಣ್ಯಾಧಿಕಾರಿ ಶ್ರಿನಿವಾಸ ಯರಡೋಣಿ, ಕಂಪ್ಲಿ ಗ್ರಾ.ಪಂ ಅಧ್ಯಕ್ಷೆ ನಾಗರತ್ನ ನಾಯ್ಕ, ಹಾಸಣಗಿ ಗ್ರಾ.ಪಂ ಸದಸ್ಯ ರಾಮಾ ಹೆಗಡೆ ಕಬ್ಬಿನಗದ್ದೆ, ರಾ.ರಾ ಪ್ರೌಢಶಾಲೆ ಮುಖ್ಯಾಧ್ಯಾಪಕ ಎಂ.ಸಿ. ಜಮಾದಾರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ಸುಮಾ ಆಚಾರಿ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಭಾಸ್ಕರ ನಿರೂಪಿಸಿದರು. ಉದಯಕುಮಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.