ADVERTISEMENT

ಬರವಣಿಗೆ ಸ್ವಾತಂತ್ರ್ಯ ಹರಣ: ವಿಷಾದ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 7:05 IST
Last Updated 17 ಮಾರ್ಚ್ 2011, 7:05 IST

ಶಿರಸಿ: ಬರಹಗಾರನದು ಹೋರಾಟ ಬದುಕಾಗಿದೆ. ಬರವಣಿಗೆಯ ಸ್ವಾತಂತ್ರ್ಯ ಉಳಿದುಕೊಂಡಿಲ್ಲ. ಹೀಗಾಗಿ ಬರಹಗಾರನಿಗೆ ಬರಹ ಒಂದು ಶಿಕ್ಷೆಯಾಗಿದೆ ಎಂದು ಹಿರಿಯ ಕವಿ ಗೋಪಾಲಕೃಷ್ಣ ಹೆಗಡೆ ಕೇರಿಮನೆ ವಿಷಾದಿಸಿದರು.ಇಲ್ಲಿನ ವನಿತಾ ಸಮಾಜದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವಿ-ಕಾವ್ಯ ಬಳಗ ನೀಡಿದ ವಾರ್ಷಿಕ ಪ್ರಶಸ್ತಿ ‘ಉಪಾಯನ’ ಸ್ವೀಕರಿಸಿ ಅವರು ಮಾತನಾಡಿದರು.

ಬರವಣಿಗೆ ಮುಂಚಿನ ಆಯಾಮದಲ್ಲಿ ಇಲ್ಲ. ಹಿಂದೆಲ್ಲ ಬರಹಗಳನ್ನು ಜನರು ಸಹೃದಯತೆಯಿಂದ ಸ್ವಾಗತಿಸುತ್ತಿದ್ದರು. ಇಂದು ಮನಸ್ಸಿಗೆ ತೋಚಿದ್ದು ಬರೆಯುವಂತಿಲ್ಲ. ಜನರ ಒಲವು- ನಿಲುವು ನೋಡಿ ಬರೆಯಬೇಕು. ಇಲ್ಲವಾದರೆ ಪ್ರತಿಭಟನೆ, ಚಳವಳಿಗಳು ನಡೆಯುತ್ತವೆ. ಇದು ಬರಹಗಾರನಿಗೆ ಶಿಕ್ಷೆಯಾಗಿದೆ ಎಂದರು.
 
‘ಸಾಹಿತ್ಯ ಕ್ಷೇತ್ರಕ್ಕೆ ಅಡಿ ಇಟ್ಟ ಮೇಲೆ ಹೊರ ಬರುವದು ಕಷ್ಟ. ಬರೆಯುವ ಬಯಕೆ ಬಂದಾಗ ಬರೆಯಲೇ ಬೇಕು. ಯಾಕಾಗಿ ಬರೆಯುತ್ತೇವೆಯೋ ಗೊತ್ತಿಲ್ಲ. ಸಾಹಿತ್ಯಕ್ಕೂ ರಾಜಕೀಯ ಸೇರಿದೆ. ಆದರೆ ಉತ್ತರ ಕನ್ನಡ ಜಿಲ್ಲೆ ಇದರಿಂದ ದೂರ ಇದೆ. ಜಿಲ್ಲೆಯಲ್ಲಿ ಪ್ರತಿಭಾವಂತರಿದ್ದರೂ ಗುರುತಿಸುವ ಕಾರ್ಯ ಆಗಿಲ್ಲ ಎಂದು ಅವರು ಹೇಳಿದರು. ಸಾಮಾಜಿಕ ಮುಖಂಡ ವಿ.ಎಸ್. ಸೋಂದೆ, ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ, ಸಾಹಿತಿ ಭಾಗೀರಥಿ ಹೆಗಡೆ ಉಪಸ್ಥಿತರಿದ್ದರು. ಎನ್.ಆರ್. ರೂಪಶ್ರೀ ನಿರೂಪಿಸಿದರು. ರಘುನಂದನ ಭಟ್ಟ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.