ADVERTISEMENT

ಬಸ್ ಡಿಪೊ ನಿರ್ಮಾಣ ಇನ್ನೂ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 4:30 IST
Last Updated 2 ಅಕ್ಟೋಬರ್ 2012, 4:30 IST

ಹೊನ್ನಾವರ: ತಾಲ್ಲೂಕಿನಲ್ಲಿ ಬಸ್ ಡಿಪೊ ಬೇಕೆನ್ನುವ ಬೇಡಿಕೆಗೆ ಹಲವಾರು ವರ್ಷಗಳಾಗಿವೆ. ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಭಾಷಣದ ಭರವಸೆಯಾಗಿ ಹಲವಾರು ವೇದಿಕೆಗಳಲ್ಲಿ ಈ ವಿಷಯ ಪ್ರತಿಧ್ವನಿಸಿದೆ. ಅದರೆ ತಾಲ್ಲೂಕಿನ ಪ್ರಯಾಣಿಕರ ಅಸಹಾಯಕತೆ ಮಾತ್ರ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.

755 ಚ.ಕಿ.ಮೀ. ಭೌಗೋಳಿಕ ವಿಸ್ತೀರ್ಣದೊಂದಿಗೆ ಜಿಲ್ಲೆಯ ದೊಡ್ಡ ತಾಲ್ಲೂಕುಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಕಾರಣವಾಗಿರುವ ತಾಲ್ಲೂಕಿನಲ್ಲಿ ಸಾರಿಗೆ ಕ್ಷೇತ್ರ ಮುಖ್ಯವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸೇವೆಯನ್ನವಲಂಬಿಸಿದೆ.  ಇದರ ಅವ್ಯವಸ್ಥೆ ಪ್ರತಿನಿತ್ಯ ಪ್ರಯಾಣಿಕರನ್ನು ಕಾಡುತ್ತಿದೆ. ತಾಲ್ಲೂಕಿಗೊಂದು ಬಸ್ ಡಿಪೊ ಇಲ್ಲ; ಹೆದ್ದಾರಿಯಿಂದ ದೂರದಲ್ಲಿರುವ ಮುಖ್ಯ ಬಸ್ ನಿಲ್ದಾಣ ಕಿರಿದಾಗಿದ್ದು ಅವ್ಯವಸ್ಥೆಯ ಆಗರವಾಗಿದೆ.

ತಾಲ್ಲೂಕಿನ ಕೇಂದ್ರ ಸ್ಥಾನದಿಂದ 144 ಸರತಿ ಬಸ್‌ಗಳನ್ನು ನಿತ್ಯ ವಿವಿಧ ಹಳ್ಳಿಗಳಿಗೆ ಬಿಡಲಾಗುವ ವೇಳಾಪಟ್ಟಿಯಿದೆಯಾದರೂ ಬಸ್‌ಗಳು ಅಗಾಗ ಕೆಟ್ಟು ಕೆಲವು ಸರತಿ ರದ್ದಾಗುವುದು ಸಾಮಾನ್ಯ ಸಂಗತಿಯಾಗಿದೆ. ಒಮ್ಮೆ ಒಂದು ಬಸ್ ಕೆಟ್ಟು ನಿಂತರೆ ಬದಲಿ ವ್ಯವಸ್ಥೆಗೆ ಕುಮಟಾದ ಡಿಪೊ ಅಧಿಕಾರಿಗಳ ಮರ್ಜಿಗೆ ಇಲ್ಲಿನ ನಿಲ್ದಾಣಾಧಿಕಾರಿಗಳು ಕಾಯಬೇಕು. ಬಸ್ ರದ್ದತಿಯ ಕಾರಣಕ್ಕಾಗಿ ಪ್ರಯಾಣಿಕರು ಹಾಗೂ ಕೆಳ ಹಂತದ ಅಧಿಕಾರಿಗಳ ನಡುವಿನ ಸಂಘರ್ಷ ನಿಲ್ದಾಣದಲ್ಲಿ ದಿನನಿತ್ಯ ಕಂಡು ಬರುವ ದೃಶ್ಯವಾಗಿದೆ.

ತಾಲ್ಲೂಕಿಗೆ ಅಗತ್ಯವಿರುವ ಬಸ್ ಡಿಪೊದ ಬಗ್ಗೆ ಇಲ್ಲಿನ ತಾಲ್ಲೂಕು ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಚರ್ಚೆಯಾಗಿ ಸಭೆಯ ನಡಾವಳಿಗಳಲ್ಲಿ ದಾಖಲಾಗಿದೆ.

ಬಸ್ ಡಿಪೊಗೆ ರಾಮತೀರ್ಥದಲ್ಲಿರುವ ಎಪಿಎಂಸಿ ಜಾಗ ನೀಡುವ ಪ್ರಸ್ತಾವವನ್ನು ತಹಶೀಲ್ದಾರರು ಇದರ ಆಡಳಿತಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ  ಮೇಲಾಧಿಕಾರಿಗಳಿಗೆ ಕಳಿಸಲಾಗಿತ್ತಾದರೂ ನಂತರ ಆಯ್ಕೆಯಾದ ಈಗಿನ ಎಪಿಎಂಸಿ ಸಮಿತಿ ಜಾಗ ಕೊಡುವ ಪ್ರಸ್ತಾವವನ್ನು ಅಲ್ಲಗಳೆದಿದೆ.

`ಕೃಷಿ ಮಾರುಕಟ್ಟೆ ಪ್ರಾಂಗಣದ ಉದ್ದೇಶಕ್ಕೆ ನಿಗದಿಪಡಿಸಿದ ಜಾಗವನ್ನು ಬಸ್ ಡಿಪೊಗೆ ನೀಡಲು ಕಾನೂನಿನಲ್ಲಿ ಆಸ್ಪದವಿಲ್ಲದ ಕಾರಣ ಈ ಕುರಿತಂತೆ ಮೇಲಧಿಕಾರಿಗಳಿಗೆ ಕಳಿಸಿದ್ದ ಪ್ರಸ್ತಾವ ತಿರಸ್ಕೃತವಾಗಿದೆ~ ಎಂದು ಎಪಿಎಂಸಿ ಕಾರ್ಯದರ್ಶಿ ಎಸ್.ಆರ್.ಗಾಂವ್ಕರ ತಿಳಿಸಿದರು.

ತಾಲ್ಲೂಕಿನ 75480 ಹೆಕ್ಟೇರ್ ಜಾಗದಲ್ಲಿ 57,632 ಹೆಕ್ಟೇರ್ ಜಾಗ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವುದರಿಂದ ಬಸ್ ಡಿಪೋ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಿರುವುದು ವಾಸ್ತವಿಕ ಸಂಗತಿ.

ಸಾರ್ವಜನಿಕ ಕೆಲಸಗಳಿಗೆ ಅರಣ್ಯ ಭೂಮಿಯನ್ನು ಮಂಜೂರಿ ಪಡೆಯಲು ಅಗತ್ಯವಾದ ವ್ಯವಸ್ಥಿತ ಕಾನೂನುಬದ್ಧ ಪ್ರಯತ್ನವನ್ನು ವೇದಿಕೆಯಿಂದ ಕೆಳಗಿಳಿದ ಮೇಲೆ ಜನಪ್ರತಿನಿಧಿಗಳು ನಡೆಸುತ್ತಿಲ್ಲಎಂಬುದು ಜನರ ಆರೋಪ.
ನೆರೆಯ ತಾಲ್ಲೂಕುಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ಜಾಗದಲ್ಲಿ ಬಸ್‌ಸ್ಟ್ಯಾಂಡ್ ಇದೆ; ಬಸ್ ಡಿಪೊ ಕೂಡ ಇದೆ. ಭಟ್ಕಳದಲ್ಲಿ ಈಗಿರುವ ಡಿಪೊವನ್ನು ಹೊಸ ವಿಸ್ತಾರವಾದ ಜಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಅಲ್ಲೆಲ್ಲ  ಸಾಧ್ಯವಾಗಿರುವುದು ಭಟ್ಕಳ ಹಾಗೂ ಕುಮಟಾ ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿರುವ ಹೊನ್ನಾವರ ತಾಲ್ಲೂಕಿಗೇಕೆ ಸಾಧ್ಯವಾಗುತ್ತಿಲ್ಲ  ಎಂಬುದು ಸಾರ್ವಜನಿಕರ  ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.