ADVERTISEMENT

ಬೆಳೆದವರಿಗೆ ಶ್ರಮ; ಲಾಭ ಇನ್ಯಾರಿಗೋ..

ಅಳ್ವೆಕೋಡಿ ಸಿಹಿ ಈರುಳ್ಳಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 6:45 IST
Last Updated 12 ಸೆಪ್ಟೆಂಬರ್ 2013, 6:45 IST

ಕುಮಟಾ: ಈರುಳ್ಳಿ ಬೆಲೆ ಗಗನಕ್ಕೇರಿ ಗ್ರಾಹಕರು ನಿಜಕ್ಕೂ ಕಣ್ಣೀರು ಹಾಕುವಂಥ ಇಂದಿನ ಪರಿಸ್ಥಿತಿಯಲ್ಲಿ ಕುಮಟಾ ತಾಲ್ಲೂಕಿನ ಅಳ್ವೆಕೋಡಿಯಲ್ಲಿ ಬೆಳೆಯುವ ಸಹಸ್ರ ಟನ್‌ಗಳಷ್ಟು ಸಿಹಿ ಈರುಳ್ಳಿ ಈಗ ನೆನಪಿಗೆ ಬರುತ್ತದೆ.

ಮಳೆಗಾಲದ ತೇವಾಂಶದ ಕಾರಣದಿಂದ ವರ್ಷವಿಡೀ ಸಂರಕ್ಷಿಸಿಡಲು ಸಾಧ್ಯವಿಲ್ಲ ಎನ್ನುವ ಒಂದೇ ಕಾರಣಕ್ಕೆ ಹೆದ್ದಾರಿ ಬದಿ ಇಟ್ಟು ಸಿಕ್ಕಿದಷ್ಟು ಬೆಲೆಗೆ ಮಾರಾಟವಾಗುವ ಈ ವಿಶಿಷ್ಟ ರುಚಿಯ ಈರುಳ್ಳಿಯನ್ನು ವ್ಯವಸ್ಥಿತವಾಗಿ ಸಂರಕ್ಷಿಸಿಡುವಂತಾಗಿದ್ದರೆ, ಇಂದಿನ ಬೆಲೆ ಏರಿಕೆಯ ಲಾಭ ಸ್ಥಳೀಯ ನೂರಾರು ಬೆಳೆಗಾರರಿಗೆ ಸಿಗುತ್ತಿತ್ತು.

ರಾಷ್ಟ್ರೀಯ ಹೆದ್ದಾರಿ ಬದಿಯ ಅಳ್ವೆಕೋಡಿ ಗ್ರಾಮದಲ್ಲಿ ಮಳೆಗಾಲದ ನಂತರ ಹಿಂಗಾರಿ ಬೆಳೆಯಾಗಿ ಬೆಳೆಯುವ ಸಿಹಿ ಈರುಳ್ಳಿಗೆ ಪ್ರತ್ಯೇಕ ಮಾರುಕಟ್ಟೆ ಎನ್ನುವುದು ಇಲ್ಲ. ಹೆದ್ದಾರಿ ಇಕ್ಕೆಲಗಳಲ್ಲಿ ಬೆಳೆದ ಈರುಳ್ಳಿಗೆ ಹೆದ್ದಾರಿ ಬದಿಯೇ ಮಾರುಕಟ್ಟೆಯಾಗಿದೆ. ಮಾರ್ಚ್ ತಿಂಗಳಲ್ಲಿ  ಕೊಯ್ಲು ಆರಂಭವಾಗುತ್ತಿದ್ದಂತೆಯೇ ಅದರ ಒಣಗಿದ ಎಲೆಯನ್ನೇ ಬಳಸಿ ಜಡೆಯಂತೆ ಹೆಣೆದು ಸುಂದರ ಗುಚ್ಚ ಕಟ್ಟಿ ಹೆದ್ದಾರಿಯಂಚಿಗೆ ಪೇರಿಸಿಡಲಾಗುತ್ತದೆ. ಕೆಲ ಗುಚ್ಚಗಳನ್ನು ನೇತು ಹಾಕಲಾಗುತ್ತದೆ. ಇದು ಹೆದ್ದಾರಿಯಲ್ಲಿ ಓಡಾಡುವ ವಾಹನ ಸವಾರನ್ನು ಸೆಳೆಯುತ್ತದೆ. ಹೀಗೆ ಅಳ್ವೆಕೋಡಿ ಸಿಹಿ ಈರುಳ್ಳಿಗೆ ತಾನಾಗಿಯೇ ಬರುವ ಬೇಡಿಕೆ ಹಾಗೂ ಅದರ ವಿಶಿಷ್ಟಯ ರುಚಿಯ ಸೆಳೆತದಿಂದ ಅದು ಗೋವಾ ರಾಜ್ಯ ಹಾಗೂ ಮಂಗಳೂರು ಮುಂತಾದಡೆ ಬಹು ಬೇಡಿಕೆಯ ಸರಕಾಗಿ ಹೆಸರು ಮಾಡಿದೆ.

ಈರುಳ್ಳಿ ಗಿಡ ನಾಟಿ ಮಾಡಿದಾಗಿನಿಂದ ಅದು ಬಲಿತು ಗಡ್ಡೆಗಟ್ಟುವರೆಗೂ ನಿತ್ಯ ಬೆಳಗಿನ ಜಾವ ಮೂರು ಗಂಟೆಗೆಲ್ಲ ಎಂದು ಸೊಂಟ ಬಗ್ಗಿಸಿ ಗಿಡಕ್ಕೆ ನೀರುಣಿಸುವ ಕಷ್ಟ ರೈತರಿಗೆ ಮಾತ್ರ ಗೊತ್ತಿರುತ್ತದೆ. ಹೀಗೆ ಬೆಳೆವ ಈರುಳ್ಳಿಗೆ ಹಾಕಿದ ಹಣ ಹಿಂತೆಗೆಯಲು ರೈತರು ಕಿಲೋಗೆ 15 ರೂಪಾಯಿ ಹಾಗೂ ಸಗಟಾಗಿ 13 ರೂಪಾಯಿನಂತೆ ಮಾರಾಟ ಮಾಡುತ್ತಾರೆ. ಹೆಚ್ಚಾಗಿ ಗೋವಾದ ಹೋಟೆಲ್‌ಗಳಲ್ಲಿ  ವರ್ಷವಿಡೀ ಸಲಾಡ್‌ಗೆ ಬಳಕೆಯಾಗುವ ಸಿಹಿ ಈರುಳ್ಳಿಯನ್ನು ಅಲ್ಲಿಯ ದೊಡ್ಡ ದೊಡ್ಡ ವ್ಯಾಪಾರಿಗಳು ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಲಾರಿಗಳಲ್ಲಿ ಖರೀದಿಸಿ ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಆದರೆ ಸ್ಥಳೀಯರು ಮಾತ್ರ ಮಳೆಗಾಲದಲ್ಲಿ ಉತ್ತರ ಕರ್ನಾಟಕ ಭಾಗದ ದುಬಾರಿ ಈರುಳ್ಳಿ ಖರೀದಿ ಮಾಡಬೇಕಾದ ಸ್ಥಿತಿ ಪ್ರತೀ ವರ್ಷ ಇದೆ.

ಈ ವರ್ಷ ಗಗನಕ್ಕೇರಿದ ಈರುಳ್ಳಿ ಬೆಲೆಯ ಲಾಭ ಸಿಗದೆ ರೈತರು  ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಇಲ್ಲಿಯ ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ದೂರದ ಇನ್ಯಾರೋ ಕಡಿಮೆ ಬೆಲೆಗೆ ಖರೀದಿಸಿ ಈಗ ಒಂದಕ್ಕೆ ಹತ್ತರಷ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಕುಮಟಾದಲ್ಲಿ  ರೈತರು ಅಥವಾ ಎಪಿಎಂಸಿ ಇರುಳ್ಳಿ ಕೆಡದಂತೆ ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳದಿರುವುದು. ತಾಲ್ಲೂಕಿನ ಸುಮಾರು ಸಾವಿರ ಎಕರೆ ಪ್ರದೇಶದಲ್ಲಿ ಅಳ್ವೆಕೋಡಿ ಗ್ರಾಮವೊಂದರಲ್ಲೇ ಸುಮಾರು 1,500 ಟನ್ ಈರುಳ್ಳಿ ಬೆಳೆದರೆ, ಸಮೀಪದ ವನ್ನಳ್ಳಿಯಲ್ಲಿ 1,000 ಟನ್ ಬೆಳೆಯಲಾಗುತ್ತದೆ. ಇವುಗಳಲ್ಲಿ ಶೇ 90 ಭಾಗ ಗೋವಾಕ್ಕೆ ರಫ್ತಾಗುತ್ತಿದ್ದು, ಉಳಿದ ಭಾಗ ಮಾತ್ರ ಸ್ಥಳೀಯವಾಗಿ ಬಳಕೆಯಾಗುತ್ತವೆ. ಸ್ಥಳೀಯರು ಮಳೆಗಾಲದಲ್ಲಿ ಈರುಳ್ಳಿ ಗುಚ್ಚವನ್ನು ಅಡುಗೆ ಮನೆಯ ಬೆಚ್ಚಗಿನ ಪ್ರದೇಶದಲ್ಲಿ ನೇತು ಹಾಕಿಟ್ಟುಕೊಂಡರೂ ಅದು ಅರ್ಧ ಮಳೆಗಾಲ ಕಳೆಯುವ ಮುನ್ನವೇ ಹಾಳಾಗಲಾರಂಭಿಸುತ್ತದೆ. ಮಳೆಗಾಲದಲ್ಲೂ ಈರುಳ್ಳಿ ಕೆಡದಂತೆ ಸಂರಕ್ಷಿಸಡಬಲ್ಲ ಸೌಲಭ್ಯ ಸ್ಥಳೀಯವಾಗಿ ಲಭ್ಯವಾದರೆ ಬೆಲೆ ಏರಿಕೆಯ ಲಾಭ ರೈತರಿಗೆ ದೊರೆಯುವ ಜೊತೆಗೆ  ಕರಾವಳಿ ಭಾಗದ ಜನರಿಗೆ ಕೊಂಚ ಕಡಿಮೆ ಬೆಲೆಯಲ್ಲಿ ಈರುಳ್ಳಿ ದೊರೆಯಲು ಸಾಧ್ಯವಿದೆ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.