ಕಾರವಾರ: ಇಲ್ಲಿಯ ಜಿಲ್ಲಾ ಆಸ್ಪತ್ರೆಯ ಶುಶ್ರೂಷಕಿಯೊಬ್ಬಳು ಕರ್ತವ್ಯ ನಿರ್ವಹಣೆಯಲ್ಲಿ ತೋರಿದ ನಿರ್ಲಕ್ಷ್ಯದಿಂದಾಗಿ ಬಾಲಕನೊಬ್ಬ ನೋವಿನ ನರಕಯಾತನೆ ಅನುಭವಿಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿಗೆ ಸಮೀಪದ ಬಿಣಗಾ ಸೀತಾ ನಗರದ ನಿವಾಸಿ, ಮೂಡಲಮಕ್ಕಿ ಸರ್ಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಸಂತೋಷ ಲಮಾಣಿ (12) ಎರಡು ತಿಂಗಳಿಂದ ನೋವಿನಲ್ಲೇ ದಿನ ಕಳೆಯುತ್ತಿದ್ದಾನೆ.
ಸಂತೋಷನಿಗೆ ಇಂಜೆಕ್ಷನ್ ತಂದಿಟ್ಟ ಯಾತನೆಯನ್ನು ಆತನ ಪಾಲಕರು `ಪ್ರಜಾವಾಣಿ~ ಎದುರು ವಿವರಿಸಿದ್ದು ಹೀಗೆ: ಜ್ವರ ಬಂದಿದೆ ಎಂದು ಸಂತೋಷನನ್ನು ಮಾ. 9ರಂದು ಇಲ್ಲಿಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈತನಿಗೆ ತಪಾಸಣೆ ನಡೆಸಿದ ವೈದ್ಯರು ಇಂಜೆಕ್ಷನ್ ನೀಡಲು ಸೂಚನೆ ನೀಡಿದರು.
ಇಂಜೆಕ್ಷನ್ ನೀಡುವಾಗ ನೋವು ಬರುವುದು ಸಾಮಾನ್ಯ. ಆದರೆ, ಬಾಲಕ ಸಂತೋಷನಿಗೆ ಇಂಜೆಕ್ಷನ್ ನೀಡಿದ ನಂತರ ಕಾಣಸಿಕೊಂಡ ನೋವು ಸಾಮಾನ್ಯವಾಗಿರಲಿಲ್ಲ. ವಿಪರೀತ ನೋವು ಬಂದು ಆತ ಒದ್ದಾಡತೊಡಗಿದ. ಒಂದು ಹೆಜ್ಜೆ ಇಡಲೂ ಆತನಿಗೆ ಸಾಧ್ಯವಾಗಿರಲಿಲ್ಲ. ಇಂಜೆಕ್ಷನ್ ನೀಡಿದ ನಂತರ ಈ ನೋವು ಬರುತ್ತದೆ ಎಂದು ಶುಶ್ರೂಷಕಿಯರು ಹೇಳಿದ್ದರಿಂದ ಮಗನನ್ನು ಮನೆಗೆ ಕರೆದುಕೊಂಡು ಬರಲಾಯಿತು.
ಮನೆಗೆ ಹೋದರೂ ನೋವು ಕಡಿಮೆ ಆಗದೆ ಸಂತೋಷ ಅಳಲಾರಂಭಿಸಿದ. ಅದೇದಿನ ರಾತ್ರಿ 10ಕ್ಕೆ ಮಗನನ್ನು ಪುನಃ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಈತನಿಗೆ ತಪಾಸಣೆ ನಡೆಸಿದ ವೈದ್ಯರು ನೋವು ಕಡಿಮೆ ಆಗುವುದಾಗಿ ಹೇಳಿದರು. ಆದರೆ, ಒಂದಲ್ಲ, ಎರಡಲ್ಲ ತಿಂಗಳು ಕಳೆದರೂ ನೋವು ಕಡಿಮೆ ಆಗಲಿಲ್ಲ.
ಶುಶ್ರೂಷಕಿ ನೀಡಿದ ಇಂಜೆಕ್ಷನ್ ನರಕ್ಕೆ ತಗುಲಿದ್ದರಿಂದ ಮಗನ ಬಲಗಾಲಿಗೆ ಸ್ಪರ್ಶ ಜ್ಞಾನವೇ ಇಲ್ಲ.
ಕೆಲವೊಮ್ಮೆ ಪಾದಕ್ಕೆ ವಿಪರೀತ ತುರಿಕೆ ಬಂದಂತಾಗುತ್ತದೆ. ಕಾಲಿನ ಬೆರಳುಗಳ ಮಧ್ಯದಲ್ಲಿ ಒಮ್ಮಮ್ಮೆ ನೋವು ಬರುತ್ತದೆ. ಸಾಮಾನ್ಯರಂತೆ ಹೆಜ್ಜೆ ಇಡಲೂ ಈತನಿಗೆ ಸಾಧ್ಯವಾಗುತ್ತಿಲ್ಲ.
ಪರೀಕ್ಷೆ ಬರೆಯಲಾಗಲಿಲ್ಲ: ಈ ತೊಂದರೆಯಿಂದಾಗಿ ಬಿಣಗಾದ ಮೂಡಲಮಕ್ಕಿ ಶಾಲೆಯಲ್ಲಿ ಓದುತ್ತಿರುವ ಸಂತೋಷನಿಗೆ ವಾರ್ಷಿಕ ಪರೀಕ್ಷೆಯ ಬರೆಯಲು ಸಾಧ್ಯವಾಗಲಿಲ್ಲ. ಶುಶ್ರೂಷಕಿ ಮಾಡಿದ ಸಣ್ಣ ತಪ್ಪಿನಿಂದಾಗಿ ಬಾಲಕ ಪುನಃ ಅದೇ ತರಗತಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸಬೇಕಾಗಿದೆ. ಕೂಲಿನಾಲಿ ಮಾಡಿ ಜೀವನ ನಡೆಸುತ್ತಿರುವ ಪಾಲಕರು ಮಗನ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ.
`ಎರಡು ತಿಂಗಳಿಂದ ಮಗ ನೋವಿನಿಂದ ಒದ್ದಾಡುತ್ತಿದ್ದಾನೆ. ರಾತ್ರಿ ನಿದ್ದೆ ಮಾಡಲು ಬಿಡುತ್ತಿಲ್ಲ. ಏನು ಮಾಡಬೇಕು ಎನ್ನುವುದೇ ತೋಚುತ್ತಿಲ್ಲ. ಮಗನ ಭವಿಷ್ಯದ ಚಿಂತೆ ನಮ್ಮನ್ನು ಕಾಡುತ್ತಿದೆ~ ಎನ್ನುತ್ತಾರೆ ತಾಯಿ ಶಾರದಾ ಲಮಾಣಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.