ADVERTISEMENT

ಭಿನ್ನಮತ ಶಮನಕ್ಕೆ ಎದುರು ನೋಡುತ್ತಿರುವ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 7:22 IST
Last Updated 15 ಮಾರ್ಚ್ 2018, 7:22 IST

ಮುಂಡಗೋಡ: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಆರಂಭವಾಗಿರುವ ‘ಕುಮಾರ ಪರ್ವ’ ಯಾತ್ರೆಯು ಇಂದು (ಮಾ.15) ಯಲ್ಲಾಪುರಕ್ಕೆ ಬರಲಿದೆ. ಕ್ಷೇತ್ರದ ಘೋಷಿತ ಅಭ್ಯರ್ಥಿ ವಿರುದ್ಧ ಜೆಡಿಎಸ್‌ನಲ್ಲಿ ಎದ್ದಿರುವ ಭಿನ್ನಮತ ಶಮನವಾಗಿ, ಅಂಥವರ ಮೇಲೆ ಕ್ರಮವಾದಿತೇ ಎಂದು ನಿಷ್ಠಾವಂತ ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ.

ಅರಣ್ಯ ಅತಿಕ್ರಮಣದಾರರ ಪರ ಹೋರಾಟಗಾರ ಎ.ರವೀಂದ್ರ ನಾಯ್ಕ ಅವರನ್ನು ಯಲ್ಲಾಪುರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಂದು ಪಕ್ಷ ಘೋಷಿಸಿದೆ. ಆದರೆ, ಮುಂಡಗೋಡ ಹಾಗೂ ಯಲ್ಲಾಪುರದಲ್ಲಿ ಕೆಲವು ಮುಖಂಡರು ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕು ಎನ್ನುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ. ತಾಲ್ಲೂಕಿನಲ್ಲಿ ಕೆಲವು ಮುಖಂಡರು ‘ಸಾಮೂಹಿಕ ರಾಜೀನಾಮೆ’ ಬೆದರಿಕೆಯನ್ನು ಸಹ ಹಾಕಿದ್ದರು.

‘ರಾಜಕಾರಣದಲ್ಲಿ ಬೆದರಿಸುವ ತಂತ್ರಗಾರಿಕೆ ಜೆಡಿಎಸ್‌ನಲ್ಲಿ ನಡೆಯುವುದಿಲ್ಲ’ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕುಟ್ರಿ ಎದುರೇಟು ನೀಡಿದ್ದರು.

ADVERTISEMENT

‘ಕುಮಾರ ಪರ್ವ ಯಾತ್ರೆಗೆ ತಾಲ್ಲೂಕಿನಿಂದ ಒಟ್ಟು 100ಕ್ಕೂ ಹೆಚ್ಚು ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 5000ಕ್ಕೂ ಅಧಿಕ ಕಾರ್ಯಕರ್ತರು ಇಲ್ಲಿಂದ ತೆರಳಲಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಕೆಲವರು ರಾಜೀನಾಮೆಯ ನಾಟಕ ಆಡುತ್ತಿದ್ದಾರೆ. ಗೊಂದಲ ಮೂಡಿಸುವ ಬದಲು, ರಾಜೀನಾಮೆ ಕೊಟ್ಟು ಹೋಗಿಬಿಡಬೇಕು. ಈ ಬಗ್ಗೆ ಕುಮಾರಸ್ವಾಮಿ ಅವರು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಮಲ್ಲಿಕಾರ್ಜುನ ಕುಟ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಷದ ತೀರ್ಮಾನಕ್ಕಿಂತ ದೊಡ್ಡವರು ಯಾರಿಲ್ಲ. ಮೊದಲಿಗೆ ಆಕಾಂಕ್ಷಿಗಳಿರುವುದು ಸಹಜ. ಅಭ್ಯರ್ಥಿಯನ್ನು ಘೋಷಿಸಿದ ನಂತರ ಅದಕ್ಕೆ ಕಾರ್ಯಕರ್ತರೆಲ್ಲರೂ ತಲೆಬಾಗಿ ಪಕ್ಷ ಸಂಘಟನೆಗೆ ಮುಂದಾಗಬೇಕು. ಈಗಾಗಲೇ ರವೀಂದ್ರ ನಾಯ್ಕ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಅಭ್ಯರ್ಥಿ ಬದಲಾವಣೆ ಪ್ರಶ್ನೆ ಉದ್ಭವಿಸುವುದಿಲ್ಲ’ ಎಂದುಯಲ್ಲಾಪುರ ಕ್ಷೇತ್ರಾಧ್ಯಕ್ಷ ಅರುಣ ಗೊಂದಳೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.