ADVERTISEMENT

`ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕ್ಷೀರಭಾಗ್ಯ ಯೋಜನೆ ಸಹಕಾರಿ'

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 7:06 IST
Last Updated 3 ಆಗಸ್ಟ್ 2013, 7:06 IST
ಸಿದ್ದಾಪುರ ತಾಲ್ಲೂಕಿನ ಕಾನಸೂರು ಶಾಲೆಯಲ್ಲಿ ವಿದ್ಯಾರ್ಥಿನಿಯರು ಹಾಲು ಕುಡಿದರು.
ಸಿದ್ದಾಪುರ ತಾಲ್ಲೂಕಿನ ಕಾನಸೂರು ಶಾಲೆಯಲ್ಲಿ ವಿದ್ಯಾರ್ಥಿನಿಯರು ಹಾಲು ಕುಡಿದರು.   

ಕುಮಟಾ: `ಕ್ಷೀರ ಭಾಗ್ಯ' ಸೇರಿದಂತೆ ಮಕ್ಕಳ  ಶೈಕ್ಷಣಿಕ ಅಭಿವೃದ್ಧಿಗಾಗಿ ಸರಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು  ಸಮುದಾಯದ ಯೋಜನೆಯಾಗಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲುವಲ್ಲಿ ಪಾಲಕರ ಸಹಕಾರ ಅಗತ್ಯ' ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭಾರತಿ ದೇವತೆ ತಿಳಿಸಿದರು.

ಇಲ್ಲಿಯ ನೆಲ್ಲಿಕೇರಿ ಶಾಸಕರ ಮಾದರಿ ಶಾಲೆಯಲ್ಲಿ ಗುರುವಾರ ನಡೆದ `ಕ್ಷೀರಭಾಗ್ಯ' ಯೋಜನೆ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿ.ಪಂ. ಸದಸ್ಯೆ ಮಹಾದೇವಿ ಗೌಡ, ಶಿಕ್ಷಕರ ಸಂಘದ ಅಧ್ಯಕ್ಷ ಆನಂದು ನಾಯಕ, ತಾ.ಪಂ. ಉಪಾಧ್ಯಕ್ಷೆ ಇಂದಿರಾ ಮುಕ್ರಿ, ಪುರಸಭೆ ಸದಸ್ಯ ವಿಶ್ವನಾಥ ನಾಯ್ಕ, ಅಧಿಕಾರಿಗಳಾದ ಗಣೇಶ ನಾಯ್ಕ, ಉದಯ ನಾಯ್ಕ, ಮುಖ್ಯ ಶಿಕ್ಷಕಿ ಮಂಗಲಾ ನಾಯಕ, ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಭಾರತಿ ನಾಯ್ಕ ಇದ್ದರು.

ತಾಲ್ಲೂಕಿನ ಹೆಗಡೆ ಗ್ರಾಮದ ಹೆಣ್ಣು ಮಕ್ಕಳ ಶಾಲೆಯಲ್ಲಿ ಗ್ರಾ.ಪಂ. ಸದಸ್ಯ ಎಂ.ಬಿ. ಹೆಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕ ಜೆ.ವಿ.ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ಶ್ಯಾಮಲಾ ಪಟಗಾರ ನಿರೂಪಿಸಿದರು.

ವಿವಿಧ ಶಾಲೆಗಳಲ್ಲಿ ಚಾಲನೆ
ಸಿದ್ದಾಪುರ:
ಶಾಲಾ ಮಕ್ಕಳಿಗೆ ಹಾಲು ನೀಡುವ ಸರ್ಕಾರದ `ಕ್ಷೀರಭಾಗ್ಯ' ಯೋಜನೆ ತಾಲ್ಲೂಕಿನ ಒಟ್ಟು 223 ಪ್ರಾಥಮಿಕ ಮತ್ತು 27 ಪ್ರೌಢಶಾಲೆಗಳಲ್ಲಿ ಗುರುವಾರ ಆರಂಭಗೊಂಡಿತು.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳೊಂದಿಗೆ, ತಾಲ್ಲೂಕಿನ  ಒಂದು ಅನುದಾನಿತ ಪ್ರಾಥಮಿಕ ಶಾಲೆ ಮತ್ತು 14 ಅನುದಾನಿತ ಪ್ರೌಢಶಾಲೆಗಳು  ಈ ಯೋಜನೆಯಲ್ಲಿ ಒಳಗೊಂಡಿವೆ. ಹಾಳದಕಟ್ಟಾದ ಸರ್ಕಾರಿ ಪ್ರೌಢಶಾಲೆಯಲ್ಲಿ  `ಕ್ಷೀರಭಾಗ್ಯ' ಯೋಜನೆಯ ಉದ್ಘಾಟನೆ ನಡೆಸಲಾಯಿತು.

ಜಿ.ಪಂ. ಸದಸ್ಯ ಈಶ್ವರ ನಾಯ್ಕ ಮನಮನೆ ಕಾರ್ಯಕ್ರಮ ಉದ್ಘಾಟಿಸಿದರು. ಬಿಇಒ ಬಿ.ವಿ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಅಣ್ಣಪ್ಪ ನಾಯ್ಕ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ಐ. ನಾಯ್ಕ ಮಾತನಾಡಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಜಿ. ಹೆಗಡೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿ ಎಂ.ಆರ್. ಭಟ್ಟ ಉಪಸ್ಥಿತರಿದ್ದರು.

ಅಪೂರ್ವಾ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಎಂ.ಎಸ್.ಭಟ್ಟ ವಂದಿಸಿದರು. ಸರಸ್ವತಿ ಅವಧಾನಿ ನಿರೂಪಿಸಿದರು.

ವಿವಿಧೆಡೆ ಕಾರ್ಯಕ್ರಮ: ಸರ್ಕಾರದ ಕ್ಷೀರ ಭಾಗ್ಯ ಯೋಜನೆಗೆ ತಾಲ್ಲೂಕಿನ ಕಾನಸೂರು ಕ್ಲಸ್ಟರ್ ಮಟ್ಟದ ವಿವಿಧ ಶಾಲೆಗಳಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಕಾನಸೂರಿನ ಶಾಲೆಯಲ್ಲಿ ತಾ.ಪಂ. ಸದಸ್ಯೆ ಪ್ರೇಮಾ ಹೆಗಡೆ, ಕಾಳಿಕಾ ಭವಾನಿ ಪ್ರೌಢಶಾಲೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಸುಮಾ ಗುಡಿಗಾರ  ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಎಂ.ಆರ್. ಶೇಷಗಿರಿ ಉಪಸ್ಥಿತರಿದ್ದರು.

ಗವಿನಗುಡ್ಡದ ಶಾಲೆಯಲ್ಲಿ ಎಸ್‌ಡಿಎಂಸಿ  ಅಧ್ಯಕ್ಷ ರಾಜೀವ್ ಟಿ. ನಾಯ್ಕ, ದೇವಿಸರ ಶಾಲೆಯಲ್ಲಿ ಗ್ರಾ.ಪಂ. ಸದಸ್ಯೆ ಸುವರ್ಣ ನಾಯ್ಕ, ಗಟ್ಟಿಕೈ ಶಾಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಮಂಜುನಾಥ ನಾಯ್ಕ, ಗಿರಗಡ್ಡೆ ಶಾಲೆಯಲ್ಲಿ ಗ್ರಾ.ಪಂ. ಸದಸ್ಯ ದಿವಾಕರ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು. 

ಕೊಳಗಿಜಡ್ಡಿ ಶಾಲೆಯಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಆಶಾ ಗೌಡ ಮತ್ತು ಗಾಳಿಜಡ್ಡಿ ಶಾಲೆಯಲ್ಲಿ ಗ್ರಾ.ಪಂ. ಸದಸ್ಯ ಅಶೋಕ ಹೆಗಡೆ,  ಹೂಕಾರಿನ  ಶಾಲೆಯಲ್ಲಿ ಜಿ.ಪಂ. ಸದಸ್ಯೆ ಶಾಲಿನಿ ಗೌಡರ್ ಕ್ಷೀರಭಾಗ್ಯ ಯೋಜನೆ ಉದ್ಘಾಟಿಸಿದರು.

`ಆರೋಗ್ಯ ಸುಧಾರಣೆಗೆ ಹಾಲು'
ಅಂಕೋಲಾ:
ಶಾಲಾ ವಿದ್ಯಾರ್ಥಿಗಳಿಗೆ ಹಾಲು ವಿತರಿಸುವ ರಾಜ್ಯ ಸರ್ಕಾರದ ಕಾರ್ಯಕ್ರಮಕ್ಕೆ ತಾಲ್ಲೂಕಿನ ಅವರ್ಸಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಶಾಸಕ ಸತೀಶ ಸೈಲ್ ಗುರುವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರ ಮಕ್ಕಳ ಆರೋಗ್ಯವನ್ನು ಸುಧಾರಿಸುವುದಕ್ಕಾಗಿ ಈ ಕಾರ್ಯಕ್ರಮವನ್ನು ರೂಪಿಸಿದೆ ಎಂದರು.

ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುಬ್ರಾಯ ಕಾಮತ, ಉಪ ಕಾರ್ಯದರ್ಶಿ ನಾಗೇಶ ರಾಯ್ಕರ, ತಾ.ಪಂ. ಅಧ್ಯಕ್ಷೆ ಮಂಜುಳಾ ವೆರ್ಣೇಕರ, ಶಿಕ್ಷಣಾಧಿಕಾರಿ ನಾಗರಾಜ ನಾಯಕ, ಜಿ.ಪಂ. ಸದಸ್ಯರಾದ ಉದಯ ನಾಯ್ಕ, ವಿನೋದ ನಾಯಕ, ಅವರ್ಸಾ ಗ್ರಾ.ಪಂ. ಅಧ್ಯಕ್ಷ ಮಾರುತಿ ನಾಯ್ಕ, ಹಾರವಾಡ ಗ್ರಾ.ಪಂ. ಅಧ್ಯಕ್ಷ ಉಮೇಶ ಕಾಂಚನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.