ADVERTISEMENT

ಮತದಾನಕ್ಕೂ ಮೊದಲೇ ಜೆಡಿಎಸ್‌ಗೆ ನಷ್ಟ

ಭಟ್ಕಳ: ಎಲ್ಲರಿಗಿಂತ ಮೊದಲು ಅಭ್ಯರ್ಥಿ ಘೋಷಣೆ ಮಾಡಿದ್ದ ಪಕ್ಷಕ್ಕೆ ಮುಜುಗರ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 11:53 IST
Last Updated 29 ಏಪ್ರಿಲ್ 2018, 11:53 IST

ಭಟ್ಕಳ: ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಎಲ್ಲರಿಗಿಂತ ಮೊದಲೇ ಜೆಡಿಎಸ್ ಪಕ್ಷವು ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು. ಆದರೆ, ಭಟ್ಕಳ ವಿಧಾನಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವ ಕಾರಣ ಆ ಪಕ್ಷ ಪೈಪೋಟಿ ಮಾಡದಂತಾಗಿದೆ.

ಘೋಷಿತ ಅಭ್ಯರ್ಥಿ ಎಸ್‌.ಎಂ.ಅಮ್ಜದ್‌ ಒತ್ತಡಕ್ಕೆ ಮಣಿದು ನಾಮಪತ್ರ ಹಿಂದಕ್ಕೆ ಪಡೆದುಕೊಂಡರು ಎಂಬುದು ಕಾರ್ಯಕರ್ತರ ವಲಯದಲ್ಲಿರುವ ಮಾತು. 2013ರ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಇನಾಯತ್ ಉಲ್ಲಾ ಶಾಬಂದ್ರಿ ಅವರನ್ನು ಜೆಡಿಎಸ್ ಪುನಃ ಅಭ್ಯರ್ಥಿಯೆಂದು ಘೋಷಿಸಿತ್ತು. ಅಲ್ಲದೇ ವಿಕಾಸಪರ್ವ ಯಾತ್ರೆಯೊಂದಿಗೆ ಭಟ್ಕಳಕ್ಕೆ ಬಂದಿದ್ದ ಕುಮಾರಸ್ಚಾಮಿ ಅಬ್ಬರದ ಪ್ರಚಾರವನ್ನೂ ನಡೆಸಿದ್ದರು.

ಪಟ್ಟಣದ ತಂಝೀಮ್‌ಗೆ ತೆರಳಿದ್ದ ಅವರು, ಕಳೆದ ಬಾರಿ ಆದ ತಪ್ಪು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದಾಗಿ ಹೇಳಿದ್ದರು. ಪಕ್ಷದ ಅಭ್ಯರ್ಥಿ ಶಾಬಂದ್ರಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿ ಕೊಂಡಿದ್ದರು. ಆದರೆ, ಸಂಸ್ಥೆಯು ಕಾಂಗ್ರೆಸ್ ಬೆಂಬಲಿಸಲು ಮುಂದಾಗಿದ್ದರಿಂದ ಅನಿ ವಾರ್ಯವಾಗಿ ಸ್ಪರ್ಧೆಯಿಂದ ಹಿಂದಕ್ಕೆ ಸರಿಯು ವುದಾಗಿ ಇನಾಯತ್ ಉಲ್ಲಾ ಶಾಬಂದ್ರಿ ಪಕ್ಷದ ವರಿಷ್ಠರಲ್ಲಿ ಹೇಳಿದ್ದರು.

ADVERTISEMENT

ಇದೇ ಸಂದರ್ಭದಲ್ಲಿ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಅವರು ಜೆಡಿಎಸ್‌ನಿಂದ ಸ್ಪರ್ಧಿಸಲು ಮುಂದೆ ಬಂದರು. ಆದರೆ, ಪಕ್ಷದ ಮುಖಂಡರು ಸರಿಯಾಗಿ ಸ್ಪಂದಿಸಲಿಲ್ಲ. ಇದರಿಂದ ಅವರೂ ಸ್ಪರ್ಧಿಸಲು ಹಿಂದೇಟು ಹಾಕಿದರು. ಕೊನೆಗೆ ಇನಾಯತ್ ಉಲ್ಲಾ ಶಾಬಂದ್ರಿ ಅವರ ಆಪ್ತ, ಪುರಸಭೆ ಮಾಜಿ ಸದಸ್ಯ ಎಸ್‌.ಎಂ.ಅಮ್ಜದ್ ಅವರನ್ನುಅಭ್ಯರ್ಥಿಯೆಂದು ಘೋಷಿಸಲಾಯಿತು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ನಾಯ್ಕ ಅವರು ಮುಂದೆ ನಿಂತು ನಾಮಪತ್ರವನ್ನು ಕೊಡಿಸಿ ಪಕ್ಷದ ಗೆಲುವಿಗಾಗಿ ಶ್ರಮಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಈ ಎಲ್ಲ ಬೆಳವಣಿಗೆಗಳ ಕೊನೆ ಗಳಿಗೆಯಲ್ಲಿ ಅಮ್ಜದ್ ನಾಮಪತ್ರವನ್ನು ಹಿಂದಕ್ಕೆ ಪಡೆದರು. ಇದರಿಂದ ಈಗ ಭಟ್ಕಳ ವಿಧಾನಸಭಾ ಕ್ಷೇತ್ರದ ಕಣದಲ್ಲಿ ಜೆಡಿಎಸ್ ಅಭ್ಯರ್ಥಿಯೇ ಇಲ್ಲದಂತಾಗಿದೆ.

ತಂಝೀಮ್‌ಗೆ ರಾಜೀನಾಮೆ: ‘ತಂಝೀಮ್ ಬೆಂಬಲ ನೀಡುತ್ತದೆ ಎಂಬ ವಿಶ್ವಾಸದಿಂದ ನಾನು ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ್ದೆ. ಆದರೆ,  ನಾಮಪತ್ರ ಸಲ್ಲಿಸಿದ ಬಳಿಕ ಹಿಂದಕ್ಕೆಪಡೆದುಕೊಳ್ಳಲು ಸಂಸ್ಥೆಯು ತೀವ್ರ ಒತ್ತಡ ಹೇರಿದ್ದರಿಂದ ಹಿಂಪಡೆಯಬೇಕಾಯಿತು’ ಎಂದು ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಮ್ಜದ್ ಹೇಳಿದರು.

‘ಇದರಿಂದ ಬೇಸರವಾಗಿ ತಂಝೀಮ್‌ ಸಂಸ್ಥೆಯ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಜೆಡಿಎಸ್ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಭಟ್ಕಳಕ್ಕೆ ಆಗಮಿಸಲಿದ್ದು, ಅವರೊಂದಿಗೆ ಚರ್ಚಿಸಿ ಯಾರನ್ನು ಬೆಂಬಲಿಸಬೇಕು ಎಂಬುದನ್ನು ನಿರ್ಧರಿಸುತ್ತೇನೆ’ ಎಂದರು.
**
2014ರ ನೆನಪು!

ಜೆಡಿಎಸ್‌ ಪಕ್ಷಕ್ಕೆ ಈ ರೀತಿ ಮುಜುಗರ ಆಗಿದ್ದು ಇದೇ ಮೊದಲಲ್ಲ. 2014ರ ಲೋಕಸಭಾ ಚುನಾವಣೆಗೆ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಮಾಜಿ ಸಚಿವ ಶಿವಾನಂದ ನಾಯ್ಕ ಕೊನೆ ಗಳಿಗೆಯಲ್ಲಿ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಂಡಿದ್ದರು.

– ರಾಘವೇಂದ್ರ ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.