ADVERTISEMENT

ಮಯೂರಿ ನೃತ್ಯ ಇಲ್ಲಿ ಮರೀಚಿಕೆ?

ನಾಗೇಂದ್ರ ಖಾರ್ವಿ
Published 17 ಅಕ್ಟೋಬರ್ 2011, 10:00 IST
Last Updated 17 ಅಕ್ಟೋಬರ್ 2011, 10:00 IST
ಮಯೂರಿ ನೃತ್ಯ ಇಲ್ಲಿ ಮರೀಚಿಕೆ?
ಮಯೂರಿ ನೃತ್ಯ ಇಲ್ಲಿ ಮರೀಚಿಕೆ?   

ಕಾರವಾರ: ಇಲ್ಲಿಯ ರವೀಂದ್ರನಾಥ ಟ್ಯಾಗೋರ ಕಡಲತೀರ ದಲ್ಲಿರುವ ಮತ್ಸ್ಯಸಂಗ್ರಹಾಲಯ, ಪುಟಾಣಿ ರೈಲು, ಯುದ್ಧನೌಕೆ ಮ್ಯೂಸಿಯಂ ಮತ್ತು `ಮಯೂರಿ~ ನೃತ್ಯ, ಸಂಗೀತ ಕಾರಂಜಿ ನಿರ್ವಹಣೆ ಸಮಸ್ಯೆಯಿಂದ ಶಾಶ್ವತವಾಗಿ ಮುಚ್ಚುವ ಹಂತಕ್ಕೆ ತಲುಪಿವೆ. ಹಣಕಾಸು ನಿರ್ವಹಣೆ ಯಲ್ಲಿ ಅವ್ಯವಹಾರ, ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಕಡಲತೀರದಲ್ಲಿರುವ ಪ್ರವಾಸಿ ಕೇಂದ್ರಗಳು ಒಂದೊಂದಾಗಿ ಮೂಲೆ ಸೇರುತ್ತಿವೆ.

ಟ್ಯಾಗೋರ ಕಡಲತೀರದಲ್ಲಿ 1998ರಲ್ಲಿ ಮಯೂರಿ ನೃತ್ಯ ಸಂಗೀತ ಕಾರಂಜಿ ಉದ್ಘಾಟನೆಗೊಂಡಿತು. ಅಂದಿನ ಅಬಕಾರಿ ಸಚಿವರೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಪಿ.ಎಸ್.ಜೈವಂತ್ ಕಾರಂಜಿಯನ್ನು ಉದ್ಘಾಟಿಸಿದ್ದರು. ಹಾಲಿ ಮೀನು ಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಅವರ ತಂದೆ ವಸಂತ ಅಸ್ನೋಟಿಕರ್ ಅಂದು ಶಾಸಕರಾಗಿದ್ದರು.

ಮಯೂರಿ ನೃತ್ಯ, ಸಂಗೀತ ಕಾರಂಜಿಯಲ್ಲಿ ನೀರು ಮತ್ತು ಸಂಗೀತದ ಜುಗಲ್‌ಬಂದಿ ನೋಡಿ ಜನ ಪುಳ ಕಿತಗೊಂಡರು. ರಾಷ್ಟ್ರೀಯ ಹೆದ್ದಾರಿ-17ಕ್ಕೆ ಅಂಟಿಕೊಂಡೇ ಕಾರಂಜಿ ಇರುವುದರಿಂದ ಪ್ರವಾಸಿ ಗರೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಿದ್ದರು.

ಸಂಗೀತದ ಲಯಕ್ಕೆ ತಕ್ಕಂತೆ ನೀರಿನ ನೃತ್ಯವನ್ನು ನೋಡಿ ಎಲ್ಲರೂ ಆನಂದ ಪಟ್ಟರು. ಆದರೆ ಈ ಆನಂದ ಬಹಳದಿನ ಉಳಿಯಲಿಲ್ಲ. ಸಮಸ್ಯೆಗಳು ಒಂದೊಂದಾಗಿ ಕಾಣಿಸಿಕೊಂಡು, ಅದು ಹೆಮ್ಮರವಾಗಿ ಸಂಗೀತ ಕಾರಂಜಿ ಈಗ ನೃತ್ಯ ಮಾಡುವುದನ್ನೇ ನಿಲ್ಲಿಸಿದೆ. ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವ ಸ್ಥಿತಿ ಯಲ್ಲಿ ನೃತ್ಯ, ಸಂಗೀತ ಕಾರಂಜಿಯಿದೆ.

ನೃತ್ಯ, ಸಂಗೀತ ಕಾರಂಜಿಯ ಸುತ್ತಲೂ ಗಿಡಕಂಟಿಗಳು ಬೆಳೆದಿವೆ. ಕಾರಂಜಿಗೆ ಅಳವಡಿಸಿರುವ ಬಣ್ಣದ ದೀಪಗಳು ಬಿದ್ದು ಹೋಗುವ ಸ್ಥಿತಿಯಲ್ಲಿವೆ. ಕಬ್ಬಿಣದ ಸಲಕರಣೆಗಳಿಗೆ ತುಕ್ಕು ಹಿಡಿದಿದೆ. ಕಾರಂಜಿ ನೀರು ಕಂದುಬಣ್ಣಕ್ಕೆ ತಿರುಗಿದ್ದು ಕಪ್ಪೆಗಳ ರಾಶಿಯೇ ಇದೆ. ಕುಳಿತು ಕೊಳ್ಳುವ ಸಿಮೆಂಟ್ ಆಸನಗಳ ಮೇಲೆ ಕಂಟಿ ಬೆಳೆದಿದೆ. ಒಟ್ಟಿನಲ್ಲಿ ನೃತ್ಯ, ಸಂಗೀತ ಕಾರಂಜಿ ಶಿಥಿಲಾವಸ್ಥೆಗೆ ತಲುಪಿದೆ.

ಜಿಲ್ಲಾ ಬಾಲಭವನ ಸಮಿತಿಗೆ ಸೇರಿದ ಪುಟಾಣಿ ರೈಲು, ಯುದ್ಧನೌಕೆ ಮ್ಯೂಸಿಯಂ, ನೃತ್ಯ, ಸಂಗೀತ ಕಾರಂಜಿಯ ನಿರ್ವಹಣೆಯಲ್ಲಿ ಆಗಿರುವ ನಿರ್ಲಕ್ಷ್ಯ ನೋಡಿದರೆ ಸಮಿತಿಗೇ ಗೃಹಣ ಹಿಡಿದಂತಿದೆ. ಟಿಕೆಟ್ ಮಾರಾಟದಿಂದ ಸಾವಿರಾರು ರೂಪಾಯಿ ಸಂಗ್ರಹವಾಗಿದ್ದರೂ ಸಮಿತಿ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವುದು ಮಾತ್ರ ವಿಪರ್ಯಾಸ.

ಎನ್‌ಪಿಸಿಐಎಲ್‌ನಿಂದ ದುರಸ್ತಿ: ನೃತ್ಯ, ಸಂಗೀತ ಕಾರಂಜಿ ದುರಸ್ತಿ ಮಾಡಲು ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಕೈಗಾ ಪರಮಾಣು ವಿದ್ಯುತ್ ಸ್ಥಾವರದ ಅಧಿಕಾರಿಗಳನ್ನು ಕೋರಿದ್ದಾರೆ. ಕೈಗಾದ ಎಂಜಿಯರ್‌ಗಳು ಆದಷ್ಟು ಬೇಗ ದುರಸ್ತಿ ಕೈಗೊಂಡರೆ ಮುಂದಿನ ತಿಂಗಳೊಳಗೆ ಕಾರಂಜಿಗೆ ಜೀವಕಳೆ ಬರಲಿದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಿತೇಂದ್ರನಾಥ.

ಕಡಲತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರ್ಕಾರ ಐದು ಕೋಟಿ ಅನುದಾನ ನೀಡಿದೆ. ಪ್ರವಾಸಿಗರಿಗೆ ಸೌಲಭ್ಯಗಳನ್ನು ಒದಗಿಸಬಹುದು. ಅವುಗಳ ನಿರ್ವಹಣೆಗೆ ಪ್ರತ್ಯೇಕ ಅನುದಾನ ಇಲ್ಲದಿರುವುದರಿಂದ ವಿವಿಧ ಇಲಾಖೆಗಳು ನಿರ್ವಹಣೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎನ್ನುವುದು ಜಿತೇಂದ್ರನಾಥ ಅವರ ಅಭಿಪ್ರಾಯ ವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.