ADVERTISEMENT

ಮಹಿಳೆ, ಅಂಗವಿಕಲರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 8:40 IST
Last Updated 12 ಫೆಬ್ರುವರಿ 2011, 8:40 IST

ಕಾರವಾರ: ಜಿಲ್ಲೆಯ ಸ್ತ್ರೀಶಕ್ತಿ ಗುಂಪುಗಳ ಹಾಗೂ ಅಂಗವಿಕಲರ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುವಂತ ನೂತನ ಮಾದರಿ ತರಬೇತಿ ಕಾರ್ಯಕ್ರಮಗಳನ್ನು ಎಸ್.ಜಿ.ಎಸ್.ವೈ ಯೋಜನೆಯಡಿ ಹಮ್ಮಿಕೊಳ್ಳಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಎಸ್.ಜಿ.ಎಸ್.ವೈ ಯೋಜನೆಯಡಿ ಗುಂಪುಗಳು ಸುತ್ತುನಿಧಿಯನ್ನು ಕೇವಲ ಆಂತರಿಕ ಸಾಲ ವಿತರಣೆಗೆ ಮಾತ್ರ ಸೀಮತಗೊಳಿಸದೇ ಆರ್ಥಿಕ ಅಭಿವೃದ್ಧಿ ಆಧಾರಿತ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದರು.ವಿವಿಧ ರಾಜ್ಯಗಳ ಮಾದರಿಯಲ್ಲಿ ಸ್ತ್ರೀಶಕ್ತಿಗುಂಪುಗಳು ಕೈಕೊಂಡ ಉತ್ತಮ ಯೋಜನಾ ಕಾರ್ಯಕ್ರಮಗಳನ್ನು ಹಾಗೂ ಅದಕ್ಕೆ ತಕ್ಕಂತಹ ಉನ್ನತ ಕೌಶಲ್ಯದ ತರಬೇತಿಗಳನ್ನು ಸಹ ಹಮ್ಮಿಕೊಳ್ಳುವಂತೆ ತಿಳಿಸಿದರು.

ರಾಷ್ಟ್ರೀಯ ತೋಟಗಾರಿಕಾ ಮಿಶನ್ ಯೋಜನೆಯಡಿ ಜಿಲ್ಲೆಯ ರೈತರಿಗೆ ಅನುಕೂಲವಾಗುವ ಅಡಿಕೆ, ಕೋಕೋ, ಮೆಣಸು ಹಾಗೂ ಜಾಜಿಕಾಯಿ ಸಸಿಗಳನ್ನು ವಿತರಿಸುವಂತೆ ಕ್ರಮ ಕೈಕೊಳ್ಳಲು ಹಾಗೂ ಯೋಜನೆ ಕುರಿತು ರೈತರಲ್ಲಿ ಹೆಚ್ಚಿನ ಪ್ರಚಾರ ಮೂಢಿ ಸುವಂತೆ ತೋಟಗಾರಿಕಾ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.

ಕರಾವಳಿಯಲ್ಲಿ ಉಪಯುಕ್ತ ಮೀನುಗಳನ್ನು ಬಳಸಿ ಉಳಿದ ಅನುಪಯುಕ್ತ ಮೀನುಗಳನ್ನು ಮೀನು ಆಹಾರ ಅಥವಾ ಗೊಬ್ಬರಕ್ಕೆ ಬಳಸಲು ವಿವಿಧ ರೀತಿಯ ತರಬೇತಿಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.

ಪ್ರಧಾನಮಂತ್ರಿ ಗ್ರಾಮ ಸಡಕ ಯೋಜನೆಯಡಿ ಉತ್ತರ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವಂತೆ ಹಾಗೂ ಅರಣ್ಯ ಇಲಾಖೆಯಿಂದಾಗಿ ತಡವಾಗಿರುವ ರಸ್ತೆ ಕಾಮಗಾರಿಗಳಿಗೆ ಬೆಂಗಳೂರಿನ ಹಿರಿಯ ಅರಣ್ಯಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.

ನೀರು ಸರಬರಾಜು ಯೋಜನೆ, ಸಂಪೂರ್ಣ ನೈರ್ಮಲ್ಯ ಯೋಜನೆ, ಜಲಾನಯನ, ಸರ್ವಶಿಕ್ಷಾ ಅಭಿಯಾನ ಹಾಗೂ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗಳ ಪ್ರಗತಿ ಕುರಿತಂತೆ ಸಂಸದರು ಚರ್ಚಿಸಿದರು. ಜಿಲ್ಲಾಧಿಕಾರಿ ಬಿ. ಎನ್. ಕೃಷ್ಣಯ್ಯ, ಜಿ.ಪಂ ಸಿಇಓ ವಿಜಯ ಮೋಹನರಾಜ್, ಡಾ. ನರಸಿಂಹ ಮೂರ್ತಿ, ಮುಕ್ಕಣ್ಣ ಕರಿಗಾರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.