ADVERTISEMENT

ಮುರ್ಡೇಶ್ವರ ಸಮುದ್ರ ತೀರ ಸುಂದರ, ಅಪಾಯಕಾರಿ...!

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 7:35 IST
Last Updated 17 ಜುಲೈ 2012, 7:35 IST

ಭಟ್ಕಳ: ವಿಶ್ವವಿಖ್ಯಾತ ಪ್ರವಾಸಿಕೇಂದ್ರ ಎಂಬ ಕಿರೀಟವನ್ನು ತಲೆಗೇರಿಸಿಕೊಂಡಿ ರುವ ಭಟ್ಕಳ ತಾಲ್ಲೂಕಿನಲ್ಲಿರುವ ಮುರ್ಡೇಶ್ವರದ ಸುಂದರ ಕಡಲತೀರ ಎಷ್ಟು ಸುಂದರವೋ, ಅಲ್ಲಿನ ಸಮುದ್ರ ಕೂಡ ಅಷ್ಟೆ ಅಪಾಯಕಾರಿ. ಪ್ರತಿವರ್ಷ ಇಲ್ಲಿನ ಸಮುದ್ರದಲ್ಲಿ ದುರಂತ ತಪ್ಪಿದ್ದಲ್ಲ ಎನ್ನುವಂತಾಗಿದೆ. ಕಳೆದ ವರ್ಷ 5 ಜನರನ್ನು ಆಪೋಶನ ತೆಗೆದುಕೊಂಡಿದ್ದ ಈ ಸಮುದ್ರ ಈ ವರ್ಷದ ಲೆಕ್ಕ ಆರಂಭ ಎಂಬಂತೆ ಭಾನುವಾರ ಇಬ್ಬರನ್ನು ಬಲಿ ತೆಗೆದುಕೊಂಡಿದೆ.

ವಿಶ್ವವಿಖ್ಯಾತ ಎಂಬ ಬಿರುದಿದ್ದರೂ ಮುರ್ಡೇಶ್ವರಕ್ಕೆ, ಗೋಕರ್ಣಕ್ಕೆ ಬರು ವಂತೆ ಇಲ್ಲಿಗೆ ವಿದೇಶಿ ಪ್ರವಾಸಿಗರು ಬೆರಳೆಣಿಕೆಯಷ್ಟು ಮಾತ್ರ. ಮುರ್ಡೇ ಶ್ವರಕ್ಕೆ ಬರುವ ಪ್ರವಾಸಿಗರ ಪೈಕಿ ಹೆಚ್ಚಿನವರು ಬಯಲುಸೀಮೆ, ಬೆಂಗಳೂರು, ಮೈಸೂರು ಕಡೆಯವರು. ಬಯಲು ಸೀಮೆಯವರು ಧರ್ಮ ಸ್ಥಳದ ಮಂಜುನಾಥನ ಭಕ್ತರಾದ್ದರಿಂದ ಆ ಕಡೆಯಿಂದ ಬರುವಾಗ ಅಥವಾ ಈ ಕಡೆಯಿಂದ ಹೋಗುವಾಗ ನಡುವೆ ಸಿಗುವ ಮುರ್ಡೇಶ್ವರಕ್ಕೆ ಭೇಟಿ ನೀಡು ವುದು ಸಹಜವೆಂಬಂತೆ ಆಗಿದೆ.

ಉ.ಕ.ಜಿಲ್ಲೆಯ ಚಿರಾಪುಂಜಿ ಎಂದು ಹೇಳಲಾಗುತ್ತಿರುವ ಭಟ್ಕಳದಲ್ಲಿ ಜಿಲ್ಲೆಯ ವಿವಿಧೆಡೆಗಿಂತ ಸ್ವಲ್ಪ ಮಳೆ ಹೆಚ್ಚು.ಇಲ್ಲಿನ ಅರಬ್ಬೀ ಸಮುದ್ರದ ಅಲೆಗಳ ಆರ್ಭಟವೂ ಸ್ವಲ್ವ ಜೋರಾಗೇ ಇರುತ್ತದೆ.ಇಂಥಹ ಸಮುದ್ರ ತೀರದಲ್ಲಿರುವ ಮುರ್ಡೇಶ್ವರ ಒಂದು ಸುಂದರ, ನಿಸರ್ಗ ನಿರ್ಮಿತ ಕಡಲ ತೀರವನ್ನು ಹೊಂದಿದೆ. ಜತೆಗೆ ಪುರಾಣಪ್ರಸಿದ್ದ ಪಂಚಕ್ಷೇತ್ರಗಳ ಪೈಕಿ ಒಂದು ಎಂಬ ಹಿನ್ನೆಲೆಯೂ ಇದೆ.  ಬಯಲು ಸೀಮೆಯ ಜನ ಅಗಾಧ ಜಲರಾಶಿಯ ಸಮುದ್ರವನ್ನು ಕಂಡೊ ಡನೆ ಒಂದು ರೀತಿಯ ಸಮ್ಮೊಹನ ಕ್ಕೊಳಗಾಗುತ್ತಾರೆ.

ಈ ಸಮುದ್ರದ ಯಾವ ಅಲೆಯಲ್ಲಿ ಯಾವ ರೀತಿಯ ಸುಳಿ ಇರುತ್ತದೆ ಎಂಬುದು, ಈ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸ್ಥಳೀಯ ಮೀನುಗಾರರಿಗೂ ಲೆಕ್ಕ ತಪ್ಪುವಂತೆ ಮಾಡಿದೆ. ಇಂಥಹ ಸುಳಿಗಳು ಯಾವಾಗ, ಯಾರನ್ನು ಎಳೆದುಕೊಂಡು ಹೋಗುತ್ತದೆ ಎಂಬುದು ಮಾತ್ರ ಯಾರಿಗೂ ಗೊತ್ತಾಗುವುದಿಲ್ಲ.
 
ಅಷ್ಟರಲ್ಲಿ ದುರಂತ ಸಂಭವಿಸಿರುತ್ತದೆ. ಹೋಗಲಿ ತಕ್ಷಣಕ್ಕೆ ಶವ ಕೂಡ ದೊರಕುವುದಿಲ್ಲ. ಎರಡೋ, ಮೂರು ದಿನ ಬಿಟ್ಟು, ಎಲ್ಲೋ ಒಂದು ಕಡೆಗೆ ಶವ ಬಂದು ಬಿದ್ದಿರುತ್ತದೆ. ಕೊನೆಗೆ ಉಳಿ ಯುವುದು, ದು:ಖ, ಬಂಧುಮಿತ್ರರ ಆಕ್ರಂದನ ಮಾತ್ರ.

ಮುರ್ಡೇಶ್ವರದ ದೇವಸ್ಥಾನದ ಆಡಳಿತ ಮಂಡಳಿಯವರು ಫಲಕದಲ್ಲಿ ದೊಡ್ಡದಾಗಿ ಅಳವಡಿಸಿ ನೀಡಿದ ಅಂಕಿ ಅಂಶಗಳ ಪ್ರಕಾರ 2005ರಿಂದ 2011ರವರೆಗೆ ಹಾಗೂ ಭಾನುವಾರ ನಡೆದ ದುರಂತ ಸೇರಿ ಒಟ್ಟೂ 23 ಜನ ಪ್ರವಾಸಿಗರು ಸಮುದ್ರ ಪಾಲಾಗಿದ್ದಾರೆ.

ಇಲ್ಲಿ ನಡೆಯುವ ದುರಂತಗಳಿಗೆ ಮುರ್ಡೇಶ್ವರದ ನಿರ್ಮಾತೃ ಸ್ವತ: ಡಾ.ಆರ್.ಎನ್.ಶೆಟ್ಟಿಯವರೇ ಮರು ಗುತ್ತಿದ್ದಾರೆ.~ಮುರ್ಡೇಶ್ವರದ ಸಮುದ್ರ ತುಂಬಾ ಅಪಾಯಕಾರಿ~ಎಂಬ ದೊಡ್ಡ ದೊಡ್ಡ ಎಚ್ಚರಿಕೆಯ ಫಲಕ, ಪೊಲೀಸರ ಗಸ್ತು, ಸ್ಥಳೀಯ ಮೀನುಗಾರರ ಎಚ್ಚರಿ ಕೆಯ ಮಾತುಗಳು ಇದಾವುದನ್ನು ಕಿವಿ ಮೇಲೆ ಹಾಕಿಕೊಳ್ಳದೇ ಪ್ರವಾಸಿಗರು  ಸಮುದ್ರಕ್ಕೆ ಇಳಿಯುತ್ತಾರೆ. ಆಮೇಲೆ ಪಶ್ಚಾತ್ತಾಪ ಪಡುತ್ತಾರೆ ಎಂಬುದು ಸ್ಥಳೀಯರ ಆರೋಪ. ಆದರೆ ಇದಾವುದರ ಪರಿವೆಯೇ ಇಲ್ಲದಂತೆ ಸಮುದ್ರದ ಆಕರ್ಷಣೆಗೆ ಪ್ರವಾಸಿಗರು ಒಳಗಾಗುತ್ತಿದ್ದಾರೆ. ಇದಕ್ಕೆ ಯಾರು ಹೊಣೆ?.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.