ADVERTISEMENT

ರಾಜ್ಯ ಸರ್ಕಾರ ಜೀವಂತ ಇಲ್ಲ: ಕಾಗೇರಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 7:06 IST
Last Updated 17 ಅಕ್ಟೋಬರ್ 2017, 7:06 IST

ಸಿದ್ದಾಪುರ: ಲೋಕೋಪಯೋಗಿ ಇಲಾಖೆಯ ರಸ್ತೆಗಳಲ್ಲಿ ಇರುವ ಹೊಂಡಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ಕಚೇರಿಯ ಎದುರು ಬಿಜೆಪಿ ಕಾರ್ಯಕರ್ತರು ಸೋಮವಾರ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ‘ರಾಜ್ಯ ಸರ್ಕಾರ ಕೇವಲ ಭಾಗ್ಯಗಳ ಮೂಲಕ ಜನರನ್ನು ಮೋಸಗೊಳಿಸುತ್ತಿದೆ. ಈ ಭಾಗ್ಯಗಳ ಮೂಲಕವೂ ರಾಜ್ಯ ಸರ್ಕಾರ ಬಡವರಿಗೂ ನ್ಯಾಯ ಕೊಡುತ್ತಿಲ್ಲ. ಈ ಸರ್ಕಾರ ಸತ್ತು ಹೋಗಿದೆ’ ಎಂದರು.

‘ಗ್ರಾಮೀಣ ರಸ್ತೆಗಳ ನಿರ್ವಹಣೆಗೆ ಹಣ ಇಲ್ಲದೇ ಆ ರಸ್ತೆಗಳು ಹಾಳಾಗಿವೆ. ರಾಜ್ಯ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಧರೆ ಕುಸಿದರೆ, ರಸ್ತೆ ಹೊಂಡ ಬಿದ್ದರೆ, ಸೇತುವೆಗಳ ನಿರ್ಮಾಣ ಮಾಡಬೇಕಾದರೆ ಸರ್ಕಾರದ ಬಳಿ ಹಣ ಇಲ್ಲ’ ಎಂದು ಹರಿಹಾಯ್ದರು.

ADVERTISEMENT

ಜೆಡಿಎಸ್ ಅಪ್ರಸ್ತುತವಾದ ಪಕ್ಷವಾಗಿದ್ದು, ಅದು ಕಾಂಗ್ರೆಸ್‌ನ ‘ಬಿ’ಪಕ್ಷ’ ಎಂದು ಟೀಕಿಸಿದ ಅವರು, ‘ನಮಗೆ ನಮ್ಮ ಜವಾಬ್ದಾರಿ ಗೊತ್ತಿದೆ. ಜನರ ಪರವಾಗಿ ಧ್ವನಿ ಎತ್ತಬೇಕಾದ ಸಂದರ್ಭದಲ್ಲಿ ಎತ್ತುತ್ತೇವೆ. ಹೋರಾಟವನ್ನೂ ಮಾಡುತ್ತೇವೆ. ಆಡಳಿತ ಪಕ್ಷವನ್ನು ಸರಿದಾರಿಗೆ ತರಬೇಕಾದ ಪ್ರತಿಪಕ್ಷವಾಗಿ ಇಂತಹ ಹೋರಾಟ ಅಗತ್ಯ’ ಎಂದರು.

ಬಿಜೆಪಿ ತಾಲ್ಲೂಕು ಮಂಡಳದ ಅಧ್ಯಕ್ಷ ಎಂ.ವಿ. ಭಟ್ಟ ತಟ್ಟಿಕೈ, ಪ್ರಧಾನ ಕಾರ್ಯದರ್ಶಿ ಗುರುರಾಜ ಶಾನಭಾಗ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಂ.ಜಿ. ಹೆಗಡೆ ಗೆಜ್ಜೆ, ನಾಗರಾಜ ನಾಯ್ಕ, ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಸದಸ್ಯ ಮಹಾಬಲೇಶ್ವರ ಹೆಗಡೆ, ಧುರೀಣ ದಿವಾಕರ ನಾಯ್ಕ ಮಾತನಾಡಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸುಮನಾ ಕಾಮತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.