ಸಿದ್ದಾಪುರ: `ರೈತ ಸಂಘಕ್ಕೆ ಶಕ್ತಿ ತುಂಬಿದರೆ ಮಾತ್ರ ರೈತರ ಸಮಸ್ಯೆಗಳು ಬಗೆಹರಿಯುತ್ತವೆ~ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ಪೂರ್ವ ಗಣೇಶ ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಘಟಕದ ಆಶ್ರಯದಲ್ಲಿ ಪಟ್ಟಣದ ಸಿ.ಬಿ.ಪಂಡಿತ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ರೈತರೊಡನೆ ಮುಖಾಮುಖಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ತಾಲ್ಲೂಕಿನ ಪ್ರತಿಯೊಂದು ಹಳ್ಳಿಯಲ್ಲಿಯೂ ರೈತ ಸಂಘ ಕಟ್ಟಬೇಕು. ಪ್ರತಿ ಹಳ್ಳಿಯಲ್ಲಿಯೂ ರೈತ ಸಂಘದ ಫಲಕ ಹಾಕಬೇಕು. ಊರಿನೊಳಗೆ ಅಧಿಕಾರಿಗಳು ಬರಬೇಕಾದರೇ ರೈತರ ಒಪ್ಪಿಗೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಬೇಕು~ ಎಂದರು.
`ರೈತರು ಹೆಗಲ ಮೇಲೆ ಹಸಿರು ಟವೆಲ್ ಹಾಕಿಕೊಳ್ಳಲು ನಾಚಿಕೆ ಪಟ್ಟುಕೊಳ್ಳಬೇಕಾಗಿಲ್ಲ. ಹಸಿರು ಎಂದರೇ ಬತ್ತದ ಸಸಿಯ ಬಣ್ಣ. ಈ ಹಸಿರು ಟವೆಲ್‌ಗೆ ಯಾವುದೇ ಜಾತಿ ಮತ್ತಿತರ ಭೇದವಿಲ್ಲ~ ಎಂದರು.
ಸಾಮಾಜಿಕ ಕಾರ್ಯಕರ್ತ ಪಿ.ವಿ.ಹೆಗಡೆ ಹೊಸಗದ್ದೆ, ಪತ್ರಕರ್ತ ಕನ್ನೇಶ ಕೋಲಸಿರ್ಸಿ, ಜಿ.ಪಂ. ಮಾಜಿ ಸದಸ್ಯ ವಿ.ಎನ್.ನಾಯ್ಕ ಬೇಡ್ಕಣಿ, ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ರವೀಂದ್ರನಾಥ ನಾಯ್ಕ, ರೈತ ಸಂಘದ ಮಹಿಳಾ ಘಟಕದ ಲೀಲಾವತಿ ನಾಯ್ಕ ಮತ್ತಿತರರು ಮಾತನಾಡಿದರು. ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ವೀರಭದ್ರ ನಾಯ್ಕ ಮಳಲವಳ್ಳಿ ಅಧ್ಯಕ್ಷತೆ ವಹಿಸಿದ್ದರು.
ರೈತ ಸಂಘದ ಪದಾಧಿಕಾರಿಗಳಾದ ಜೇಡಿಯಪ್ಪ ದೇಸಾಯಿ, ಎಸ್.ಬಿ. ವಸಂತಕುಮಾರ, ರಾಘವೇಂದ್ರ, ಇಂದೂಧರ, ಸ್ಥಳೀಯ ರೈತರಾದ ಸದಾಶಿವ ಸಣ್ಣಪ್ಪ ಹೆಗಡೆ, ಗಣಪತಿ ಕನ್ನ ನಾಯ್ಕ, ಡಿ.ಕೆ. ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ನಾಯ್ಕ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.