ADVERTISEMENT

ರೋಗಿಗಳಿದ್ದರೂ ವೈದ್ಯರಿಲ್ಲದ ಹುಲೇಕಲ್ ಕೇಂದ್ರ: ಲೆಕ್ಕಕ್ಕುಂಟು ಆಟಕ್ಕಿಲ್ಲದ ಆರೋಗ್ಯ ಕೇಂದ್ರಗಳು...

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 8:20 IST
Last Updated 20 ಅಕ್ಟೋಬರ್ 2012, 8:20 IST

ಶಿರಸಿ: `ಆಟಕ್ಕುಂಟು ಲೆಕ್ಕಕ್ಕಿಲ್ಲ~ ಎಂಬ ಗಾದೆಮಾತು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅನ್ವಯಿಸುವಂತಿದೆ. ಹುಲೇಕಲ್ ಹೊರತುಪಡಿಸಿದರೆ ಮೇಲ್ನೋಟಕ್ಕೆ ಎಲ್ಲ ಒಂಬತ್ತು ಕೇಂದ್ರಗಳಲ್ಲಿ ವೈದ್ಯರಿದ್ದರೂ ನಾಲ್ವರನ್ನು ಹೊರತುಪಡಿಸಿ ಉಳಿದವರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.

ಪ್ರತಿದಿನ ನೂರಕ್ಕೂ ಅಧಿಕ ರೋಗಿಗಳು ಬರುವ ತಾಲ್ಲೂಕಿನ ಬನವಾಸಿ ಹಾಗೂ ಬಿಸಲಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ಪದವಿ ಮುಗಿಸಿ ಒಂದು ವರ್ಷ ಗ್ರಾಮೀಣ ಸೇವೆ ಕಡ್ಡಾಯಗೊಳಿಸಲು ಬಂದಿರುವ ವೈದ್ಯರಿದ್ದರೆ, ದಾಸನಕೊಪ್ಪ, ಕಕ್ಕಳ್ಳಿ, ಸಾಲ್ಕಣಿ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಆಯುಷ್ ವೈದ್ಯರಿದ್ದಾರೆ.

ದಿನನಿತ್ಯ ಸರಾಸರಿ 50 ರೋಗಿಗಳು ಬರುವ ಹುಲೇಕಲ್ ಕೇಂದ್ರ ವೈದ್ಯರಿಲ್ಲದೆ ಸೊರಗುತ್ತಿದೆ. ಹುಲೇಕಲ್ ಭಾಗದ ಜನರ ಬೇಡಿಕೆ ವರ್ಷ ಕಳೆದರೂ ಸ್ಪಂದನ ದೊರೆತಿಲ್ಲ. ತಾಲ್ಲೂಕು ಆರೋಗ್ಯಾಧಿಕಾರಿ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ.

ಶಿರಸಿ ನಗರದ ಹಾಗೂ ಮಂಜುಗುಣಿ ಉಪ ಕೇಂದ್ರದಲ್ಲಿ ತಲಾ ಒಂದು ಕಿರಿಯ ಮಹಿಳಾ ಸಹಾಯಕಿ ಹುದ್ದೆ ಹೊರತುಪಡಿಸಿದರೆ ಇನ್ನುಳಿದ 33 ಹುದ್ದೆಗಳು ಭರ್ತಿಯಾಗಿವೆ. ಆದರೆ ಮಂಜೂರಿ ಇರುವ ಕಿರಿಯ ಪುರುಷ ಆರೋಗ್ಯ ಸಹಾಯಕ ಹುದ್ದೆಗಳಲ್ಲಿ 13 ಹುದ್ದೆಗಳು ತೆರವಾಗಿವೆ! ತಾಲ್ಲೂಕಿನಲ್ಲಿ ಒಟ್ಟೂ ಮಂಜೂರಿ ಇರುವ 10 ಗುಮಾಸ್ತ ಹುದ್ದೆಗಳಲ್ಲಿ ನಾಲ್ಕು ಖಾಲಿಯಾಗಿಯೇ ಉಳಿದಿವೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಔಷಧಿ ಖರೀದಿಗೆಂದು ವಾರ್ಷಿಕವಾಗಿ ಒಂದು ಲಕ್ಷ ರೂಪಾಯಿ ದೊರೆಯುತ್ತಿದ್ದರೂ ಅಧಿಕ ರೋಗಿಗಳು ಬರುವ ಬನವಾಸಿಯಂತಹ ಪ್ರದೇಶಗಳಿಗೆ ಈ ಮೊತ್ತ ತೀರಾ ಕಡಿಮೆಯಾಗಿದೆ.

ಮೇಲ್ದರ್ಜೆ ದಾಖಲೆಯಲ್ಲಿ ಮಾತ್ರ!: ಮೂರು ವರ್ಷಗಳ ಹಿಂದೆ ರೇವಣಕಟ್ಟಾ, ಕಕ್ಕಳ್ಳಿ ಹಾಗೂ ಮೆಣಸಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ ಈ ಕೇಂದ್ರಗಳು ಮೇಲ್ದರ್ಜೆ ಕೇಂದ್ರಗಳು ಪಡೆಯಬೇಕಾದ ಸೌಲಭ್ಯಗಳಿಂದ ವಂಚಿತವಾಗಿದ್ದು, ದಾಖಲೆಯಲ್ಲಿ ಮಾತ್ರ ಮೇಲ್ದರ್ಜೆಯಾಗಿ ಉಳಿದಿವೆ. ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆ, ಹೆಚ್ಚುವರಿ ಕಟ್ಟಡದಂತಹ ಸೌಲಭ್ಯಗಳು ಈವರೆಗೂ ಈ ಕೇಂದ್ರಗಳಿಗೆ ಮಂಜೂರಿಯಾಗಿಲ್ಲ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರ್ಕಾರ ಪೂರ್ಣಾವಧಿ ವೈದ್ಯರನ್ನು ಭರ್ತಿ ಮಾಡಬೇಕು. ಗ್ರಾಮೀಣ ಸೇವೆ ಕಡ್ಡಾಯ ಅಥವಾ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ವೈದ್ಯರಿಂದ ಮೆಡಿಕೋ-ಲೀಗಲ್ ನಿರ್ವಹಣೆ ಸಾಧ್ಯವಾಗದು. ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವವರಿಂದ ಸಾರ್ವಜನಿಕರಿಗೆ ನೈಜ `ಸೇವೆ~ ಪಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.