ಯಲ್ಲಾಪುರ: ‘ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಚಟುವಟಿಕೆ ನಿರಂತರವಾಗಿ ನಡೆಯುತ್ತಿದ್ದು, ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ಷೇತ್ರದಲ್ಲಿ ಅನಂತಕುಮಾರ ಹೆಗಡೆ ಅಂತರದ ಮತ ಪಡೆದು ಜಯ ಸಾಧಿಸಲಿದ್ದಾರೆ’ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿ ಮಾಧ್ಯಮ ಸಂಪರ್ಕ ಪ್ರಮುಖ ರವಿ ಹೆಗಡೆ ಹೂವಿನಮನೆ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಕಾರ್ಯಾಲಯದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ದೇಶ ಹಾಗೂ ಕ್ಷೇತ್ರದಾದ್ಯಂತ ಬಿಜೆಪಿ ಪರ ಜನಾಭಿಪ್ರಾಯವಿದ್ದು, ಈ ಚುನಾವಣೆ ರಾಷ್ಟ್ರೀಯ ಮಹತ್ವ ಪಡೆದುಕೊಂಡಿದೆ. ವಿರೋಧ ಪಕ್ಷದವರು ಸಂಸದ ಅನಂತಕುಮಾರ ಸಾಧನೆಯ ಕುರಿತು ಪ್ರಶ್ನಿಸುತ್ತಿದ್ದಾರೆ. ಅವರಿಗೆ ಸರಿಯಾದ ಉತ್ತರ ನೀಡಲು, ಕೆಲವೇ ದಿನದಲ್ಲಿ ಅನಂತಕುಮಾರ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಹಾಗೂ ಸಂದನನಲ್ಲಿ ಚರ್ಚಿಸಿರುವ ವಿಷಯಗಳ ಪಟ್ಟಿ ಬಿಡುಗಡೆಗೊಳಿಸಲಾಗುವುದು’ ಎಂದು ಹೇಳಿದರು.
ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಾಬಾಸಾಬ್ ಅಲನ್ ಮಾತನಾಡಿ, ‘ಜಿಲ್ಲೆಯ ಅಲ್ಪ ಸಂಖ್ಯಾತರು ಈ ಬಾರಿ ಬಿಜೆಪಿಯನ್ನು ಬೆಂಬಲಿಸಬೇಕು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರ ಏಳ್ಗೆಗೆ ಹಲವು ಸೌಲಭ್ಯಗಳನ್ನು ನೀಡಿದ್ದಾರೆ’ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಜಿ.ಕೆ.ಹೆಗಡೆ ಬಿಸ್ಲಕೊಪ್ಪ, ಉಮೇಶ ಭಾಗ್ವತ, ರಾಘವೇಂದ್ರ ಭಟ್ಟ, ನಾರಾಯಣ ನಾಯಕ, ಯೋಗೇಶ ಹಿರೇಮಠ, ಪ್ರಕಾಶ ಕಟ್ಟಿಮನಿ, ಶ್ರೀನಿವಾಸ ಗಾಂವ್ಕಾರ್, ರಾಧಾ ಗುಡಿಗಾರ, ನಮಿತಾ ಬೀಡೀಕರ್ ಮುಂತಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.