ADVERTISEMENT

ವೆಂಕಟರಮಣ ಸನ್ನಿಧಿಗೆ ತಾಮ್ರದ ಹೊದಿಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 10:55 IST
Last Updated 13 ಏಪ್ರಿಲ್ 2011, 10:55 IST

ಶಿರಸಿ: ಎರಡನೇ ತಿರುಪತಿ ಎಂದೇ ಖ್ಯಾತವಾಗಿರುವ ತಾಲ್ಲೂಕಿನ ಮಂಜಗುಣಿಯ ಪ್ರಾಚೀನ ವೆಂಕಟರಮಣ ದೇಗುಲದ ಮೇಲ್ಛಾವಣಿಗೆ ತಾಮ್ರದ ತಗಡಿನ ಹೊದಿಕೆ ಹಾಕುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಸುಮಾರು  ರೂ.65 ಲಕ್ಷ ವೆಚ್ಚವಾಗಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸ ಭಟ್ಟ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವೆಂಕಟರಮಣನ ಮೂಲ ಶಿಲಾದೇಗುಲ ಮತ್ತು ನಾಲ್ಕು ಉಪಗುಡಿಗಳಿಗೆ ತಾಮ್ರದ ಮೇಲ್ಛಾವಣಿ ಅಳವಡಿಕೆ ಕಾರ್ಯಕ್ಕಾಗಿ 5200 ಕೆಜಿ ತಾಮ್ರವನ್ನು ತರಿಸಲಾಗಿದೆ.

ಕಟ್ಟಿಗೆಯ ಒಳಛಾವಣಿ ನಿರ್ಮಿಸಿ ಮೇಲಿನಿಂದ ಆ್ಯಂಟಿ-ಆಕ್ಸಿಜನ್ ತಂತ್ರಜ್ಞಾನದ ತಾಮ್ರದ ಮೇಲ್ಛಾವಣಿ ಹಾಕಲಾಗುತ್ತಿದೆ. ಮೇ ಕೊನೆಯ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಕಲ್ಯಾಣೋತ್ಸವ, ಪ್ರವೇಶೋತ್ಸವ ಮುಂತಾದ ಕಾರ್ಯಗಳಡಿ ತಾಮ್ರದ ತಗಡಿನ ಅರ್ಪಣೆ ಮಾಡುವ ಯೋಚನೆ ಇದೆ ಎಂದು ಅವರು ಹೇಳಿದರು.

ADVERTISEMENT

ದೇವಸ್ಥಾನದ ಪ್ರಾಕಾರ ಕಟ್ಟಡಗಳ ಜೀರ್ಣೋದ್ಧಾರ ಕಾರ್ಯ ಭಕ್ತರ ಸಹಾಯದಿಂದ ರೂ.2 ಕೋಟಿ ಅಂದಾಜು ವೆಚ್ಚದಲ್ಲಿ ನಡೆದಿದ್ದು, ಬಹುತೇಕ ಮುಕ್ತಾಯದ ಹಂತದಲ್ಲಿದೆ ಎಂದು ಅವರು ತಿಳಿಸಿದರು.

ಮಂಜುಗುಣಿ ದೇವಸ್ಥಾನ ಅಕ್ಷರ ಹುಟ್ಟುವ ಮುನ್ನವೇ ನಿರ್ಮಾಣ ವಾಗಿತ್ತೆಂದು ಹೇಳಲಾಗಿದೆ ಇದಕ್ಕೆ ಪುಷ್ಠಿ ಎನ್ನುವಂತೆ ಕಳೆದ ಕೆಲ ವರ್ಷಗಳ ಹಿಂದೆ ತಮಿಳು ನಾಡಿನಿಂದ ಬಂದಿದ್ದ ವ್ಯಕ್ತಿಯೊಬ್ಬರು ದೇವಸ್ಥಾನದ ಯಾವುದಾದರೂ ಭಾಗದಲ್ಲಿ ಎರಡು ಮೀನುಗಳ ಚಿತ್ರ ಇರಬಹುದೆಂದು ಹೇಳಿದ್ದರು. ದೇವಸ್ಥಾನದ ವಾಯವ್ಯ ಭಾಗದ ಮೇಲ್ಛಾವಣಿಯ ಪಾಚಿ ಸ್ವಚ್ಛಗೊಳಿಸುವಾಗ ಎರಡು ಮೀನುಗಳ ಚಿತ್ರ ಕಂಡುಬಂದಿದೆ. ಅಕ್ಷರ ಹುಟ್ಟುವ ಮೊದಲು ನಿರ್ಮಾಣ ಮಾಡಿದ ದೇಗುಲಗಳಿಗೆ ಇಂತಹ ಚಿತ್ರಗಳಿರುತ್ತವೆ ಎಂದು ಹೇಳಲಾಗುತ್ತದೆ ಎಂದು ವಿವರಿಸಿದರು.

ಎಂ.ಎನ್.ಹೆಗಡೆ, ಶ್ರೀರಾಮ ಹೆಗಡೆ, ಅನಂತ ಪೈ, ಕೇಶವ ಮರಾಠೆ, ಜಿ.ಎಸ್.ಭಟ್ಟ, ಮಹೇಶ ಭಟ್ಟ, ಗ್ರಾ. ಪಂ. ಅಧ್ಯಕ್ಷ ನಾರಾಯಣ ನಾಯ್ಕ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.