ADVERTISEMENT

ವ್ಯಾಪ್ತಿ ಹೆಚ್ಚಿದೆ; ಸೌಲಭ್ಯ ಹೆಚ್ಚಿಲ್ಲ!

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 10:00 IST
Last Updated 16 ಜುಲೈ 2012, 10:00 IST
ವ್ಯಾಪ್ತಿ ಹೆಚ್ಚಿದೆ; ಸೌಲಭ್ಯ ಹೆಚ್ಚಿಲ್ಲ!
ವ್ಯಾಪ್ತಿ ಹೆಚ್ಚಿದೆ; ಸೌಲಭ್ಯ ಹೆಚ್ಚಿಲ್ಲ!   

ಕಾರವಾರ: ದಿನಗಳು ಕಳೆದಂತೆ ನಗರದಲ್ಲಿ ಪ್ರತಿಭಾನುವಾರ ನಡೆಯುವ ಭಾನುವಾರದ ಸಂತೆಯ ವಿಸ್ತಾರ ಹೆಚ್ಚುತ್ತ ಹೋಗುತ್ತಿದೆ. ಒಂದೇ ರಸ್ತೆಯ ಎಡ, ಬಲಗಳಲ್ಲಿರುವ ಫುಟ್‌ಪಾತ್‌ನಲ್ಲಿ ನಡೆಯುತ್ತಿದ್ದ ಸಂತೆ ಈಗ ನಗರದ ತುಂಬ ವ್ಯಾಪಿಸಿದೆ. ಆದರೆ ಮೂಲ ಸೌಕರ್ಯಗಳು ಮಾತ್ರ ಅಭಿವೃದ್ಧಿಯಾಗಿಲ್ಲ.

ಸೀಬರ್ಡ್, ಕೈಗಾ ಅಣು ವಿದ್ಯುತ್ ಸ್ಥಾವರ ಮತ್ತು ಕದ್ರಾ, ಕೊಡಸಳ್ಳಿ ಜಲವಿದ್ಯುತ್ ಯೋಜನೆಗಳು ಇಲ್ಲಿರುವುದರಿಂದ ಬಹುತೇಕ ಉದ್ಯೋಗಿಗಳು ತರಕಾರಿ, ಬೆಳೆಕಾಳುಗಳನ್ನು ಒಯ್ಯಲು ಭಾನುವಾರದ ಸಂತೆಗೆ ಬರುತ್ತಾರೆ.

ಇದರಿಂದಾಗಿ ತರಕಾರಿ, ಬೆಳೆಕಾಳುಗಳಿಗೆ ಸಹಜವಾಗೇ ಬೇಡಿಕೆ ಹೆಚ್ಚಾಗಿದೆ. ಹಿಂದೆ ಒಂದೆರಡು ಲೋಡ್ ಬರುತ್ತಿದ್ದ ತರಕಾರಿ ಬದಲಾಗಿ 5-6 ಲೋಡ್ ತರಕಾರಿಗಳು ಬರುತ್ತಿವೆ. ಹಾವೇರಿ, ಧಾರವಾಡ, ಬೆಳಗಾವಿ, ದಾವಣಗೆರೆಯಿಂದ ವ್ಯಾಪಾರಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗಿದೆ.

ಸಂತೆ ನಡೆಯುವ  ಮಹಾತ್ಮಾಗಾಂಧಿ ರಸ್ತೆ, ಸಿವಿಲ್‌ಕೋರ್ಟ್ ರಸ್ತೆ, ಗ್ರಂಥಾಲಯ ರಸ್ತೆ, ಪಿಕಳೆ, ಡಾ.ಕಮಲಾಕರ ರಸ್ತೆ  ಮತ್ತು ಗ್ರೀನ್‌ಸ್ಟ್ರೀಟ್‌ನಲ್ಲಿ ಶೌಚಾಲಯಗಳು ಇಲ್ಲದೇ ಇರುವುದರಿಂದ ವ್ಯಾಪಾರಕ್ಕೆ ಬಂದ ಪುರುಷರು, ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ.

ನೂರಾರು ಸಂಖ್ಯೆಯಲ್ಲಿ ಬಂದ ವ್ಯಾಪಾರಿಗಳು ಪಾಳು ಬಿದ್ದ ಕಟ್ಟಡ ಮರೆಯಲ್ಲಿ, ಖಾಲಿ ನಿವೇಶನಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳ ಮಧ್ಯೆ ಮಲ, ಮೂತ್ರ ವಿರ್ಸಜನೆ ಮಾಡುವುದರಿಂದ ಆ ಪ್ರದೇಶವೆಲ್ಲ ದುರ್ನಾತವೆದ್ದಿದೆ.

`ಭಾನುವಾರದ ಸಂತೆಗೆ ನಾವು ಮೊದಲ ದಿನ ರಾತ್ರಿಯೇ ಇಲ್ಲಿ ಬಂದಿರುತ್ತೇವೆ. ನಾವು ತಂದ ತರಕಾರಿ ಬಿಟ್ಟು ಒಂಚೂರು ಆಚೀಚೆ ಕದಲು ಆಗುವುದಿಲ್ಲ. ಸಮೀಪದಲ್ಲಿ ಸ್ನಾನಗೃಹ ಶೌಚಾಲಯಗಳು ಇಲ್ಲದೇ ಇರುವುದರಿಂದ ತೊಂದರೆ ಅನುಭವಿಸಬೇಕಾಗಿದೆ~ ಎನ್ನುತ್ತಾರೆ ಬ್ಯಾಡಗಿಯಿಂದ ವ್ಯಾಪಾರಕ್ಕೆ ಬಂದ ವಿರೂಪಾಕ್ಷ ಮತ್ತು ಬಸವರಾಜ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.