ADVERTISEMENT

ಶಾಲ್ಮಲೆ ನದಿಗೆ ತೂಗು ಸೇತುವೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 10:40 IST
Last Updated 19 ಜನವರಿ 2011, 10:40 IST

ಕಾರವಾರ: ಶಿರಸಿಯ ಸಹಸ್ರಲಿಂಗಕ್ಕೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರಿಗೆ ಶಾಲ್ಮಲಾ ನದಿಯ ಮೇಲೆ ನಿಂತು ಪ್ರವಾಹದ ರುದ್ರ ರಮಣೀಯ ದೃಶ್ಯ ಸವಿಯಲು ಹಾಗೂ ಹುಳಗೋಳದಿಂದ ಭೈರುಂಬೆ- ಹುಲೇಕಲ್ ಗ್ರಾಮ ಪಂಚಾಯತಿಗೆ ಸಂಪರ್ಕ ಕಲ್ಪಿಸಲು ತೂಗು ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಜ್ಜಾಗಿದೆ.

ಜಿಲ್ಲಾ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಾಗೂ ಶಿರಸಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸದಾನಂದ ಭಟ್ ಒಂದೇ ವರ್ಷದಲ್ಲಿ ಯೋಜಿಸಿದ ಈ ಯೋಜನೆಯನ್ನು ಎಂಜಿನಿಯರ್ ಗಿರೀಶ ಭಾರಧ್ವಾಜ ಕೇವಲ ಎರಡೇ ತಿಂಗಳಲ್ಲಿ ಪೂರ್ಣಗೊಳಿಸಿದ್ದಾರೆ.ಭೈರುಂಬೆ ಹಾಗೂ ಹುಲೆಕಲ್ ಗ್ರಾಮ ಪಂಚಾಯಿತಿಗಳ ಸುಮಾರು 14 ಗ್ರಾಮಗಳಿಗೆ ಈ ತೂಗು ಸೇತುವೆಯಿಂದ ಸಂಪರ್ಕ ದೊರೆಯಲಿದ್ದು ಶಿರಸಿಗೆ ಕನಿಷ್ಟ 15 ಕಿ.ಮೀ ಅಂತರ ಕಡಿಮೆಯಾಗಲಿದೆ. ಕೇವಲ ರೂ. 25 ಲಕ್ಷ ಅನುದಾನದಲ್ಲಿ ಉತ್ತಮ ತೂಗು ಸೇತುವೆಯೊಂದು ನಿರ್ಮಾಣಗೊಂಡಿದೆ.

ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ, ತಾ.ಪಂ. ಅಧ್ಯಕ್ಷ ಸದಾನಂದ ಭಟ್ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿ ಶಂಕರ ಗೋಗಿ ರಾಜೇಶ ನಾಯ್ಕ ಹಾಗೂ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಸೋಮವಾರ ತೂಗು ಸೇತುವೆಯನ್ನು ವೀಕ್ಷಿಸಿದರು. ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ತೂಗುಸೇತುವೆ ಸಹಸ್ರಲಿಂಗಕ್ಕೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರಿಗೂ ಮುದ ನೀಡಲಿದೆ.

‘ಮಳೆಗಾಲದಲ್ಲಿ ಶಾಲ್ಮಲಾ ನದಿಯು ರಭಸದಿಂದ ಹರಿಯುವಾಗ ಈ ತೂಗುಸೇತುವೆ ಮೇಲೆ ನಿಂತು ನದಿಯ ಪ್ರವಾಹದ ರುದ್ರ ರಮಣೀಯ ದೃಶ್ಯ ವೀಕ್ಷಿಸುವುದೇ ಒಂದು ಅವಿಸ್ಮರಣೀಯ ಅನುಭವ’ ಎನ್ನುತ್ತಾರೆ ಸದಾನಂದ ಭಟ್. ಶಾಲ್ಮಲಾದ ರಭಸದಿಂದಾಗಿ ಅನೇಕ ಈಶ್ವರ ಲಿಂಗಗಳು ಹರಿದು ಹೋಗಿವೆ. ಎರಡು ದಶಕಗಳ ಹಿಂದೆ ಇದ್ದ ಲಿಂಗಗಳು ಈಗ ಕಡಿಮೆಯಾಗಿವೆ. ಈ ಹಿನ್ನೆಲೆಯಲ್ಲಿ ಇವುಗಳ ರಕ್ಷಣೆ ಅವಶ್ಯಕವಾಗಿದೆ ಎನ್ನುತ್ತಾರೆ ಸದಾನಂದ ಭಟ್.

ಇತ್ತೀಚೆಗೆ ಸಹಸ್ರಲಿಂಗಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯು ಹೆಚ್ಚಾಗುತ್ತಿದೆ. ಕಳೆದ ಸಂಕ್ರಾಂತಿಯ ದಿನದಂದು ಸುಮಾರು ಐದಾರು ಸಾವಿರ ಜನ ಈ ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಭಟ್ ತಿಳಿಸಿದರು.  ಸಹಸ್ರಲಿಂಗ ಹಾಗೂ ಸುತ್ತಲಿನ ಪ್ರದೇಶದ ಸ್ವಚ್ಛತೆ ಹಾಗೂ ಪಾವಿತ್ರ್ಯತೆ ಕಾಪಾಡುವಂತೆ ಜಿಲ್ಲಾಧಿಕಾರಿ ಕೃಷ್ಣಯ್ಯ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.