ADVERTISEMENT

ಶಿಕ್ಷಕರಾದ ಪೊಲೀಸ್ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 6:15 IST
Last Updated 21 ಜೂನ್ 2011, 6:15 IST
ಶಿಕ್ಷಕರಾದ ಪೊಲೀಸ್ ಅಧಿಕಾರಿಗಳು
ಶಿಕ್ಷಕರಾದ ಪೊಲೀಸ್ ಅಧಿಕಾರಿಗಳು   

ಮುಂಡಗೋಡ: ಕಪ್ಪು ಹಲಗೆಯ ಮುಂದೆ ನಿಂತುಕೊಂಡು ಶಿಕ್ಷಕರು ಪಾಠ ಮಾಡಲಿಲ್ಲ, ಕೇಳಿದ ವಿಷಯ ಪಠ್ಯದಲ್ಲಿತ್ತಾದರೂ ಶಾಲೆಯಲ್ಲಿ ಅಂತಹ ಪಾಠ ಮಾಡುತ್ತಿದ್ದ ಶಿಕ್ಷಕರು ಬದಲಾಗಿದ್ದರು.

ಖಾಕಿ ಸಮವಸ್ತ್ರದಲ್ಲಿದ್ದ ಅಧಿಕಾರಿಯೊಬ್ಬರು ಪ್ರೌಢಶಾಲೆಯ ಮಕ್ಕಳಿಗೆ ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳ ಬಗ್ಗೆ ಹೇಳುತ್ತಿದ್ದರೆ, ಮಕ್ಕಳು ನೋಟ್‌ಬುಕ್‌ನಲ್ಲಿ ಬರೆದುಕೊಳ್ಳುತ್ತ ತದೇಕಚಿತ್ತದಿಂದ ಕೇಳುತ್ತಿದ್ದರು.

ಪ್ರಾರ್ಥನೆ ಮುಗಿಸಿದ ಮಕ್ಕಳು ಶಾಲೆಯ ಕೋಣೆಗೆ ಹೋಗದೇ ಪೊಲೀಸ್ ಠಾಣೆಯಲ್ಲಿ ಪಾಠ ಕೇಳುತ್ತಿದ್ದ ಸನ್ನಿವೇಶ ಸೋಮವಾರ ಕಂಡುಬಂತು.

ಪೊಲೀಸ್ ಇಲಾಖೆ ಹಮ್ಮಿಕೊಂಡಿರುವ ಪೊಲೀಸ್-ವಿದ್ಯಾರ್ಥಿ ಸಂವಹನ ಕಾರ್ಯಕ್ರಮದಲ್ಲಿ ನಗರದ ಆದಿಜಾಂಬವ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಪೊಲೀಸ್ ಅಧಿಕಾರಿಗಳೊಂದಿಗೆ ಮುಕ್ತವಾಗಿ ಸಂವಹನ ನಡೆಸಿದರು.

ಠಾಣೆಗೆ ಶಿಕ್ಷಕರೊಂದಿಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಆದರದಿಂದ ಸ್ವಾಗತಿಸಿದ ಸಿ.ಪಿ.ಐ ವಿರೇಂದ್ರಕುಮಾರ ಕಾರ್ಯಕ್ರಮದ ಮೂಲ ಉದ್ದೇಶದ ಬಗ್ಗೆ ವಿವರಿಸಿದರು. ನಂತರ ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳು, ಸಮಾಜದಲ್ಲಿ ಜೀವನ ನಡೆಸುವ ಬಗೆ, ಸಮಾಜದಲ್ಲಿನ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಭಾವಿಪ್ರಜೆಗಳಾದ ವಿದ್ಯಾರ್ಥಿಗಳು ನಿರ್ವಹಿಸಬೇಕಾದ ಕಾರ್ಯ, ಪೊಲೀಸ್ ಠಾಣೆಯಲ್ಲಿನ ವ್ಯವಸ್ಥೆ, ಪರಿಕರಗಳು, ಜನಸಂಖ್ಯೆಗೆ ಅನುಗುಣವಾಗಿ ಇರುವ ಪೊಲೀಸ್ ಸಿಬ್ಬಂದಿ ಇತ್ಯಾದಿಗಳ ಬಗ್ಗೆ ಸವಿವರವಾಗಿ ಹೇಳುತ್ತಾ ಹೋದರು.

ಕೇವಲ ಸಿನೆಮಾ, ಟಿ.ವಿ.ಯಲ್ಲಿ ನೋಡಿದ ಪೊಲೀಸ್ ಅಧಿಕಾರಿಗಳು ಬಳಸುವ 9 ಎಂ.ಎಂ. ಪಿಸ್ತೂಲ್ ಹಾಗೂ ರೈಫಲನ್ನು  ವಿದ್ಯಾರ್ಥಿಗಳಿಗೆ ಪ್ರದರ್ಶಿಸಿದ ಸಿ.ಪಿ.ಐ ಅದರ ಬಳಕೆಯ ಬಗ್ಗೆ ವಿವರಿಸಿ ಪ್ರತಿಯೊಬ್ಬ ವಿದ್ಯಾರ್ಥಿಯು ಅವುಗಳನ್ನು ನೋಡಲು  ಅವಕಾಶ ಮಾಡಿಕೊಟ್ಟರು. ಆರೋಪಿಗಳಿಗೆ ತೊಡಿಸಲಾಗುವ ಬೇಡಿಯನ್ನು ತೋರಿಸಿ ಇದನ್ನು ನೋಡಿದ್ದಿರಾ? ಎಂದು ಕೇಳಿದಾಗ ವಿದ್ಯಾರ್ಥಿನಿಯೊಬ್ಬಳು ಪಕ್ಕದ ಜಿಲ್ಲೆಯಲ್ಲಿ ಆರೋಪಿಗೆ ಕೈಕೋಳ ತೊಡಿಸಿ ಪೊಲೀಸರು ಕರೆದೊಯ್ಯುತ್ತಿದ್ದ ಸನ್ನಿವೇಶ ನೋಡಿದ ಬಗ್ಗೆ ಹೇಳಿದಳು.

ನಂತರ ಠಾಣೆಯಲ್ಲಿನ ಬಂದೀಖಾನೆಯನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು. ಕೆಲ ವಿದ್ಯಾರ್ಥಿಗಳು ವಾಕಿಟಾಕಿಯಲ್ಲಿ ಮಾತನಾಡಿ ಸಂತೋಷಪಟ್ಟರು. ಯಾವದೇ ಭಯವಿಲ್ಲದೇ ಪೊಲೀಸರೊಂದಿಗೆ ಮುಕ್ತವಾಗಿ ಮಾತನಾಡಿದ ವಿದ್ಯಾರ್ಥಿಗಳು ನಾವೂ ಮುಂದೆ ಜೀವನದಲ್ಲಿ ಪೊಲೀಸರಾಗಬೇಕು, ಸಮಾಜದಲ್ಲಿ ಶಾಂತಿ ನೆಲೆಸಲು ಕೈಜೋಡಿಸಬೇಕು ಎಂಬ ಅಭಿಪ್ರಾಯವನ್ನು ಹಂಚಿಕೊಂಡರು.

 ಪಿ.ಎಸ್.ಐ ಸೀತಾರಾಮ ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.