ADVERTISEMENT

ಶಿಕ್ಷಣಕ್ಕಾಗಿ ಕೂಲಿ ಕೆಲಸ!

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 10:10 IST
Last Updated 28 ಅಕ್ಟೋಬರ್ 2011, 10:10 IST

ಕಾರವಾರ: ಶಾಲಾ, ಕಾಲೇಜುಗಳಿಗೆ ರಜೆ ಬಿದ್ದಾಗ ಮಕ್ಕಳು ಸಾಮಾನ್ಯವಾಗಿ ಶಿಬಿರಗಳಿಗೆ, ಇಲ್ಲವೇ ಅಜ್ಜಿ ಮನೆಗೆ ಹೋಗಿ ರಜಾದಿನಗಳನ್ನು ಕಳೆಯುತ್ತಾರೆ. ಆದರೆ, ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮೂವರು ಬಾಲಕಿಯರ ಪಾಲಿಗೆ ಇದು ಸಂಪಾದನೆಯ ಸಮಯ!

ರಜಾ ದಿನಗಳಲ್ಲಿ ದುಡಿದು ಸಂಪಾದನೆ ಮಾಡಿದ ಹಣದಿಂದ ತಮ್ಮ ಖರ್ಚನ್ನು ತಾವೇ ನೋಡಿಕೊಳ್ಳುತ್ತಾರೆ. ರೋಣ ತಾಲ್ಲೂಕಿನ ಹಳ್ಳಿಯೊಂದರಿಂದ ಬಂದ ಕಾವೇರಿ, ಸೈತಾಲಿ ಮತ್ತು ಮಂಜುಳಾ ತಾಲ್ಲೂಕಿನ ಕಣಸಗಿರಿಯಲ್ಲಿರುವ ಚಿಪ್ಪೆಕಲ್ಲು ರಾಶಿಯಿಂದ ಕಲ್ಲುಗಳನ್ನು ಬೇರ್ಪಡಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಕಾವೇರಿ 4ನೇ ತರಗತಿ, ಸೈತಾಲಿ 6ನೇ ತರಗತಿ ಮತ್ತು ಮಂಜುಳಾ 5ನೇ ತರಗತಿಯಲ್ಲಿ ಓದುತ್ತಿದ್ದಾಳೆ.

ಪ್ರತಿನಿತ್ಯ ಬೆಳಿಗ್ಗೆಯಿಂದ ಸಂಜೆಯ ವರೆಗೆ ದುಡಿಯುವ ಈ ಬಾಲಕಿಯರು ಕೆಲಸಕ್ಕೆ ಪ್ರತಿಯಾಗಿ ನೂರು ರೂಪಾಯಿ ಕೂಲಿ ಪಡೆಯುತ್ತಿದ್ದಾರೆ. ಚಿಪ್ಪೆಕಲ್ಲುಗಳ ರಾಶಿಯಿಂದ ಕಲ್ಲುಗಳನ್ನು ಬೇರ್ಪಡಿಸುವುದು ದೊಡ್ಡ ಕೆಲಸವೇನೂ ಆಲ್ಲ. ಆದರೆ ಚಿಪ್ಪೆಯ ಒಂದು ಭಾಗ ಹರಿತವಾಗಿರುವುದರಿಂದ ತುಸು ಎಚ್ಚರಿಕೆಯಿಂದಲೇ ಕೆಲಸ ಮಾಡಬೇಕಾಗುತ್ತದೆ.

ಶಾಲೆಗೆ ರಜೆ ಇದಷ್ಟು ದಿನ ಇಲ್ಲಿ ದುಡಿದು ನಂತರ ಊರಿಗೆ ಮರಳುವ ಬಾಲಕಿಯರು ದುಡಿದು ತಂದ ಹಣದಲ್ಲಿ ಓದಿಗೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸಿ ಕಲಿಕೆಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಾರೆ.

`ಶಾಲೆಗೆ ಹೋಗಲು ಬಟ್ಟೆ, ಬರೆ, ನೋಟ್‌ಬುಕ್ ಬೇಕಾಗುತ್ತದೆ. ಅದಕ್ಕೆ ಹಣ ಕೊಡಲು ನಮ್ಮ ಪಾಲಕರಿಗೆ ಸಾಧ್ಯವಿಲ್ಲ. ರಜೆಯಲ್ಲಿ ಇಲ್ಲಿಗೆ ಬಂದು ದುಡಿದು ಮರಳಿಗೆ ಊರಿಗೆ ಹೋಗುತ್ತೇವೆ. ದುಡಿಯುವುದರಿಂದ ಸ್ವಲ್ಪ ಹಣ ಸಿಗುವುದರಿಂದ ನಮ್ಮ ಕಲಿಕೆಯ ಖರ್ಚನ್ನು ನಾವೇ ನೋಡಿಕೊಳ್ಳಬಹುದು~ ಎನ್ನುತ್ತಾರೆ ಈ ಕಾವೇರಿ, ಮಂಜುಳಾ ಮತ್ತು ಸೈತಾಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.