ADVERTISEMENT

ಶಿರಸಿಗೆ ಬಂತು ಎಂಟನೇ ತರಗತಿ ಮಕ್ಕಳ ಸೈಕಲ್

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 4:05 IST
Last Updated 7 ಜುಲೈ 2012, 4:05 IST

ಶಿರಸಿ: ಎಂಟನೇ ತರಗತಿ ಮಕ್ಕಳು ಇನ್ನು ಟ್ರಿಣ್ ಟ್ರಿಣ್ ಬೆಲ್ ಮಾಡುತ್ತ ಶಾಲೆ ಬರಲಿದ್ದಾರೆ. ಸರ್ಕಾರ ಎಂಟನೇ ತರಗತಿ ಮಕ್ಕಳಿಗೆ ನೀಡುವ ಸೈಕಲ್ ನಗರಕ್ಕೆ ಬಂದಿದೆ. ನಗರದ ಗುರುಭವನದ ಆವಾರದಲ್ಲಿ ನೂರಾರು ಸೈಕಲ್ ಗಳು ಸಾಲಿನಲ್ಲಿ ನಿಂತಿವೆ.

ಮಕ್ಕಳನ್ನು ಶಾಲೆಯೆಡೆಗೆ ಸೆಳೆಯುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅನೇಕ ಯೋಜನೆಗಳನ್ನು ಜಾರಿಮಾಡಿದ್ದು ಸೈಕಲ್ ವಿತರಣೆ ಯೋಜನೆ ಸಹ ಒಂದಾಗಿದೆ. ಹಿಂದಿನ ವರ್ಷಗಳಂತೆ ಈ ವರ್ಷ ಸಹ ಎಂಟನೇ ತರಗತಿಗೆ ದಾಖಲಾದ ಸರ್ಕಾರಿ ಶಾಲೆ ಮಕ್ಕಳಿಗೆ ರಾಜ್ಯ ಸರ್ಕಾರ ಸೈಕಲ್ ವಿತರಿಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಈಗಾಗಲೇ ಪ್ರಕಟಿಸಿದ್ದಾರೆ.

ಅಂತೆಯೇ ತಾಲ್ಲೂಕಿಗೆ ಮೊದಲ ಹಂತದಲ್ಲಿ 602 ಗಂಡು ಮಕ್ಕಳ ಸೈಕಲ್‌ಗಳು ಬಂದಿವೆ. ಗುರುಭವನದ ಆವಾರದಲ್ಲಿ ಸೈಕಲ್ ಜೋಡಣೆ ಕಾರ್ಯ ಭರದಿಂದ ಸಾಗಿದೆ. ಉತ್ತರ ಪ್ರದೇಶ ಮತ್ತು ಗುವಾಹಟಿಯಿಂದ ಆಗಮಿಸಿರುವ ಎಂಟು ಕಾರ್ಮಿಕರು ಸೈಕಲ್ ಬಿಡಿಭಾಗ ಜೋಡಿಸುವ ಕಾರ್ಯದಲ್ಲಿ ನಿರತರಾಗಿದ್ದು, ಒಂದು ತಿಂಗಳಲ್ಲಿ ಜೋಡಣಾ ಕಾರ್ಯ ಪೂರ್ಣಗೊಳ್ಳಲಿದೆ.

`ತಾಲ್ಲೂಕಿನಲ್ಲಿ ಸರ್ಕಾರಿ ಹಾಗೂ ಅನುದಾನಿತ 41 ಪ್ರೌಢಶಾಲೆಗಳಿವೆ. ತಾಲ್ಲೂಕಿಗೆ 2520 ಸೈಕಲ್‌ಗಳ ಅಗತ್ಯವಿದ್ದು, ಮೊದಲ ಹಂತದ ಸೈಕಲ್‌ಗಳು ಮಾತ್ರ ಬಂದಿವೆ. ಟೆಂಡರ್ ಪಡೆದಿರುವ ಕಂಪೆನಿಯವರು ಸೈಕಲ್ ಜೋಡಣಾ ಕಾರ್ಯ ಪೂರ್ಣಗೊಳಿಸಿ ಸಿದ್ಧಗೊಳಿಸಿದ ಮೇಲೆ ಶಿಕ್ಷಣ ಇಲಾಖೆಗೆ ಹಸ್ತಾಂತರಿಸುತ್ತಾರೆ.

ನಂತರ ಅವುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ~ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ ತಿಳಿಸಿದರು. `ಕಳೆದ ಸಾಲಿನಲ್ಲಿ ಬಸ್ ಪಾಸ್ ಹೊಂದಿದ ಹಾಗೂ ಆರ್ಥಿಕವಾಗಿ ಸದೃಢತೆ ಹೊಂದಿರುವ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲು ಅನುಮತಿ ಇಲ್ಲವಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈವರೆಗೆ ಸರ್ಕಾರದಿಂದ ಯಾವುದೇ ಹೊಸ ಸುತ್ತೋಲೆ ಬಂದಿಲ್ಲ. ಹೀಗಾಗಿ ಹಿಂದಿನ ಸಾಲಿನ ಸುತ್ತೋಲೆಯ ಪ್ರಕಾರ ವಿದ್ಯಾರ್ಥಿ ಗಳಿಗೆ ಸೈಕಲ್ ವಿತರಣೆ ಮಾಡಲಾಗು ವುದು~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.