ADVERTISEMENT

ಶಿರಸಿ ಮಾರುಕಟ್ಟೆಯಲ್ಲಿ ಅಪ್ಪೆಮಿಡಿ ಘಮಲು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 9:20 IST
Last Updated 4 ಏಪ್ರಿಲ್ 2012, 9:20 IST
ಶಿರಸಿ ಮಾರುಕಟ್ಟೆಯಲ್ಲಿ ಅಪ್ಪೆಮಿಡಿ ಘಮಲು
ಶಿರಸಿ ಮಾರುಕಟ್ಟೆಯಲ್ಲಿ ಅಪ್ಪೆಮಿಡಿ ಘಮಲು   

ಶಿರಸಿ: ಇಲ್ಲಿನ ಮಾರುಕಟ್ಟೆಯಲ್ಲಿ ಅಪ್ಪೆಮಿಡಿಗೆ ಭಾರೀ ಡಿಮಾಂಡ್. ಘಮಘಮ ಪರಿಮಳ ಬೀರುವ ಮಿಡಿಮಾವಿನ ವ್ಯಾಪಾರ ಜೋರಾಗಿದೆ. ದರ ದ್ವಿಗುಣಗೊಂಡರೂ ಅಪ್ಪೆಮಿಡಿಯ ಘಮಲು  ಗ್ರಾಹಕರನ್ನು ಸೆಳೆಯುತ್ತಿದೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುಮಾರು 500 ಜಾತಿಯ ಅಪ್ಪೆಮಿಡಿಗಳು ಸಿಗುತ್ತವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದಾಜು 107 ಜಾತಿಯ ಅಪ್ಪೆಮಿಡಿ ಸೇರಿದಂತೆ ವಿವಿಧ ಜಾತಿಯ ಸುವಾಸನೆ ಮಿಡಿಮಾವು ಬೆಳೆಯುತ್ತವೆ. ಹಳ್ಳ, ಹೊಳೆ ಅಂಚಿನಲ್ಲಿ ಹತ್ತಾರು ದಶಕಗಳಿಂದ ನೈಸರ್ಗಿಕವಾಗಿ ಬೆಳೆದ ಮರಗಳು ಮಿಡಿಮಾವಿನ ಫಲ ನೀಡುತ್ತಿವೆ.

ಮಾವಿನ ಬೆಳೆ ಈ ಬಾರಿ ಅರ್ಧಕ್ಕಿಂತ ಕಡಿಮೆ ಇದೆ. ಮಿಡಿಮಾವು ಸಹ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಜನಸಾಮಾನ್ಯರು ಅಪ್ಪೆಮಿಡಿ ಖರೀದಿಸಲು ತುಸು ಯೋಚಿಸುತ್ತಿದ್ದಾರೆ. ಹಿಂದಿನ ವರ್ಷ ಜೀರಿಗೆ ವಾಸನೆಯ ತಲಾ ನೂರು ಅಪ್ಪೆಮಿಡಿ ರೂ.100ಕ್ಕೆ ಸುಲಭದಲ್ಲಿ ದೊರೆತಿತ್ತು. ಆದರೆ ಈ ಬಾರಿ ಸಾಧಾರಣ ಮಿಡಿಮಾವಿನ ದರ ರೂ.150ರಿಂದ ಪ್ರಾರಂಭವಾಗಿದೆ. ಉತ್ತಮ ಜಾತಿಯ ಅಪ್ಪೆಮಿಡಿ ರೂ.250ರಿಂದ ಗರಿಷ್ಠ ರೂ.300ರ ತನಕ ಮಾರಾಟವಾಗುತ್ತಿದೆ. ಸಣ್ಣ ಗಾತ್ರದ ಪರಿಮಳ ರಹಿತ ಮಾವಿನಮಿಡಿಗೆ ಸಹ ನೂರು ರೂಪಾಯಿ ದರವಿದೆ.

ಗ್ರಾಮೀಣ ಭಾಗದಲ್ಲಿ ಮಿಡಿಮಾವಿನ ಉಪ್ಪಿನಕಾಯಿ ಇಲ್ಲದಿದ್ದರೆ ಊಟ ಪೂರ್ಣವಾಗುವದಿಲ್ಲ. ಹೀಗಾಗಿ ಹಳ್ಳಿ ಭಾಗದ ಜನರು ಅಪ್ಪೆಮಿಡಿ ತರಲು ಅಲ್ಲಲ್ಲಿ ವಿಚಾರಿಸುತ್ತ ಹುಡುಕಾಟ ನಡೆಸಿದ್ದಾರೆ. ಪಟ್ಟಣಿಗರು ಮಾರುಕಟ್ಟೆಗೆ ಬಂದ ಮಿಡಿಮಾವು ಕೊಳ್ಳಲು ಪೇಟೆಗೆ ಹೋಗಿ ದರ ಹೆಚ್ಚಾಯಿತೆಂದು ತುಸು ಗೊಣಗುತ್ತಲೇ ಅಪ್ಪೆಮಿಡಿ ಖರೀದಿಸುತ್ತಿದ್ದಾರೆ.

ಹಳಿಯಾಳ, ಯಲ್ಲಾಪುರ, ಮುಂಡಗೋಡ, ದಾಂಡೇಲಿ, ಸೋಂದಾ, ದಾಸನಕೊಪ್ಪ ಭಾಗಗಳಿಂದ ಮಾವಿನಮಿಡಿ ಮಾರುಕಟ್ಟೆಗೆ ಬರುತ್ತಿದೆ. ಮಂಗಳವಾರ ಮಾರ್ಕೆಟ್ ದಿನ ಹತ್ತಾರು ವ್ಯಾಪಾರಸ್ಥರು ಸಾಲಿನಲ್ಲಿ ಕುಳಿತು ತುರುಸಿನಿಂದ ಮಿಡಿಮಾವು ವ್ಯಾಪಾರ ನಡೆಸಿದರು. ಎರಡು ವಾರಗಳ ಹಿಂದೆ ಮಾರುಕಟ್ಟೆ ಪ್ರವೇಶಿಸಿರುವ ಅಪ್ಪೆಮಿಡಿ ಇನ್ನೂ ಎರಡು ವಾರದ ವರೆಗೆ ತನ್ನ ಪರಿಮಳ ಬೀರಲಿದೆ. ಜೀರಿಗೆ ಮಿಡಿಮಾವಿನ ವ್ಯಾಪಾರ ನಡೆಸಿರುವ ರಂಗಾಪುರದ ಅಶೋಕ ಭಜಂತ್ರಿ, `ನಮ್ಮ ತೋಟದಲ್ಲಿ ಮಿಡಿಮಾವಿನ ಬೆಳೆ ಇಲ್ಲ. ಹಳಿಯಾಳ ಭಾಗದಿಂದ ಖರೀದಿಸಿ ತಂದು ವ್ಯಾಪಾರ ಮಾಡುತ್ತಿದ್ದೇವೆ. ವ್ಯಾಪಾರ ಚೆನ್ನಾಗಿದ್ದರೂ ಬೆಳೆ ಕಡಿಮೆ ಇದೆ. ಮಿಡಿಮಾವು ದೊರೆಯುವದು ಕಷ್ಟವಾಗಿದೆ~ ಎನ್ನುತ್ತಾರೆ.

`ಅಪ್ಪೆಮಿಡಿ ಕೊಯ್ಯುವುದು ಸುಲಭವಲ್ಲ. ಕಾಯಿಗೆ ಪೆಟ್ಟಾದರೆ ವ್ಯಾಪಾರ ಆಗುವುದಿಲ್ಲ. ಹೀಗಾಗಿ ಪರಿಣತರಿಂದ ಕೊಯ್ಯಿಸಿ ಮಾರುಕಟ್ಟೆಗೆ ತರುತ್ತೇವೆ~ ಎಂದು ಮಲ್ಲಿಕಾರ್ಜುನ ಕಮಾಟರ ಹೇಳಿದರು.

ಅಪ್ಪೆಮಿಡಿ ಮರಗಳು ವಿನಾಶದ ಅಂಚಿನಲ್ಲಿದ್ದು, ಕಾಯಿ ಕೊಯ್ದು ತರುವ ಭರದಲ್ಲಿ ಮರಕ್ಕೆ ಧಕ್ಕೆಯಾಗದಂತೆ ವ್ಯಾಪಾರಸ್ಥರು ಎಚ್ಚರಿಕೆ ವಹಿಸಬೇಕಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.