ADVERTISEMENT

ಸಂಕಷ್ಟ ತಂದಿಟ್ಟ ಒಳಚರಂಡಿ ಕಾಮಗಾರಿ

ಹೊನ್ನಾವರ ಪಟ್ಟಣದ ರಸ್ತೆಗಳಲ್ಲಿ ದೂಳಿನ ಕಿರಿಕಿರಿ: ನಾಗರಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 11:31 IST
Last Updated 30 ಮಾರ್ಚ್ 2018, 11:31 IST
ಹೊನ್ನಾವರ ಪಟ್ಟಣದ ಪ್ರಭಾತನಗರದ ರಸ್ತೆಯೊಂದರ ದುಃಸ್ಥಿತಿ
ಹೊನ್ನಾವರ ಪಟ್ಟಣದ ಪ್ರಭಾತನಗರದ ರಸ್ತೆಯೊಂದರ ದುಃಸ್ಥಿತಿ   

ಹೊನ್ನಾವರ: ಪಟ್ಟಣ ದಲ್ಲಿ  ಎರಡು ವರ್ಷಗಳ ಹಿಂದೆಯೇ ಆರಂಭವಾದ ಒಳಚರಂಡಿ ಯೋಜನೆಯ ಕಾಮಗಾರಿ ಕುಂಟುತ್ತಾ ಸಾಗಿದ್ದು, ನಾಗರಿಕರಿಗೆ ಸಮಸ್ಯೆ ತಂದಿಟ್ಟಿದೆ. ದೂಳು ತುಂಬಿರುವ ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡೇ ಓಡಾಡಬೇಕಾಗಿದ್ದು, ಅಕ್ಕಪಕ್ಕದ ಮನೆಗಳು, ಗಿಡ ಮರಗಳು ಕೆಂಪಾಗಿವೆ.

ಪಟ್ಟಣಕ್ಕೆ ಒಳಚರಂಡಿ ಯೋಜನೆ ಕಲ್ಪಿಸಲು 2010ರ ಫೆ.20ರಂದು ಒಳಚರಂಡಿ ಮಂಡಳಿಯಿಂದ ₹ 28 ಕೋಟಿ ಮಂಜೂರಾಗಿತ್ತು.ನಂತರ ಈ ಯೋಜನೆಗೆ 2014ರ ಸೆ.26 ರಂದು ತಾಂತ್ರಿಕ ಅನುಮೋದನೆ ದೊರೆಯಯಿತು. ಬೆಂಗಳೂರಿನ ಮೈಕಾನ್ ಕನ್‌ಸ್ಟ್ರಕ್ಷನ್ ಕಂಪನಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು 2016 ಮೇ 27ರಂದು ₹ 29.347 ಕೋಟಿಗೆ ಗುತ್ತಿಗೆ ನೀಡಲಾಗಿತ್ತು. ಒಪ್ಪಂದದಂತೆ 2018 ಮೇ 26ರಂದು ಈ ಕಾಮಗಾರಿ ಪೂರ್ತಿಗೊಳ್ಳಬೇಕಿದೆ.

‘ಈಗಿನ ಕಾಮಗಾರಿ ವೇಗ ನೋಡಿದರೆ ನಿಗದಿತ ಅವಧಿಯಲ್ಲಿ ಮುಕ್ತಾಯ|ಗೊಳ್ಳುವುದು ಅನುಮಾನವಿದೆ. ಮಣ್ಣಿನ ಪೈಪ್ ಅಳವಡಿಕೆ ಸೇರಿದಂತೆ ಸಂಪೂರ್ಣ ಕಾಮಗಾರಿ ಕಳಪೆಯಾಗಿದೆ’ ಎಂದು ಆರೋಪಿಸಿ ಪಟ್ಟಣದ ಅನೇಕ ಕಡೆಗಳಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು.

ADVERTISEMENT

ಕಾಮಗಾರಿಯ ವಿಧಿ–ವಿಧಾನಗಳಿಗೆ ಪಟ್ಟಣ ಪಂಚಾಯಿತಿಯ ಸಭೆ ಅನುಮೋದನೆ ನೀಡಿದೆ. ಗುತ್ತಿಗೆಯ ಷರತ್ತಿನಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಸಮರ್ಥನೆ ನೀಡಿದ್ದರು. ಪೈಪ್‌ ಅಳವಡಿಸಲು ರಸ್ತೆಯ ಮಧ್ಯದಲ್ಲಿ ಗುಂಡಿ ತೋಡಿದ್ದಕ್ಕೂ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ‘ನಾವು ಅಗೆದ ಜಾಗಕ್ಕೆ ಮತ್ತೆ ಡಾಂಬರ್‌ ಹಾಕಿ ಕೊಡುತ್ತೇವೆ’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು.

ಪಟ್ಟಣ ಪಂಚಾಯ್ತಿ ಸಭೆಯಲ್ಲಿ ಸಾರ್ವಜನಿಕರು ಹಾಗೂ ಸದಸ್ಯರ ನಡುವೆ ಈ ಕುರಿತಂತೆ ವಾಗ್ವಾದವೂ ಆಗಿತ್ತು. ನಂತರ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಂಧಾನ ನಡೆದು, ‘ಈಗಾಗಲೇ ಮುಗಿದಿರುವ ಕಾಮಗಾರಿಗೆ ಅನುಮೋದನೆ ಪಡೆದುಕೊಂಡು ನಂತರದ ಕಾಮಗಾರಿಯನ್ನು ಮುಂದು
ವರಿಸುವುದು’ ಎಂಬ ಸಂಧಾನಕ್ಕೆ ಬರಲಾಗಿತ್ತು. ಆದರೆ, ಈಗ ಕಾಮಗಾರಿ ಮತ್ತೆ ಸ್ಥಗಿತಗೊಂಡಿದೆ.

‘ನಮ್ಮ ರಸ್ತೆಯು ಹಳ್ಳಿ ರಸ್ತೆಗಿಂತ ಕಳಪೆಯಾಗಿದ್ದು, ಪ್ರಯಾಣಿಸುವುದು ದುಸ್ಸಾಹಸವಾಗಿ ಪರಿಣಮಿಸಿದೆ. ಒಳಚರಂಡಿ ನಿರ್ಮಾಣದ ಅವ್ಯವಸ್ಥೆ ಒಂದೆಡೆಯಾದರೆ ರಸ್ತೆಯಲ್ಲಿ ಡಾಂಬರೇ ಮಾಯವಾಗಿರುವುದು ನಮ್ಮ ಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ’ ಎಂದು ರಜತಗಿರಿ ನಿವಾಸಿ ಸುರೇಶ ಅಳಲು ತೋಡಿಕೊಳ್ಳುತ್ತಾರೆ. ಈ ನಡುವೆ ತಮ್ಮ ಮನೆಯ ಮುಂದಿನ ದೂಳನ್ನು ಅಡಗಿಸಲು ಜನರು ನೀರನ್ನು ರಸ್ತೆಗೆ ಹಾಕುತ್ತಿದ್ದು, ಬೇಸಿಗೆಯಲ್ಲಿ ದಿನನಿತ್ಯ ಸಾವಿರಾರು ಲೀಟರ್ ಜೀವಜಲ ಪೋಲಾಗುತ್ತಿದೆ.

**

ಒಳಚರಂಡಿ ಕಾಮಗಾರಿಯ ಗುತ್ತಿಗೆದಾರ ಕಂಪನಿಯು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಆದ್ದರಿಂದ ಕಾಮಗಾರಿಯನ್ನು ನಾವೇ ನಿಲ್ಲಿಸಲು ಸೂಚಿಸಿದ್ದೇವೆ – ಆರ್.ಎಂ.ಪಾಟೀಲ, ಪ.ಪಂ. ಮುಖ್ಯಾಧಿಕಾರಿ.

**– ಎಂ.ಜಿ.ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.