ADVERTISEMENT

ಸಂತೆಯಿಂದಲೂ ದೂರ ಉಳಿದ ಟಿಬೆಟನ್ನರು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 7:45 IST
Last Updated 21 ಆಗಸ್ಟ್ 2012, 7:45 IST

ಮುಂಡಗೋಡ: ಜನಾಂಗೀಯ ದಾಳಿ ನಡೆಯಲಿದೆ ಎನ್ನುವ ವದಂತಿಯಿಂದ ಆತಂಕಗೊಂಡಿದ್ದ ಇಲ್ಲಿನ ಟಿಬೆಟನ್‌ರು ಭಯದ ನೆರಳಿನಿಂದ ಸ್ವಲ್ಪ ಮಟ್ಟಿಗೆ ಹೊರಬಂದಿದ್ದಾರೆ. ಆದರೆ, ಪಟ್ಟಣದ ಕಡೆಗೆ ಮತ್ತು ವಾರದ ಸಂತೆಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಪಟ್ಟಣದ ಸೋಮವಾರ ಸಂತೆಯಲ್ಲಿ ಟಿಬೆಟನ್‌ರು ಬೆರಳಣಿಕೆಯಷ್ಟು ಮಾತ್ರ ಇರುವುದು ಕಂಡುಬಂತು.
 
ಪ್ರತಿಸಂತೆಯ ದಿನ ಮಧ್ಯಾಹ್ನದವರೆಗೂ ಟಿಬೆಟನ್ನರು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಿದ್ದರು. ಪಟ್ಟಣದ ಬನ್ನಿಕಟ್ಟೆ, ಬಸವನ ಬೀದಿಗಳಲ್ಲಿ ಸಹ ಟಿಬೆಟನ್‌ರ ಅನುಪಸ್ಥಿತಿ ಎದ್ದುಕಾಣುತ್ತಿತ್ತು. ಟಿಬೆಟನ್‌ರಿಲ್ಲದೇ ವ್ಯಾಪಾರಸ್ಥರು ಸ್ವಲ್ಪ ಮಟ್ಟಿಗೆ ನಷ್ಟ ಅನುಭವಿಸಿದರು. 

ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ಟಿಬೆಟನ್‌ರ ಮೇಲೆ ನಡೆದಿದೆ ಎನ್ನಲಾದ ದಾಳಿಯಿಂದ ಇಲ್ಲಿಯ ಟಿಬೆಟನ್‌ರು ಆತಂಕಗೊಂಡು ಹುಬ್ಬಳ್ಳಿಗೆ ಹೋಗುವುದನ್ನು ಕಡಿಮೆ ಮಾಡಿದ್ದರು. ಅಲ್ಲದೇ ವದಂತಿಗಳಿಂದ ಆತಂಕಗೊಂಡು ಕ್ಯಾಂಪ್ ಬಿಟ್ಟು ತೆರಳಲು ಮನಸ್ಸು ಮಾಡುತ್ತಿರಲಿಲ್ಲ.

ಪೊಲೀಸ್ ಅಧಿಕಾರಿಗಳು ಕ್ಯಾಂಪಗೆ ಭೇಟಿ ನೀಡಿ ಎಲ್ಲ 9ಕ್ಯಾಂಪ್‌ಗಳ ಮುಖಂಡರ ಸಭೆ ಕರೆದು ಅವರಲ್ಲಿದ್ದ ಆತಂಕವನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದರು. ಟಿಬೆಟನ್‌ರ ರಕ್ಷಣೆಗೆ ಕೈಗೊಳ್ಳಲಾದ ಕ್ರಮಗಳನ್ನು ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದರಲ್ಲದೇ ವದಂತಿಗಳಿಗೆ ಕಿವಿಗೊಡದೆ ಭಯಮುಕ್ತರಾಗಿ ಜೀವನ ನಡೆಸುವಂತೆ ಸೂಚಿಸಿದ್ದರು.

ಇಷ್ಟರ ಹೊರತಾಗಿಯೂ ಕ್ಯಾಂಪ್‌ನ ಮುಖಂಡರುಗಳು ಸೂಚನೆ ನೀಡದ ಹೊರತು ಟಿಬೆಟನ್‌ರು ಅದರಲ್ಲೂ `ಲಾಮಾ~ ಜನರು ಹೊರಗೆ ಹೋಗುವಂತಿಲ್ಲ ಎಂದು ಆಜ್ಞೆ ಹೊರಡಿಸಿರುವದಾಗಿ ತಿಳಿದು ಬಂದಿದೆ.

ನೂರಾರು ಬೌದ್ಧ ಬಿಕ್ಕುಗಳು ಪರೀಕ್ಷೆಗಾಗಿ ಮೈಸೂರು ಜಿಲ್ಲೆಯ ಬೈಲಕುಪ್ಪೆಗೆ ತೆರಳಿರುವದರಿಂದ ಕ್ಯಾಂಪ್‌ಗಳಲ್ಲಿ  `ಲಾಮಾ~ ಜನರ ಸಂಚಾರ ಕಡಿಮೆಯಾಗಿದೆ ಎನ್ನಲಾಗಿದೆ. ಬೈಲಕುಪ್ಪೆಗೆ ತೆರಳಿದ್ದ ಇಲ್ಲಿಯ ಬೌದ್ಧ ಬಿಕ್ಕುಗಳು ಸುರಕ್ಷಿತವಾಗಿ ತಲುಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

`ಕ್ಯಾಂಪ್‌ನಲ್ಲಿ ಪೊಲೀಸರು ಸೂಕ್ತ ಭದ್ರತೆ ಒದಗಿಸಿರುವುದರಿಂದ ನಮ್ಮಲ್ಲಿರುವ ಆತಂಕ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಟಿಬೆಟನ್‌ರಲ್ಲಿರುವ ಎಲ್ಲ ಆತಂಕ ದೂರವಾಗಿ ಮೊದಲಿನಂತೆ ಶಾಂತಿಯಿಂದ ಜೀವನ ನಡೆಸುವುದಕ್ಕೆ ಸೂಕ್ತ ವಾತಾವರಣ ನಿರ್ಮಾಣ ವಾಗುತ್ತದೆ ಎಂಬ ಆಶಾಭಾವನೆಯಿದೆ~ ಎಂದು ಗಾಂದೆನ್ ಮೊನ್ಯಾಸ್ಟ್ರಿಯ ಲೋಬಸಾಂಗ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.