ADVERTISEMENT

ಸಚಿವ ಕಾಗೇರಿ ಹ್ಯಾಟ್ರಿಕ್ ಸಾಧಿಸಿದ ಕ್ಷೇತ್ರ

ಸಚಿವ ಅಸ್ನೊ ಟಿಕರ್ ರಾಜಕೀಯ ಭವಿಷ್ಯಕ್ಕೆ ನಾಂದಿ ಹಾಡಿದ ಕಣ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 8:13 IST
Last Updated 8 ಏಪ್ರಿಲ್ 2013, 8:13 IST

ಕಾರವಾರ-ಅಂಕೋಲಾ
ವಿಧಾನಸಭಾ ಕ್ಷೇತ್ರ : ಪರಿಚಯ

ಕಾರವಾರ: ಅಂಕೋಲಾ ಕ್ಷೇತ್ರ 1957ರಿಂದ 2004ರ ವರೆಗೆ ಸ್ವತಂತ್ರ ಕ್ಷೇತ್ರವಾಗಿತ್ತು. ಕ್ಷೇತ್ರ ಪುನರ್ ವಿಂಗಡನೆಯ ನಂತರ ಈ ಕ್ಷೇತ್ರವು ಕಾರವಾರ-ಅಂಕೋಲಾ ಕ್ಷೇತ್ರವಾಗಿ ಮಾರ್ಪಟ್ಟಿದೆ. ಕ್ಷೇತ್ರದಲ್ಲಿ ಒಟ್ಟು 11 ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಐದು, ಜನತಾ ಪಾರ್ಟಿ ಎರಡು ಮತ್ತು ಬಿಜೆಪಿ ಮೂರು ಹಾಗೂ ಪಿಎಸ್‌ಪಿ ಪಕ್ಷ ಒಂದು ಬಾರಿ ಜಯ ಸಾಧಿಸಿದೆ.

ಕುಮಟಾ ವಿಧಾನಸಭಾ ಕ್ಷೇತ್ರವು ಮಹಿಳಾ ಅಭ್ಯರ್ಥಿಯೊಬ್ಬರಿಗೆ ವಿಧಾನಸಭೆ ದಾರಿ ತೋರಿಸಿದ ಹಾಗೆ ಪಕ್ಕದಲ್ಲೇ ಇರುವ ಅಂಕೋಲಾ ಕ್ಷೇತ್ರವೂ 1972ರಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಾಧಾ ಭಟ್ ಹಾಗೂ 1978ರಲ್ಲಿ ಸ್ಪರ್ಧಿಸಿದ್ದ ಅನುಸೂಯಾ ಶರ್ಮಾ ಅವರಿಗೆ ಅವರಿಗೆ ವಿಧಾನಸಭೆ ಪ್ರವೇಶ ಮಾಡಲು ಅವಕಾಶ ನೀಡಿತು.

ಪಕ್ಷಗಳು ಬೇರೆಯಾಗಿದ್ದರೂ ಸತತ ಎರಡು ಅವಧಿಗೆ ಮಹಿಳೆಯೊಬ್ಬರನ್ನು ಕ್ಷೇತ್ರದ ಮತದಾರರು ಆಯ್ಕೆ ಮಾಡಿರುವುದು ವಿಶೇಷ. ಆದರೆ, ಮಹಿಳಾ ಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರೋ ಇಲ್ಲವೋ ಗೊತ್ತಿಲ್ಲ. ಅವರ ಅಧಿಕಾರ ಒಂದೇ ಅವಧಿಗೆ ಕೊನೆಗೊಂಡಿದೆ.

ಇಬ್ಬರೂ ಮಹಿಳಾ ಪ್ರತಿನಿಧಿಗಳ ಪೈಕಿ 1978ರಲ್ಲಿ ಜಯಗಳಿಸಿದ ಅನುಸೂಯಾ ಶರ್ಮಾ 1983ರಲ್ಲಿ ನಡೆದ ಚುನಾವಣೆಯಲ್ಲಿ ಪುನಃ ಸ್ಪರ್ಧೆ ಮಾಡಿದರು. ಆದರೆ, ಜಯ ಅವರಿಗೆ ಒಲಿಯಲಿಲ್ಲ. ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶ್ರೀಪಾದ ಹೆಗಡೆ ಅವರ ವಿರುದ್ಧ ಶರ್ಮಾ ಸುಮಾರು ಮೂರು ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದರು.

ಕ್ಷೇತ್ರದಲ್ಲಿ 1978ರಿಂದ 1989ರ ವರೆಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜನತಾ ಪಾರ್ಟಿ ಮಧ್ಯೆ ಜುಗುಲ್ ಬಂದಿ ನಡೆದಿತ್ತು. ಕಾಯಂ ಪಕ್ಷವನ್ನು ನೆಚ್ಚಿಕೊಳ್ಳದ ಮತದಾರ ಐದು ಬಾರಿ ನಡೆದ ಚುನಾವಣೆಯಲ್ಲಿ ಪಕ್ಷ ಬದಲಾಯಿಸಿರುವುದು ಇಲ್ಲಿ ಗಮನಾರ್ಹ.

ಈ ಜುಗುಲ್‌ಬಂದಿಗೆ 1994ರಲ್ಲಿ ನಡೆದ ಚುನಾವಣೆ ಅಂತ್ಯಹಾಡಿತು. ಆ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲಿ ಬಿಜೆಪಿ ಅಸ್ತಿತ್ವಕ್ಕೆ ನಾಂದಿ ಹಾಡಿದರು. ಈ ಕ್ಷೇತ್ರದಿಂದ ರಾಜಕೀಯ ಭವಿಷ್ಯ ಕಂಡುಕೊಂಡ ಕಾಗೇರಿ 1994, 99, 2004ರಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಿದರು.

ಕ್ಷೇತ್ರ ಪುನರ್ ವಿಂಗಡನೆಯ ನಂತರ ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಜಯಗಳಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದಾರೆ. ಕಾಗೇರಿ ರಾಜಕೀಯವಾಗಿ ಎತ್ತರಕ್ಕೆ ಬೆಳೆಯಲು ಅಂಕೋಲಾ ಕ್ಷೇತ್ರದಲ್ಲಿ ಸಾಧಿಸಿದ ಹ್ಯಾಟ್ರಿಕ್ ಜಯವೂ ಕಾರಣವಾಗಿದೆ ಎನ್ನುವುದು ಕ್ಷೇತ್ರದ ಮತದಾರರ ಸ್ಮೃತಿಪಟಲದಲ್ಲಿದೆ.

ಕ್ಷೇತ್ರ ಪುನರ್‌ವಿಂಗಡನೆಯ ನಂತರ ಮೀನುಗಾರಿಕೆ ಸಚಿವ ಆನಂದ ಅಸ್ನೋಟಿಕರ ಅವರ ರಾಜಕೀಯ ಭವಿಷ್ಯಕ್ಕೂ ಈ ಕ್ಷೇತ್ರ ನಾಂದಿ ಹಾಡಿತು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಅಸ್ನೋಟಿಕರ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೇರ್ಪಡೆಯಾದರು.
ನಂತರದ ನಡೆದ ಉಪಚುನಾವಣೆಯಲ್ಲೂ ಅಸ್ನೋಟಿಕರ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ತಮ್ಮ ಛಾಪು ಒತ್ತಿದ್ದಾರೆ.

ವಿಜೇತರ ವಿವರ

ADVERTISEMENT

ವರ್ಷ  ವಿಜೇತರು   ಪಕ್ಷ

1957 ಆರ್.ಜಿ.ಕಾಮತ್        ರಾಷ್ಟ್ರೀಯ ಕಾಂಗ್ರೆಸ್
1962 ಪುಂಡಲೀಕ ಫಾಯದೆ    ರಾಷ್ಟ್ರೀಯ ಕಾಂಗ್ರೆಸ್
1967 ಡಿ.ಎನ್.ನಾಡಕರ್ಣಿ            ಪಿ.ಎಸ್.ಪಿ
1972 ರಾಧಾ ಭಟ್              ರಾಷ್ಟ್ರೀಯ ಕಾಂಗ್ರೆಸ್  
1978 ಅನಸೂಯಾ ಶರ್ಮಾ          ಜನತಾ ಪಾರ್ಟಿ
1983 ಶ್ರೀಪಾದ ಹೆಗಡೆ           ರಾಷ್ಟ್ರೀಯ ಕಾಂಗ್ರೆಸ್ 
1985 ಜಿ.ಎಸ್.ಹೆಗಡೆ ಅಜ್ಜೀಬಾಳ    ಜನತಾ ಪಾರ್ಟಿ
1989 ಉಮೇಶ ಭಟ್          ರಾಷ್ಟ್ರೀಯ ಕಾಂಗ್ರೆಸ್
1994 ವಿಶ್ವೇಶ್ವರ ಹೆಗಡೆ ಕಾಗೇರಿ  ಬಿಜೆಪಿ
1999 ವಿಶ್ವೇಶ್ವರ ಹೆಗಡೆ ಕಾಗೇರಿ  ಬಿಜೆಪಿ
2004 ವಿಶ್ವೇಶ್ವರ ಹೆಗಡೆ ಕಾಗೇರಿ  ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.