ADVERTISEMENT

ಸಲಾಂ ಹತ್ಯೆ: ಆರೋಪಿ ಹೇಳಿಕೆ ಬಯಲು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 7:00 IST
Last Updated 17 ಸೆಪ್ಟೆಂಬರ್ 2011, 7:00 IST

ಭಟ್ಕಳ: ಇಲ್ಲಿನ ಜಾಲಿ ಗ್ರಾ.ಪಂ.ನ ಉಪಾಧ್ಯಕ್ಷರಾಗಿದ್ದ ಅಬ್ದುಲ್ ಸಲಾಂ ದಾಮ್ದ (55) ಇವರ ಹತ್ಯೆಯನ್ನು ಯಾಕೆ ಮತ್ತು ಹೇಗೆ ಮಾಡಲಾಯಿತು ಎಂಬುದರ ಬಗ್ಗೆ, ಪ್ರಮುಖ ಆರೋಪಿಯೆಂದು ಪೊಲೀಸರಿಂದ ಬಂಧಿಸಲ್ಪಟ್ಟಿರುವ ಹೆಬಳೆಯ ಪುಂಡಲೀಕ ನಾಯ್ಕ ತನಿಖೆಯ ವೇಳೆ ನೀಡಿದ ಹೇಳಿಕೆ ವಿವರ ಬಿಚ್ಚಿಟ್ಟಿದೆ. ಈ ಕುರಿತು ಹತ್ಯೆಯ ತನಿಖೆಯ ಮಾರ್ಗದರ್ಶಕರಾಗಿದ್ದ ಹೆಚ್ಚುವರಿ ಎಸ್.ಪಿ.ವಿಬಿ ಗಾಂವಕರ್ ಮಾಹಿತಿ ನೀಡಿದ್ದಾರೆ

ಆರೋಪಿ ಪುಂಡಲೀಕ ಲ್ಯಾಬ್ ಟೆಕ್ನೀಶಿಯನ್ ಕೋರ್ಸ್ ಮುಗಿಸಿ ಕಳೆದ ಐದು ವರ್ಷಗಳಿಂದ ಭಟ್ಕಳದ ಶಿರಾಲಿಯಲ್ಲಿ `ವಿನಾಯಕ ಡೈಗ್ನೊಸ್ಟಿಕ್~

ಕೇಂದ್ರವನ್ನು ತೆರೆದುಕೊಂಡಿದ್ದನು. ಇಲ್ಲಿಗೆ ಆಗಾಗ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಹತ್ಯೆಯಾದ ಅಬ್ದುಲ್ ಸಲಾಂ (ಮೆಡಿಕಲ್ ಸಲಾಂ) ಬರುತ್ತಿದ್ದರಿಂದ ಅವರಿಬ್ಬರಲ್ಲಿ ಸಹಜವಾಗಿಯೇ ಸ್ನೇಹವಾಗಿದೆ. ನಂತರದ ದಿನಗಳಲ್ಲಿ ಆರೋಪಿಯ ಕೆಲವು ಸ್ನೇಹಿತರಾದ ಬಡ್ಡಿ ವ್ಯವಹಾರ ಮಾಡುವವನೊಬ್ಬ ಸೇರಿದಂತೆ ಹಲವರೂ ಸಲಾಂಗೆ ಸ್ನೇಹಿತರಾದರು. ಇವರೆಲ್ಲಾ ವಾರಕ್ಕೆ ನಾಲ್ಕೈದು ಬಾರಿ ಒಂದೆಡೆ ಸೇರಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿಯೇ ಆರೋಪಿ ಪುಂಡಲೀಕ, ಸಲಾಂ ಸೇರಿದಂತೆ ಎಲ್ಲರೂ ತಮ್ಮ  ಒಳ್ಳೆಯ ಹಾಗೂ ಕೆಟ್ಟ ಚಾಳಿಗಳ ಬಗ್ಗೆ, ತಾವು ಮಾಡಿದ ಮೋಜುಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾಗ ಸಲಾಂ ತನಗಿರುವ ಹೆಣ್ಣುಗಳ ಖಯಾಲಿ ಬಗ್ಗೆ ಮತ್ತು ಬಡ್ಡಿಗೆ ಹಣ ಕೊಡುವ ಬಗ್ಗೆ, ಭೂ ವ್ಯವಹಾರದ ಬಗ್ಗೆ ಹೇಳಿಕೊಂಡಿದ್ದಾರೆ.

ಇವರೆಲ್ಲರೂ ಒಟ್ಟಾಗಿಯೇ ಮೋಜು ಮಸ್ತಿಯನ್ನೂ ನಡೆಸಿದ್ದು,ಇವರ ನಡುವೆ ಹಣಕಾಸಿನ ವ್ಯವಹಾರ ಸಹ ನಡೆದಿದೆ.

ಹೀಗಿರುವಾಗ ಒಂದು ದಿನ ಆರೋಪಿ ಪುಂಡಲೀಕನ ಕುಟುಂಬದ ಯುವತಿಯೊಬ್ಬಳನ್ನು ನೋಡಿ ಆಸೆಪಟ್ಟ ಸಲಾಂ, ಅವಳನ್ನು ತನಗೆ ದೊರಕಿಸಿಕೊಡುವಂತೆ ಆರೋಪಿ ಪುಂಡಲೀಕನನ್ನು ಪೀಡಿಸುತ್ತಿದ್ದನು ಎನ್ನಲಾಗಿದೆ.

ಒತ್ತಾಯ ಹೆಚ್ಚಾದಾಗ ಪುಂಡಲೀಕ ಉಳಿದ ತನ್ನ ಸ್ನೇಹಿತರ ಬಳಿ ಈ ವಿಷಯ ತಿಳಿಸಿದ್ದಾನೆ. ಆಗ ಇವರೆಲ್ಲಾ ಮಾಡಿದ್ದೇ ಹತ್ಯೆಯ ಸಂಚು.

ಸೆ.5ರಂದು ಸಲಾಂರನ್ನು ಸಂಪರ್ಕಿಸಿ ಶಿರಸಿಯಲ್ಲಿ ಹುಡುಗಿಯೊಬ್ಬಳು ಸಿಕ್ಕಿದ್ದು ಮಜಕ್ಕೆ ಹೋಗೋಣವೆಂದು ನಂಬಿಸಿ, ಸೆ. 6ರಂದು ಆರೋಪಿ ತನ್ನದೇ ಆದ ಝೆನ್ ಎಸ್ಟಿಲೋ ಕಾರಿನಲ್ಲಿ ಬಡ್ಡಿ ವ್ಯವಹಾರ ನಡೆಸುವ ಹಾಗೂ ಇತರೇ ಇಬ್ಬರು ಸ್ನೇಹಿತರೊಂದಿಗೆ ಶಿರಸಿಗೆ ಹೋಗಲಾಗಿದೆ.

ಅಲ್ಲಿ ಊಟ ಮುಗಿಸಿ ಪುನಾ ಭಟ್ಕಳಕ್ಕೆ ಹಿಂತಿರುಗಿ ಬರುತ್ತಿದ್ದ ಸಂದರ್ಭದಲ್ಲಿ ದೇವಿಮನೆ ಘಟ್ಟದ ಬಳಿ ಹಿಂಬದಿ ಕುಳಿತಿದ್ದ ಆರೋಪಿ ಪುಂಡಲೀಕ ಮತ್ತು ಇನ್ನಿಬ್ಬರು ನೈಲಾನ್ ಹಗ್ಗದಿಂದ ಮುಂದುಗಡೆ ಕುಳಿತಿದ್ದ ಸಲಾಂರ ಕುತ್ತಿಗೆಯನ್ನು ಬಿಗಿದು ಸಾಯಿಸಿದ್ದಾರೆ. ನಂತರ ಹಗ್ಗದ ಸಮೇತ ಶವವನ್ನು ಘಟ್ಟದ ಅರಣ್ಯ ಪ್ರದೇಶದಲ್ಲಿ  ಎಸೆದು ಊರಿಗೆ ಹಿಂತಿರುಗಿ ತಮ್ಮ ಪಾಡಿಗೆ ತಾವಿದ್ದರು. ಆರೋಪಿಗಳ ಪೈಕಿ ಒಬ್ಬ ಕಾರನ್ನು ಚಲಾಯಿಸುತ್ತಿದ್ದನು.

5ಲಕ್ಷ ಹಣದ ಬಗ್ಗೆ ತನಗೆ ಗೊತ್ತಿಲ್ಲ ಎಂದು ಆರೋಪಿ ಪುಂಡಲೀಕ ಹೇಳುತ್ತಿದ್ದಾನೆ ಎಂದು ಹೆಚ್ಚುವರಿ ಎಸ್.ಪಿ.ವಿ.ಬಿ ಗಾಂವಕರ್ ತಿಳಿಸಿದ್ದಾರೆ.

ಹತ್ಯೆಯ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳಿದ್ದು, ಅವರನ್ನೂ ಇನ್ನೆರಡು ದಿನದಲ್ಲಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.