ADVERTISEMENT

ಸಿಆರ್‌ಝಡ್ ಸಡಿಲಿಕೆ-ಬೇಡಿಕೆ ಈಡೇರಿಕೆಗೆ ಗಡುವು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 8:40 IST
Last Updated 11 ಫೆಬ್ರುವರಿ 2011, 8:40 IST

ಕಾರವಾರ: ಸಿಆರ್‌ಝಡ್ ತಿದ್ದುಪಡಿ ವಿಧೇಯಕದಲ್ಲಿ ಮೀನುಗಾರರಿಗೆ ಸಡಿಲಿಕೆ ಕಲ್ಪಿಸಬೇಕು ಎನ್ನುವುದೂ ಸೇರಿದಂತೆ ಇತರೆ ಬೇಡಿಕೆಗಳನ್ನು ಫೆ. 24ರೊಳಗೆ ಈಡೇರಿಸದೇ ಇದ್ದರೆ ರಾಷ್ಟ್ರೀಯ ಮೀನುಗಾರ ಒಕ್ಕೂಟ ಫೆ. 25ರಿಂದ ರಾಷ್ಟ್ರದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ತಿಳಿಸಿದೆ. "
ಈ ಕುರಿತು ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಪಿ.ಎಮ್. ತಾಂಡೇಲ್ ಪತ್ರಿಕಾ ಹೇಳಿಕೆ ನೀಡಿದ್ದು,  ಸಿಆರ್‌ಝಡ್ ಕಾಯಿದೆಯಲ್ಲಿ ಸಡಿಲಿಕೆ ನೀಡುವ ಬಗ್ಗೆ ರಾಷ್ಟ್ರೀಯ ಮೀನುಗಾರ ಒಕ್ಕೂಟ ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ ಅವರೊಂದಿಗೆ 32 ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು. ಶೇ 75ರಷ್ಟು ಸಲಹೆಗಳನ್ನು ಸಚಿವರು ಒಪ್ಪಿಕೊಂಡಿದ್ದರು.

ಆದರೆ, ಜ.7ರ ಪ್ರಕಟಣೆಯಲ್ಲಿ ನಾವು ಚರ್ಚೆ ಮಾಡಿದ ಯಾವ ವಿಷಯ ಇಲ್ಲದೇ ಇರುವುದು ಮೀನುಗಾರರ ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಕರಾವಳಿಯ 100ರಿಂದ 200 ಮೀಟರ್ ಅಂತರದೊಳಗೆ ಮೀನುಗಾರರಿಗೆ ವಸತಿ ನಿರ್ಮಿಸಲು ಅವಕಾಶ ನೀಡಬೇಕು ಎನ್ನುವ ಬೇಡಿಕೆಯನ್ನು ಸಚಿವರು ಒಪ್ಪಿಕೊಂಡಿದ್ದರು. ಆದರೆ ‘ಟ್ರೆಡಿಷನಲ್ ಕೋಸ್ಟಲ್ ಕಮ್ಯೂನಿಟಿಸ್ ಇನ್‌ಕ್ಲೂಡಿಂಗ್ ಫಿಶಿಂಗ್ ಕಮ್ಯೂನಿಟಿಸ್’ ಎಂದು ತಿದ್ದುಪಡಿ ಮಾಡಲಾಗಿದೆ. ಇದರಿಂದ ಮೀನುಗಾರರಿಗೆ ಯಾವುದೇ ಪ್ರಯೋಜನವಿಲ್ಲ. ಇದರ ದುರ್ಬಳಕೆಯೇ ಹೆಚ್ಚಾಗಲಿದೆ ಎಂದು ತಾಂಡೇಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

 ಸಿಆರ್‌ಝಡ್ ರಾಷ್ಟ್ರ ಮತ್ತು ರಾಜ್ಯ ಸಮಿತಿಗಳಲ್ಲಿ ಮೀನುಗಾರ ಸಂಘಟನೆಗಳ ಮೂವರು ಪ್ರತಿನಿಧಿಗಳನ್ನು ಸೇರಿಸಲಾಗುವುದು ಎಂದು ಸಚಿವರು ಸಭೆಯಲ್ಲಿ ಒಪ್ಪಿಕೊಂಡಿದ್ದರು.ಆದರೆ  ಸಿಆರ್‌ಝಡ್ 2011ರಲ್ಲಿ ಅದರ ಬಗ್ಗೆ ಉಲ್ಲೇಖವೇ ಇಲ್ಲ. ಅಣು ವಿದ್ಯುತ್ ಕೇಂದ್ರ ಹಾಗೂ ವಿಮಾನ ನಿಲ್ದಾಣ ನಿರ್ಮಿಸುವುದನ್ನು ವಿರೋಧಿಸಿ, ಬಂದರು ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದು ವಿನಂತಿ ಮಾಡಿಕೊಳ್ಳಲಾಗಿತ್ತು. ಇದರ ಬಗ್ಗೆ ಯಾವುದೇ ನಿರ್ಣಯವನ್ನು ಸಚಿವರು ವ್ಯಕ್ತಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.