ADVERTISEMENT

ಸಿದ್ದಾಪುರಕ್ಕೆ ನೀರು ಪೂರೈಕೆ ಸರಾಗ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 10:54 IST
Last Updated 19 ಜೂನ್ 2013, 10:54 IST
ಸಿದ್ದಾಪುರಕ್ಕೆ ನೀರು ಪೂರೈಕೆ ಸರಾಗ
ಸಿದ್ದಾಪುರಕ್ಕೆ ನೀರು ಪೂರೈಕೆ ಸರಾಗ   

ಸಿದ್ದಾಪುರ: ಬೇಸಿಗೆಯ ಕೊನೆಯಲ್ಲಿ ಸಂಪೂರ್ಣ ಬರಿದಾಗಿದ್ದ ತಾಲ್ಲೂಕಿನ ಅರೆಂದೂರು ಹೊಳೆ ಮುಂಗಾರು ಆರಂಭವಾಗಿ ಹತ್ತು ದಿನಗಳ ಅವಧಿಯಲ್ಲಿಯೇ ತುಂಬಿ ಹರಿಯತೊಡಗಿದೆ. ಇದರಿಂದ ಪಟ್ಟಣಕ್ಕೆ ನೀರು ಪೂರೈಕೆ ಸರಾಗಗೊಂಡಿದೆ.

ಅರೆಂದೂರು ಹೊಳೆಯ ಸುತ್ತಮುತ್ತಲಿನ  ಪ್ರದೇಶದಲ್ಲಿ  ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ  ಈ ಹೊಳೆಯಲ್ಲಿ ಈಗಾಗಲೇ ಸಾಕಷ್ಟು ನೀರು ಹರಿಯತೊಡಗಿದೆ. ಕಳೆದ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದ ಕಾರಣದಿಂದ ಈ ವರ್ಷದ ಮೇ ಕೊನೆಯ ವಾರದಲ್ಲಿ ಅರೆಂದೂರು ಹೊಳೆ ಬತ್ತಿ, ಈ ಯೋಜನೆಯ ಚೆಕ್‌ಡ್ಯಾಮ್ ಬರಿದಾಯಿತು. ಇದರಿಂದ ಕೆಲವು ದಿನಗಳ ಕಾಲ ಪಟ್ಟಣದ ನೀರು ಸರಬರಾಜು ಸ್ಥಗಿತಗೊಂಡಿತು.

ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಸಂದರ್ಭ ಬಂದೀತು ಎಂದು ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದರು.

ಆದರೆ ಈ ಆತಂಕ ಮಂಜಿನಂತೆ ಕರಗಿಹೋಗಲು ಸಕಾಲದಲ್ಲಿ ಆರಂಭವಾದ ಮಳೆ ಕಾರಣವಾಯಿತು. ಈ ಬಾರಿಯ ಮುಂಗಾರು ನಿರೀಕ್ಷೆಗಿಂತ ಹೆಚ್ಚಾಗಿಯೇ ಸುರಿದಿದ್ದರಿಂದ ಹೊಳೆ-ಹಳ್ಳಗಳು ಮೈತುಂಬಿಕೊಂಡವು. ಈ ಹೊಳೆಯ ಸಮೀಪದಲ್ಲಿರುವ ಅರೆಂದೂರಿನಲ್ಲಿ ಮಳೆಮಾಪಕ ಕೂಡ ಇದ್ದು, ಅಲ್ಲಿ ಈವರೆಗೆ ಉತ್ತಮ ಮಳೆ ಬಿದ್ದಿದೆ. ಇದುವರೆಗೆ ಒಟ್ಟು 579 ಮಿ.ಮೀ. ಮಳೆ ಅಲ್ಲಿ ದಾಖಲಾಗಿದೆ.

ಪ್ರಸ್ತುತ 14,213ರಷ್ಟು ಪಟ್ಟಣದ ಜನಸಂಖ್ಯೆಯಾಗಿದ್ದು, 80 ಸಾರ್ವಜನಿಕ ನಳಗಳು ಮತ್ತು ಒಂದೂವರೆ ಸಾವಿರಕ್ಕೂ ಅಧಿಕ ವೈಯಕ್ತಿಕ ನಳಗಳಿವೆ. ಈ ಎಲ್ಲ ನಳಗಳಲ್ಲಿಯೂ ನೀರು ಬರಬೇಕಾದರೆ ಅರೆಂದೂರು ಹೊಳೆಯಲ್ಲಿ ಸಾಕಷ್ಟು ನೀರಿರಬೇಕಾಗುತ್ತದೆ ಎನ್ನುವುದು ಕಟುಸತ್ಯ. ಈಗಿನ ಪರಿಸ್ಥಿತಿ ಗಮನಿಸಿರುವ ಪಟ್ಟಣ ಪಂಚಾಯ್ತಿ ಅಧಿಕಾರಿಗಳು,  `ಸದ್ಯ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದು' ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.