ADVERTISEMENT

ಸಿಹಿ ಬೆಲ್ಲ ಸಂಗ್ರಹಿಸಲು ಹತ್ತಾರು ಸೂತ್ರಗಳು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 8:30 IST
Last Updated 14 ಏಪ್ರಿಲ್ 2012, 8:30 IST

ಶಿರಸಿ: ಬೆಲ್ಲ ಸಿದ್ಧಪಡಿಸಲು ಬೆಳೆಯುವ ಕಬ್ಬನ್ನು ಗಾಣಕ್ಕೆ ಹಾಕಿ ನುರಿಯುವ ಹಂತದಿಂದ ಕೊಪ್ಪರಿಗೆಯಲ್ಲಿ ಕುದಿಸಿ ಬೆಲ್ಲ ತಯಾರಿಸುವ ತನಕ ಅನುಸರಿಸಬೇಕಾದ ವಿವಿಧ ವಿಧಾನ, ಆ ಮೂಲಕ ಗುಣಮಟ್ಟದ ಬೆಲ್ಲ ಸಂಗ್ರಹಿಸುವ ಸೂತ್ರಗಳನ್ನು ಮೈಸೂರು ವಿಶ್ವವಿದ್ಯಾಲಯ ಮಂಡ್ಯದ ಸಕ್ಕರೆ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಎಸ್.ಚಂದ್ರಾಜು ರೈತರಿಗೆ ತಿಳಿಸಿಕೊಟ್ಟರು.

ಶುಕ್ರವಾರ ತಾಲ್ಲೂಕಿನ ಹುಲೇಮಳಗಿ ಸಮೀಪ ಮಂಟಗಾಲದಲ್ಲಿ ಆಯೋಜಿಸಿದ್ದ ಬೆಲ್ಲ ಹುಳಿಯಾಗದಂತೆ ತಡೆಯುವ ಕಾರ್ಯಾಗಾರದಲ್ಲಿ ಅವರು ಪ್ರಾತ್ಯಕ್ಷಿಕೆ ಮೂಲಕ ಬೆಲ್ಲ ಸಿದ್ಧಪಡಿಸುವ ಮಾದರಿ ತೋರಿಸಿದರು.

`ಆರೋಗ್ಯಕರ ಬೀಜ ನಾಟಿ ಮಾಡಬೇಕು. ಕಬ್ಬಿನ ಬೆಳೆಗೆ ಯೂರಿಯಾ ಬಳಸಬಾರದು. ದೊಡ್ಡಿ ಗೊಬ್ಬರ ಬಳಸಿದರೆ ಗದ್ದೆಯಲ್ಲಿ ಹೆಚ್ಚು ಕಾಲ ತೇವಾಂಶ ಉಳಿಯುತ್ತದೆ. ಕಬ್ಬನ್ನು ಆಳವಾಗಿ ಮಣ್ಣಿನ ಮಟ್ಟದಲ್ಲಿ ಕಡಿಯಬೇಕು. ಅದರಿಂದ ಸಿಹಿ ಪ್ರಮಾಣ ಹೆಚ್ಚು ದೊರೆಯುತ್ತದೆ. ಕಬ್ಬಿನ ಕೆಳಭಾಗದಲ್ಲೇ ಜಾಸ್ತಿ ಸಿಹಿ ಅಂಶ ಕೇಂದ್ರೀಕೃತವಾಗಿರುತ್ತದೆ.  ಬೆಲ್ಲ ಸಿದ್ಧಪಡಿಸುವಾಗ ಅಡುಗೆ ಸೋಡಾ, ಬೆಂಡೆಗಿಡದ ಹಸಿಕಡ್ಡಿ ಅಥವಾ ಲೋಳೆಯ ಅಂಶವಿರುವ ಪದಾರ್ಥ ನಿರ್ದಿಷ್ಟ ಪ್ರಮಾಣದಲ್ಲಿ ಬಳಸಿದರೆ ಕಬ್ಬಿನ ಹಾಲಿನಲ್ಲಿರುವ ಹೊಲಸು ತೆಗೆಯಲು ಅನುಕೂಲವಾಗುತ್ತದೆ. ಗಾಣಕ್ಕೆ ಹಾಕಿದ ಕಬ್ಬನ್ನು ಮತ್ತೊಮ್ಮೆ ರೋಲರ್ ಮಾಡಿದರೆ ಹೆಚ್ಚು ಹಾಲು ಸಿಗುತ್ತದೆ. ಇಲ್ಲವಾದಲ್ಲಿ ಒಂದು ಟನ್ ಕಬ್ಬಿನಲ್ಲಿ ಸರಾಸರಿ 120-150 ಕೆ.ಜಿ. ನಷ್ಟವಾಗುತ್ತದೆ. ಸರಿಯಾದ ವಿಧಾನ ಬಳಸಿ ಬೆಲ್ಲ ಸಿದ್ಧಪಡಿಸಿದರೆ ಎರಡು ವರ್ಷ ಕಾಲ ಇಟ್ಟರೂ ಬೆಲ್ಲ ಹುಳಿಯಾಗುವುದಿಲ್ಲ~ ಎಂದು ಅವರು ಹೇಳಿದರು.

ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಅಧ್ಯಕ್ಷ ಶಂಭುಲಿಂಗ ಹೆಗಡೆ ಮಾತನಾಡಿ, `ಬೆಲ್ಲ ಖರೀದಿಸುವಾಗ ಉತ್ತಮ ಗುಣಮಟ್ಟವಿದ್ದರೂ ಮಳೆಗಾಲ ಪ್ರಾರಂಭವಾಗುಷ್ಟರಲ್ಲಿ ವಾತಾವರಣ ತೇವಗೊಂಡ ನಂತರ ಹುಳಿ ಬರುತ್ತದೆ~ ಎಂದರು.

`ಈ ಕುರಿತು ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಅಧ್ಯಯನ ನಡೆಸುವಂತೆ ಪತ್ರ ಬರೆದ ಪರಿಣಾಮವಾಗಿ ಅಧ್ಯಯನ ನಡೆದಿದೆ. ಇನ್ನೂ ವರದಿ ದೊರೆತಿಲ್ಲ. ಕದಂಬ ಮಾರ್ಕೆಟಿಂಗ್ ರೈತರಿಗೆ ಕಬ್ಬನ್ನು ಖರೀದಿಸಿ ಏಕರೂಪದ ಬೆಲ್ಲ ಸಿದ್ಧಪಡಿಸುವ ಯೋಜನೆಯನ್ನು ಕೃವಿವಿ ಸಹಕಾರದಿಂದ ರೂಪಿಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಒಂದು ಕೋಟಿ ರೂಪಾಯಿಯ ಯೋಜನೆಗೆ ಅನುಮತಿ ದೊರೆತರೆ ದಿನಕ್ಕೆ 20ಟನ್ ಕಬ್ಬು ನುರಿಯುವ ಸಾಮರ್ಥ್ಯದ ಘಟಕ ಸ್ಥಾಪಿಸಬಹುದು~ ಎಂದರು.

ಮಂಟಗಾಲದ ರೈತ ಸೀತಾರಾಮ ಹೆಗಡೆ ಸಂವಾದದಲ್ಲಿ ಪಾಲ್ಗೊಂಡು, `ಎಚ್‌ಎಂ ಮತ್ತು ಮೋರಿಸ್ ತಳಿಯ ಕಬ್ಬನ್ನು ಈ ಭಾಗದಲ್ಲಿ ಬೆಳೆಯಲಾಗುತ್ತಿದೆ. ನೂರಾರು ವರ್ಷಗಳಿಂದ ಕಬ್ಬನ್ನು ಬೆಳೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಬಳಕೆಯಿಂದ ಬೆಲ್ಲದ ಗುಣಮಟ್ಟದಲ್ಲಿ ವ್ಯತ್ಯಾಸ ಕಾಣುತ್ತಿದೆ. ಸಂಪೂರ್ಣ ಸಾವಯವ ಮಾದರಿಯಲ್ಲಿ ಬೆಳೆದರೆ ಶೇಕಡಾ 40ರಷ್ಟು ಇಳುವರಿ ಕುಂಠಿತವಾಗುತ್ತದೆ. ಬಹುತೇಕ ರೈತರು ಸಣ್ಣ ಹಿಡುವಳಿದಾರರಾಗಿದ್ದು, ರಾಸಾಯನಿಕ ಕೃಷಿ ಅನಿವಾರ್ಯವಾಗಿದೆ. ಅದಕ್ಕೆ ಪರ್ಯಾಯ ತಳಿ ಅಥವಾ ಮಾರ್ಗ ತಿಳಿಸಬೇಕು~ ಎಂದರು. ಜಲಸಂವರ್ಧನೆ ಯೋಜನಾ ಸಂಘ ಮಣ್ಣಿನ ಗುಣಮಟ್ಟ ಪರೀಕ್ಷೆಗೆ ಮಣ್ಣಿನ ಮಾದರಿ ಒಯ್ದು ಬಹು ಸಮಯ ಕಳೆದರೂ ಫಲಿತಾಂಶ ದೊರೆತಿಲ್ಲ ಎಂದು ರೈತರೊಬ್ಬರು ದೂರಿದರು.

ಅರಣ್ಯ ಕಾಲೇಜಿನ ಡೀನ್ ಎಸ್.ಕೆ.ಪಾಟೀಲ, ಸ್ಥಳೀಯರಾದ ಬಾಲಚಂದ್ರ ಹೆಗಡೆ, ರಘುನಂದನ ಹೆಗಡೆ, ಶ್ರೀಪಾದ ಹೆಗಡೆ ದೊಡ್ನಳ್ಳಿ, ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಎಚ್.ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.