ಕಾರವಾರ: ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ. ಯಾವ ರಸ್ತೆಯಲ್ಲಿ ಸಾಗಿದರೂ ವಾಹನ ದಟ್ಟಣೆ ಕಾಣುತ್ತಿದೆ. ಸುಗಮ ಸಂಚಾರಕ್ಕೆಂದು ಸಂಚಾರ ಪೊಲೀಸರೂ ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ, ನಂದನಗದ್ದಾ ಭಾಗದಲ್ಲಿ ಮಾತ್ರ ಅವರ ಮಾರ್ಗದರ್ಶನ ನಾಗರಿಕರಿಗೆ ಸಿಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.
ನಂದನಗದ್ದಾದ ನ್ಯೂ ಹೈಸ್ಕೂಲ್‌ನಿಂದ ಸುಂಕೇರಿಯತ್ತ ಸಾಗುವ ರಸ್ತೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ವಾಹನ ದಟ್ಟಣೆ ಹೆಚ್ಚಿರುತ್ತದೆ. ಆ ಸಂದರ್ಭದಲ್ಲಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ಅಥವಾ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನೇಮಿಸಿ ಅನುಕೂಲ ಮಾಡಿಕೊಡಬೇಕು ಎಂಬುದು ಸುತ್ತಮುತ್ತಲಿನ ನಿವಾಸಿಗಳ ಮನವಿಯಾಗಿದೆ.
‘ಸುಮಾರು ಒಂದು ಕಿ.ಮೀ ಉದ್ದವಿರುವ ಈ ರಸ್ತೆಯಲ್ಲಿ ಸ್ಥಳೀಯರಿಗೆ ಅಗತ್ಯವಾದ ಎಲ್ಲ ವಸ್ತುಗಳೂ ಸಿಗುತ್ತವೆ. ಇಲ್ಲಿ ಒಂದೆರಡು ದಿನಸಿ ಮಾರುಕಟ್ಟೆಗಳು, ಮೀನು ಮಾರುಕಟ್ಟೆಗಳಿವೆ. ಅವುಗಳ ಎದುರು ಹತ್ತಾರು ವಾಹನಗಳು ಸದಾ ನಿಂತಿರುತ್ತವೆ. ಹಾಗಾಗಿ ವಾಹನಗಳ ದಟ್ಟಣೆ ಹೆಚ್ಚಾಗಿ ಸಮಸ್ಯೆಯಾಗುತ್ತಿದೆ’ ಎನ್ನುತ್ತಾರೆ ಅಂಬೇಡ್ಕರ್ ಕಾಲೊನಿ ನಿವಾಸಿ ಅಸಾದುಲ್ಲಾ ಖಾನ್.
ಎರಡು ವಾಹನಗಳು ಮುಖಾಮುಖಿಯಾದರೆ ನಡೆದುಕೊಂಡು ಹೋಗಲೂ ಜಾಗವಿರುವುದಿಲ್ಲ. ರಸ್ತೆ ಅಷ್ಟು ಇಕ್ಕಟ್ಟಾಗಿದೆ. ನಗರ ಸಾರಿಗೆಯ ಬಸ್‌ಗಳು, ಲಾರಿಗಳು ಬಂದರಂತೂ ಅವುಗಳ ಹಿಂದೆ ಹತ್ತಾರು ವಾಹನಗಳ ಸಾಲು ಇರುತ್ತದೆ. ಅದರ ಜತೆಗೇ ಅಡ್ಡರಸ್ತೆಗಳಿಂದ ಮುಖ್ಯರಸ್ತೆಗೆ ವಾಹನ ಸವಾರರು ಏಕಾಏಕಿ ಬರುತ್ತಾರೆ. ಇದರಿಂದ ಬಹಳ ಎಚ್ಚರಿಕೆಯಿಂದ ಸಾಗಬೇಕಾಗುತ್ತದೆ. ಎಷ್ಟೊಂದು ಸಲ ಇಲ್ಲಿ ಮಾತಿನ ಚಕಮಕಿ ಆಗಿರುವ ಉದಾಹರಣೆಯೂ ಇದೆ ಎನ್ನುತ್ತಾರೆ ಅವರು.
ಈ ರಸ್ತೆಯಲ್ಲಿ ಪಾದಚಾರಿ ಮಾರ್ಗದ ಸಮಸ್ಯೆಯೂ ಇದೆ. ಶಾಲಾ ಮಕ್ಕಳು, ಹಿರಿಯರು, ಮಹಿಳೆಯರು ಮೈಯೆಲ್ಲಾ ಕಣ್ಣಾಗಿ ರಸ್ತೆಯಂಚಿನಲ್ಲಿ ನಡೆದುಕೊಂಡು ಹೋಗುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.
**
ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಸಂಚಾರ ಪೊಲೀಸರು ಸನ್ನದ್ಧರಾಗಿದ್ದಾರೆ. ಸುಂಕೇರಿ ರಸ್ತೆಯ ಸಮಸ್ಯೆಯ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
– ವಿನಾಯಕ ಬಿಲ್ಲವ, ಸಂಚಾರ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.