ADVERTISEMENT

ಸುಸಜ್ಜಿತ ಅಗ್ನಿಶಾಮಕ ಠಾಣೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 9:45 IST
Last Updated 6 ಫೆಬ್ರುವರಿ 2011, 9:45 IST

ಹೊನ್ನಾವರ: ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಎಲ್ಲ ಆಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಅಗ್ನಿಶಾಮಕ ದಳದ ಠಾಣಾ ಕಟ್ಟಡವನ್ನು ಎಪಿಎಂಸಿ ಜಾಗದಲ್ಲಿ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.

ರಾಯಲ್‌ಕೇರಿಯ ಪಟ್ಟಣ ಪಂಚಾಯಿತಿ ವಸತಿ ಗೃಹದಲ್ಲಿ ಅಗ್ನಿಶಾಮಕ ಠಾಣೆಯ ತಾತ್ಕಾಲಿಕ ಕಟ್ಟಡವನ್ನು ಶನಿವಾರ ಉದ್ಘಾಟಿಸಿದ ಅವರು, ಯಲ್ಲಾಪುರ ಹಾಗೂ ಸಿದ್ದಾಪುರ ಪಟ್ಟಣಗಳಲ್ಲೂ ಸದ್ಯದಲ್ಲೇ ಅಗ್ನಿಶಾಮಕ ಠಾಣೆಯನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಮೂಲ ಸೌಕರ್ಯಗಳನ್ನು ಪೂರೈಸಲು ಸರ್ಕಾರ ಬದ್ಧವಾಗಿರುವುದಾಗಿ ಹೇಳಿದ ಅವರು, ಅಭಿವೃದ್ಧಿಗಾಗಿ ಆಯಾ ಊರಿನ ಪ್ರಮುಖರು ಕಾಳಜಿ ವಹಿಸಬೇಕು ಎಂದು ಹೇಳಿದರು.ಅಗ್ನಿ ಶಾಮಕ ದಳವನ್ನು ಹೊನ್ನಾವರಕ್ಕೆ ತರುವಲ್ಲಿ ಪ.ಪಂ. ಹಿಂದಿನ ಅಧ್ಯಕ್ಷ ಸದಾನಂದ ಭಟ್ಟ ಅವರ ಪ್ರಯತ್ನವನ್ನು ಅವರು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ, ಹೊನ್ನಾವರ ಪಟ್ಟಣಕ್ಕೆ ಶರಾವತಿ ನದಿಯಿಂದ ಕುಡಿಯುವ ನೀರಿನ ಪೂರೈಕೆಯಾಗಬೇಕು ಹಾಗೂ ತಾಲ್ಲೂಕಿಲ್ಲಿ ಒಂದು ಬಸ್ ಡಿಪೊ ಆರಂಭಿಸಬೇಕು ಎಂದು ಆಗ್ರಹಿಸಿದರು. ಬಸ್‌ಡಿಪೊಗೆ ಎಪಿಎಂಸಿ ಜಾಗ ನೀಡಬೇಕೆಂದು ವಿನಂತಿಸಿದ ಅವರು, ಅಗ್ನಿಶಾಮಕ ದಳದವರು ತಾಲ್ಲೂಕಿನಲ್ಲಿ ತಲೆದೋರುವ ನೆರೆಹಾವಳಿಯಲ್ಲಿ ಅಗತ್ಯ ನೆರವು ನೀಡಬೇಕು ಎಂದು ಹೇಳಿದರು.

ಹೊನ್ನಾವರದಲ್ಲಿ ಆರಂಭಿಸಲಾಗಿರುವ ಅಗ್ನಿಶಾಮಕ ದಳ ರಾಜ್ಯದಲ್ಲಿ 167ನೇ ಹಾಗೂ ಜಿಲ್ಲೆಯಲ್ಲಿ 7ನೆಯದೆಂದು ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಅಗ್ನಿಶಾಮಕ ಆಧಿಕಾರಿ ಎಚ್.ಎಸ್. ವರದಿರಾಜನ್ ತಿಳಿಸಿದರು.

ಪ.ಪಂ. ಅಧ್ಯಕ್ಷ ರವೀಂದ್ರ ನಾಯ್ಕ, ಉಪಾಧ್ಯಕ್ಷೆ ಜೊಸೆಫಿನ್ ಡಯಾಸ್, ಜಿ.ಪಂ. ಸದಸ್ಯರಾದ ಕೃಷ್ಣ ಗೌಡ, ಪುಷ್ಪಾ ನಾಯ್ಕ, ವನಿತಾ ನಾಯ್ಕ, ಮಂಜುನಾಥ ಗೌಡ, ತಹಸೀಲ್ದಾರ ಗಾಯತ್ರಿ ನಾಯಕ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಕೆ.ಶಿವಕುಮಾರ ಉಪಸ್ಥಿತರಿದ್ದರು. ರಾಘವೇಂದ್ರ ಪ್ರಾರ್ಥಿಸಿದರು. ನಂದೀಶ ವಂದಿಸಿದರು. ಅಗ್ನಿಶಾಮಕ ದಳದ ತುರ್ತು ಸೇವೆಗಾಗಿ ಸಾರ್ವಜನಿಕರು 08387-220888ಗೆ ಕರೆ ಮಾಡಬಹುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.