ADVERTISEMENT

ಹೆಗಡೆ ಜಿಲ್ಲೆಗಂಟಿದ ಕ್ಯಾನ್ಸರ್: ಆನಂದ ಅಸ್ನೋಟಿಕರ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 18:01 IST
Last Updated 17 ಮಾರ್ಚ್ 2019, 18:01 IST

ಕುಮಟಾ ( ಉತ್ತರ ಕನ್ನಡ): ‘ಕೇಂದ್ರ ಸಚಿವ, ಸಂಸದ ಅನಂತಕುಮಾರ ಹೆಗಡೆ ಈ ಜಿಲ್ಲೆಗೆ ಅಂಟಿದ ಕ್ಯಾನ್ಸರ್’ ಎಂದು ಮಾಜಿ ಸಚಿವ, ಜೆಡಿಎಸ್‌ ಮುಖಂಡ ಆನಂದ ಅಸ್ನೋಟಿಕರ್ ಅವರು ಭಾನುವಾರ ಇಲ್ಲಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

‘ಅವನ ನಾಲಿಗೆ ಮಿತಿ ಮೀರಿದಾಗ ನಾನೇ ಲೋಫರ್ ಎಂದು ಬೈದಿದ್ದೆ. ಆಗ ಬಿಜೆಪಿಯವರು ಸೇರಿದಂತೆ ಯಾರೂ ಆಕ್ಷೇಪಿಸಿರಲಿಲ್ಲ. ಅಂಥ ವ್ಯಕ್ತಿ ಜಿಲ್ಲೆಗೆ ಮತ್ತೆ ಬೇಕಾ?’ ಎಂದು
ಪತ್ರಿಕಾಗೋಷ್ಠಿಯಲ್ಲಿ ಕೇಳಿದರು.

‘ಕೌಶಲಾಭಿವೃದ್ಧಿಯಂಥ ಉತ್ತಮ ಖಾತೆ ಸಿಕ್ಕರೂ ಯುವಕರಿಗೆ ಉದ್ಯೋಗ ಮಾರ್ಗದರ್ಶನ ಮಾಡುವುದನ್ನು ಬಿಟ್ಟು, ಹಿಂದುಳಿದ ವರ್ಗಗಳ 18ರಿಂದ 24 ವರ್ಷ ವಯಸ್ಸಿನ ಯುವಕರ ಕೈಗೆ ಕೇಸರಿ ಬಾವುಟ ಕೊಟ್ಟ. ಮುಸ್ಲಿಮರ ವಿರುದ್ಧ ಧ್ವನಿ ಎತ್ತಿಸಿ ಅವರ ಮೇಲೆ ಕೇಸು ಬೀಳುವಂತೆ ಮಾಡಿ, ಅವರ ಬದುಕನ್ನೇ ಬಲಿ ಹಾಕಿದ್ದಾನೆ’ ಎಂದು ಆರೋಪಿಸಿದರು.

ADVERTISEMENT

‘ಅನಂತಕುಮಾರ ಹೆಗಡೆ ಹೇಳಿಕೆಯಂತೆ ಮುಸ್ಲಿಮರನ್ನು ದೇಶದ ಬೇರೆ ಬೇರೆ ಮುಸ್ಲಿಂ ರಾಷ್ಟ್ರಗಳಿಗೆ, ಕ್ರಿಶ್ಚಿಯನ್ನರನ್ನು ಅವರ ರಾಷ್ಟ್ರಗಳಿಗೆ ಕಳಿಸೋಣ; ಇಲ್ಲಿ ಹಿಂದೂಗಳೆಲ್ಲ ಶಾಂತಿಯಿಂದ ಇರುತ್ತಾರಾ? ಹಿಂದೆ ರಾಜರ ಆಳ್ವಿಕೆಯಲ್ಲಿ ದಲಿತರ ಮೇಲೆ ನಡೆದ ಹಿಂಸೆ, ಅತ್ಯಾಚಾರಗಳ ಬಗ್ಗೆ ಅನಂತಕುಮಾರ ಹೆಗಡೆಗೆ ಏನೂ ಗೊತ್ತಿಲ್ಲವೇ? ಈಗಲೂ ಉತ್ತರಪ್ರದೇಶ, ಬಿಹಾರದಲ್ಲಿ ಅದೇ ನಡೆಯುತ್ತಿದೆ’ ಎಂದರು.

‘ತನ್ನ ಸಂಸದ ಅವಧಿಯ 22 ವರ್ಷಗಳಲ್ಲಿ ಈ ಜಿಲ್ಲೆಗೆ ಹೆಗಡೆ ಕೊಡುಗೆ ಏನೆಂದು ತಿಳಿಸಲಿ. ಬೆಂಗಳೂರಿನಲ್ಲಿ ₹8 ಕೋಟಿ ಹಾಗೂ ಶಿರಸಿಯಲ್ಲಿ ₹5 ಕೋಟಿ ಮೌಲ್ಯದ ಮನೆ. ಮುಸ್ಲಿಂ ಸಮಾಜದವರಿಗೆ ಸದಾ ಬೈಯುತ್ತಲೇ ಇರಾನ್ ದೇಶದಿಂದ ಡಾಂಬರು ತರಿಸುವ ಉದ್ಯಮ ಹೊಂದಿ ಮತ್ತೆ ಅವರದೇ ಅನ್ನ ಊಟ ಮಾಡುವಾಗ ನಾಚಿಕೆ ಎನಿಸುವುದಿಲ್ಲವೇ?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.