ADVERTISEMENT

ಹೊನ್ನಾವರ, ಮುಂಡಗೋಡದಲ್ಲಿ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 8:55 IST
Last Updated 18 ಜೂನ್ 2011, 8:55 IST

ಕಾರವಾರ: ಜಿಲ್ಲೆಯ ಕರಾವಳಿ ತಾಲ್ಲೂಕುಗಳಲ್ಲಿ ಶುಕ್ರವಾರ  ಬಿಡುವು ನೀಡಿದ ಮಳೆ ಘಟ್ಟದ ಮೇಲಿನ  ಹಳಿಯಾಳ, ಮುಂಡಗೋಡ, ದಾಂಡೇಲಿ ಹಾಗೂ ಯಲ್ಲಾಪುರದಲ್ಲಿ ಧಾರಾಕಾರವಾಗಿ ಸುರಿದಿದ್ದು ಜನಜೀನವ ಅಸ್ತವ್ಯಸ್ತಗೊಂಡಿದೆ.

ಕಾರವಾರದಲ್ಲಿ ಸಂಜೆ ಬೀಸಿದ ಗಾಳಿಯಿಂದಾಗಿ ಕೋಡಿಭಾಗ ಸಮೀಪ ರಾಷ್ಟ್ರೀಯ ಹೆದ್ದಾರಿ-17ರಲ್ಲಿ ಹಾಗೂ ಕಾರವಾರ- ಕೋಡಿಭಾಗ ಮುಖ್ಯರಸ್ತೆಯಲ್ಲಿ ಸರ್ಕಾರಿ ಪಿಯು ಕಾಲೇಜಿನ ಎದುರು ಗಾಳಿ ಮರಗಳು ಬಿದ್ದು ವಾಹನ ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾಗಿತ್ತು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಬದಿಯಲ್ಲಿದ್ದ ಗಾಳಿ ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಕಂಬವೊಂದು ಮುರಿದು ಹೋಗಿದೆ. ಸರ್ಕಾರಿ ಪಿಯು ಕಾಲೇಜಿನ ಆವರಣಗೊಳಗಿದ್ದ ಗಾಳಿ ಮರ ವಿದ್ಯುತ್ ವಯರ್‌ಗಳ ಮೇಲೆ ಬಿದ್ದು ವಯರ್‌ಗಳು ತುಂಡಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.

ಮಳೆಯ ವಿವರ:  ಮುಂಡಗೋಡ 4.6 ಮಿ.ಮೀ. ಹಳಿಯಾಳ 5.6, ಜೋಯಿಡಾ 48.2, ಭಟ್ಕಳ 79, ಶಿರಸಿ 60, ಸಿದ್ದಾಪುರ 49.6, ಯಲ್ಲಾಪುರ 33.4, ಕಾರವಾರ 123.8, ಅಂಕೋಲಾ 82.2, ಕುಮಟಾ 95 ಹಾಗೂ ಹೊನ್ನಾವರದಲ್ಲಿ 119.4 ಮಿ.ಮೀ. ಮಳೆಯಾಗಿದೆ.

ಮುಂಡಗೋಡ ವರದಿ: 24 ಗಂಟೆಗಳ ಅವಧಿಯಲ್ಲಿ  ರಭಸದ ಗಾಳಿಯೊಂದಿಗೆ ವೇಗ ಪಡೆದುಕೊಂಡ ಮಳೆಗೆ ನಗರದ ಜನಜೀವನ ಅಸ್ತವ್ಯಸ್ತಗೊಂಡು ವಿದ್ಯಾರ್ಥಿಗಳು ಪರದಾಡಿದ ಪರಿಸ್ಥಿತಿ ಶುಕ್ರವಾರ ಕಂಡುಬಂತು.
ಬೆಳಿಗ್ಗೆಯಿಂದಲೇ ಸೂರ್ಯನ ದರ್ಶನ ಕಾಣದ ನಗರದ ಜನತೆ ಮಳೆಯ ಆರ್ಭಟಕ್ಕೆ ನಲುಗಿದರು. 

ಕಳೆದೆರಡು ವಾರಗಳಿಂದ ಪ್ರಾರಂಭವಾಗಿರುವ ಮಳೆಯು ಗುರುವಾರ ರಾತ್ರಿಯಿಂದ ಇನ್ನಷ್ಟು ವೇಗದೊಂದಿಗೆ ಸುರಿಯುತ್ತಿದೆ.  ಎಲ್ಲಿ ನೋಡಿದರಲ್ಲಿ ನೀರು ತುಂಬಿಕೊಂಡಿದೆ. ಮಳೆಯಿಂದ ವಾಹನ ಸವಾರರು, ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಿದರು. ಚರಂಡಿ ಯಾವುದು ರಸ್ತೆ ಯಾವುದು ಎನ್ನುವಷ್ಟರ ಮಟ್ಟಿಗೆ ನೀರು ಹರಿಯ ತೊಡಗಿದೆ. ಕೆರೆ, ಕಟ್ಟೆಗಳು ತುಂಬುತ್ತಿದ್ದು  ಮಳೆಯ ಅಬ್ಬರ ಜೋರಾಗಿದೆ.

 ಮಳೆಯ ನೀರು ರಸ್ತೆಯಲ್ಲಿ ಮೊಣಕಾಲುವರೆಗೂ ಹರಿಯುತ್ತಿದೆ.  ವಾಹನ ಸವಾರರು ಇನ್ನಿಲ್ಲದ ಸರ್ಕಸ್ ಮಾಡುತ್ತ ಸಾಗುತ್ತಿರುವ ದೃಶ್ಯ ಕಂಡುಬಂತು.  ಹಲವು ತಿಂಗಳಿನಿಂದ ನಗರದಲ್ಲಿ ಕೈಗೊಳ್ಳಲಾಗಿರುವ ಗಟಾರ ಕಾಮಗಾರಿ ಇನ್ನೂ ತನಕ ಮುಗಿದಿಲ್ಲ. ಹೀಗಾಗಿ ಚರಂಡಿಯಲ್ಲಿ  ನೀರು ರಸ್ತೆ ಮೇಲೆ ಹರಿಯತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.