ADVERTISEMENT

‘ಕಲೆಯಲ್ಲಿ ಮಾನವತೆ ತತ್ವ ಬಿತ್ತಿದ ಪುತ್ತಣ್ಣ’

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2014, 7:02 IST
Last Updated 16 ಫೆಬ್ರುವರಿ 2014, 7:02 IST
ಕಲಾವಿದ ಪುತ್ತಣ್ಣ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಶಿರಸಿಯಲ್ಲಿ ಆಯೋಜಿಸಿರುವ ನಾಟಕೋತ್ಸವಕ್ಕೆ ಶನಿವಾರ ಸಂಜೆ ಚಾಲನೆ ನೀಡಿದರು. ಶ್ರೀಪಾದ ಭಟ್ಟ, ಭಾಗೀರಥಿ ಹೆಗಡೆ, ಸವಿತಾ ಶಾನಭಾಗ, ವಿಠ್ಠಲ ಭಂಡಾರಿ ಚಿತ್ರದಲ್ಲಿದ್ದಾರೆ
ಕಲಾವಿದ ಪುತ್ತಣ್ಣ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಶಿರಸಿಯಲ್ಲಿ ಆಯೋಜಿಸಿರುವ ನಾಟಕೋತ್ಸವಕ್ಕೆ ಶನಿವಾರ ಸಂಜೆ ಚಾಲನೆ ನೀಡಿದರು. ಶ್ರೀಪಾದ ಭಟ್ಟ, ಭಾಗೀರಥಿ ಹೆಗಡೆ, ಸವಿತಾ ಶಾನಭಾಗ, ವಿಠ್ಠಲ ಭಂಡಾರಿ ಚಿತ್ರದಲ್ಲಿದ್ದಾರೆ   

ಶಿರಸಿ: ‘ನಾಟಕ ರಂಗದ ಮೂಲಕ ತತ್ವ ಹಾಗೂ ಸತ್ವವನ್ನು ಒಳಗೊಂಡ ಮಾನವತ್ವವನ್ನು ಕಲಾವಿದ ಪುತ್ತಣ್ಣ ಬಿತ್ತಿದ್ದಾರೆ’ ಎಂದು ಯಕ್ಷಗಾನದ ಹಿರಿಯ ಕಲಾವಿದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಹೇಳಿದರು.

ಪ್ರಸಾದನ ಕಲಾವಿದ, ರಂಗ ನಿರ್ದೇಶಕ ಸದಾನಂದ ಶಾನಭಾಗ (ಪುತ್ತಣ್ಣ) ನೆನಪಿನಲ್ಲಿ ಇಲ್ಲಿನ ಚಿಂತನ ರಂಗ ಅಧ್ಯಯನ ಕೇಂದ್ರ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಮೂರು ದಿನಗಳ ನಾಟಕೋತ್ಸವಕ್ಕೆ ಶನಿವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು. ‘ಮನುಷ್ಯ ಮೊದಲು ಮಾನವನಾಗಬೇಕಾಗಿದೆ. ತತ್ವ ಹಾಗೂ ಸತ್ವವನ್ನು ಅರಿತು ಮಾನವತ್ವ ಬೆಳೆಸಿಕೊಳ್ಳಬೇಕು. ಪುತ್ತಣ್ಣ ನಾಟಕದ ಮೂಲಕ ಮಾನವತ್ವದ ಲೇಪನವನ್ನು ಅಭಿಮಾನಿಗಳಿಗೆ ಹಚ್ಚಿದ್ದಾರೆ. ನಾಟಕಕ್ಕೆ ಶುಚಿ, ರುಚಿ ಕೊಟ್ಟವರು ಪುತ್ತಣ’್ಣ ಎಂದರು.

‘ನಾಟಕ ಹಾಗೂ ಯಕ್ಷಗಾನ ಎರಡೂ ಕಲೆಗೆ ಬಣ್ಣವೇ ಬದುಕು. ಇದ್ದಿದ್ದನ್ನು ಇದ್ದ ಹಾಗೆ, ಇದ್ದಿದ್ದಕ್ಕೆ ಹೊಸ ಸೃಷ್ಟಿ ನೀಡಿ ಪುತ್ತಣ್ಣ ನಾಟಕ ರಂಗಕ್ಕೆ ಬಣ್ಣದ ಚೈತನ್ಯ ಕೊಟ್ಟಿದ್ದಾರೆ. ಪ್ರಾಮಾಣಿಕತೆ, ಪರಿಶ್ರಮ ಇಲ್ಲದಿದ್ದರೆ ಕಲಾವಿದನಿಗೆ ಕೀರ್ತಿ ಪಡೆಯಲು ಆಗದು. ಜೊತೆಗೆ ಅಭಿಮಾನಿಗಳಿದ್ದರೆ ಮಾತ್ರ ಕಲಾವಿದ ಬೆಳಗುತ್ತಾನೆ. ಅಭಿಮಾನಿಗಳೇ ರಂಗ ಕಲೆಯ ಉಳಿಕೆಗೆ ಕಾರಣರಾಗುತ್ತಾರೆ. ನಾಟಕ, ಸಿನಿಮಾ, ಯಕ್ಷಗಾನ ಯಾವುದೇ ರಂಗಕ್ಕಾದರೂ ಜನರ ಪ್ರೋತ್ಸಾಹ ಬೇಕು. ಪ್ರೋತ್ಸಾಹ ಇಲ್ಲದ ಕಲೆಗೆ ನೆಲೆ ಇಲ್ಲ’ ಎಂದು ಹೇಳಿದರು.

ಸಾಹಿತಿ ಭಾಗೀರಥಿ ಹೆಗಡೆ, ಪುತ್ತಣ್ಣ ಪತ್ನಿ ಸವಿತಾ ಶಾನಭಾಗ, ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ, ಕವಿ ವಿಡಂಬಾರಿ, ನಾಟಕೋತ್ಸವ ಸ್ವಾಗತ ಸಮಿತಿ ಕಾರ್ಯದರ್ಶಿ ಎಂ.ಎಚ್‌.ನಾಯ್ಕ, ಚಿಂತನ ರಂಗ ಅಧ್ಯಯನ ಕೇಂದ್ರದ ಅಧ್ಯಕ್ಷ ವಿಠ್ಠಲ ಭಂಡಾರಿ, ಕಾರ್ಯದರ್ಶಿ ಶ್ರೀಪಾದ ಭಟ್ಟ ಉಪಸ್ಥಿತರಿದ್ದರು. ನಾಟಕೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ವಿ.ಪಿ. ಹೆಗಡೆ ಸ್ವಾಗತಿಸಿದರು. ನಂತರ ಉಡುಪಿ ರಥಬೀದಿ ಗೆಳೆಯರು ಶ್ರೀಪಾದ ಭಟ್ಟ ನಿರ್ದೇಶನದ ‘ಗಂಗಿ ಪರಸಂಗ’ ನಾಟಕ ಪ್ರದರ್ಶಿಸಿದರು.

ನಾಟಕೋತ್ಸವದಲ್ಲಿ ಇಂದು: ನಾಟಕೋತ್ಸವದ ಎರಡನೇ ದಿನ 16ರಂದು ಬೆಳಿಗ್ಗೆ 9.30 ಗಂಟೆಗೆ ನಯನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದೇವಾನಂದ ಗಾಂವಕರ, ವಿಶ್ವನಾಥ ಹಿರೇಮಠ, ನರಸಿಂಹ ಕೋಮಾರ ರಂಗಗೀತೆ ಹಾಡುವರು. 10 ಗಂಟೆಯಿಂದ ದಶಕದ ರಂಗಭೂಮಿ ಕುರಿತ ಚರ್ಚೆಯಲ್ಲಿ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ, ಇಕ್ಬಾಲ್‌ ಅಹಮ್ಮದ್‌, ಕಲಾವಿದ ರಾಮಕೃಷ್ಣ ಭಟ್ಟ ದುಂಡಿ ಭಾಗವಹಿಸುವರು.

ದಶಕದ ನಾಟಕ ಸಾಹಿತ್ಯ: ವಸ್ತು ಮತ್ತು ವಿನ್ಯಾಸ ಕುರಿತು ಪ್ರಕಾಶ ಗರುಡ, ದಶಕದ ರಂಗ ಪ್ರಯೋಗ ಕುರಿತು ಪ್ರಕಾಶ ಬೆಳವಾಡಿ, ದಶಕದ ರಂಗಭೂಮಿ: ಮಹಿಳಾ ದನಿಗಳ ಕುರಿತು ಅಭಿಲಾಷಾ ಎಸ್‌, ದಶಕದ ಮಕ್ಕಳ ರಂಗಭೂಮಿ ಕುರಿತು ನಿಂಗು ಸೊಲಗಿ ಮಾತನಾಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT