ADVERTISEMENT

‘ಪಠ್ಯದಲ್ಲಿ ಮಕ್ಕಳ ಹಕ್ಕು ಮುದ್ರಣಕ್ಕೆ ಸರ್ಕಾರ ಮುಂದಾಗಲಿ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 6:17 IST
Last Updated 20 ಡಿಸೆಂಬರ್ 2013, 6:17 IST

ಶಿರಸಿ: ‘ಮಕ್ಕಳ ಹಕ್ಕುಗಳ ಬಗ್ಗೆ ಪಾಲಕರು, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲಾ ಪಠ್ಯಗಳ ಹಿಂಬದಿ ಪುಟದಲ್ಲಿ ಮಕ್ಕಳ ಹಕ್ಕುಗಳನ್ನು ಮುದ್ರಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಬರುವ ಶೈಕ್ಷಣಿಕ ವರ್ಷದ ಪಠ್ಯಗಳಲ್ಲಿ ಸರ್ಕಾರ ಪ್ರಕಟಿಸಬಹುದೆಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಉಮೇಶ್‌ ಆರಾಧ್ಯ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಕ್ಕಳ ಹಕ್ಕುಗಳ ಕುರಿತು ಸಮಾಜದಲ್ಲಿ ಇನ್ನಷ್ಟು ಅರಿವು ಮೂಡಿಸಬೇಕಾಗಿದೆ. ಈ ಕಾರಣಕ್ಕಾಗಿ ಶಾಲಾ ಪಠ್ಯಗಳ ಕೊನೆಯ ಪುಟದಲ್ಲಿ ಮಕ್ಕಳ ಹಕ್ಕುಗಳ ವಿವರಗಳನ್ನು ಪ್ರಕಟಿಸುವಂತೆ ಹಿಂದಿನ ನವೆಂಬರ್‌ ನಲ್ಲಿ ರಾಜ್ಯ ಸರ್ಕಾರಕ್ಕೆ ಶಿಫಾರಸು ನೀಡಿದ್ದು, ಸರ್ಕಾರದಿಂದ ಸಕಾರಾತ್ಮಕ ಉತ್ತರ ದೊರೆತಿತ್ತು. ಆದರೆ ಈ ವರ್ಷದ ಪಠ್ಯದಲ್ಲಿ ಇದು ಮುದ್ರಿತ ವಾಗಿಲ್ಲ. ಬರುವ ವರ್ಷದ ಪಠ್ಯದಲ್ಲಿ ಮುದ್ರಿಸಲು ಸರ್ಕಾರಕ್ಕೆ ವಿನಂತಿಸಲಾಗಿದೆ’ ಎಂದರು.

‘ಮಕ್ಕಳ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕುಗಳ ಕಾಯ್ದೆ (ಆರ್‌ಟಿಇ) ಅಡಿಯಲ್ಲಿ ಪ್ರತಿ ಶಾಲೆಯಲ್ಲಿ ಲಭ್ಯವಿರುವ ಸೀಟ್‌ಗಳು, ಶುಲ್ಕ ಸೇರಿದಂತೆ ಎಲ್ಲ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸುವ ನಿಯಮ ಜಾರಿಗೊಳ್ಳಬೇಕು. ಈ ಕಾಯ್ದೆ ಅಡಿಯಲ್ಲಿ ಶಾಲೆಗೆ ಸೇರುವ ಮಕ್ಕಳಿಗೆ ಏಕ ರೀತಿಯ ಶುಲ್ಕ ನೀತಿ ಜಾರಿ ಗೊಳ್ಳಬೇಕು. ಶಾಲಾ ಬಸ್‌ಗಳು ಸುಸ್ಥಿತಿಯಲ್ಲಿ ಇರುವಂತೆ ಸೂಚಿಸ ಬೇಕು ಎಂದು ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ’ ಎಂದರು.

‘ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಆಯೋಗಕ್ಕೆ ಶಿಕ್ಷೆ ವಿಧಿಸುವ ಅಧಿಕಾರವಿಲ್ಲ. ಸರ್ಕಾರಕ್ಕೆ ಶಿಫಾರಸು ನೀಡುವ ಅಧಿಕಾರವನ್ನು ಮಾತ್ರ ಆಯೋಗ ಹೊಂದಿದೆ. ಅಂಗನವಾಡಿ, ಮತ್ತಿತರ ಮಕ್ಕಳ ಆಹಾರಗಳಲ್ಲಿ ದೋಷವಿರುವ ಕುರಿತು ಆಯೋಗಕ್ಕೆ ದೂರುಗಳು ಬಂದರೆ ಆಯೋಗ ಅದನ್ನು ಪರಿಶೀಲಿಸಿ ಕ್ರಮಕ್ಕೆ ಶಿಫಾರಸು ಮಾಡಬಹುದು. ಮಾಧ್ಯಮಗಳ ವರದಿ ಆಧರಿಸಿ ಆಯೋಗವೇ ದಾಖಲಿಸಿದ ಪ್ರಕರಣಗಳ ನಂತರ ಅಂತಹ ಅಂಗನವಾಡಿಗಳಲ್ಲಿ ಆಹಾರದ ಗುಣಮಟ್ಟ ಕಾಪಾಡುತ್ತಿರುವ ಉದಾಹರಣೆಗಳಿವೆ’ ಎಂದು ಆರಾಧ್ಯ ಹೇಳಿದರು.

‘ಆಯೋಗಕ್ಕೆ ಆರ್‌ಟಿಇಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿ ಬರುತ್ತಿವೆ. ಒಟ್ಟು 300 ದೂರುಗಳಲ್ಲಿ ಶೇ 80ರಷ್ಟು ಬೆಂಗಳೂರಿಗೆ ಸಂಬಂಧಿಸಿವು ಆಗಿವೆ. ಮಕ್ಕಳಿಗೆ ಅನೇಕ ರೀತಿಯ ತೊಂದರೆಗಳು ಎದುರಾಗುತ್ತಿದ್ದರೂ ಆಯೋಗಕ್ಕೆ ದೂರು ನೀಡಬೇಕೆಂಬ ಅರಿವಿನ ಕೊರತೆಯಿಂದ ಬಹಳಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. 156 ವಿವಿಧ ಸಂಗತಿಗಳಿಗೆ ಸಂಬಂಧಿಸಿ ಆಯೋಗದ ದೂರವಾಣಿ– 1098ಗೆ ದೂರು ನೀಡಬಹುದು’ ಎಂದರು.

ಸಾಂಬಾರ ಪಾತ್ರೆಗಳಲ್ಲಿ ಪುಟ್ಟ ಮಕ್ಕಳು ಬಿದ್ದು ಮೃತಪಟ್ಟ ಘಟನೆಗಳ ನಂತರ ಹಿಂದಿನ ಅಧ್ಯಕ್ಷರು ನೀಡಿದ ಅಡುಗೆಮನೆಗೆ ಬಾಗಿಲು ನಿರ್ಮಿಸಬೇಕು, ಸಣ್ಣಪಾತ್ರೆಗಳನ್ನು ಬಳಸಿ ಅಡುಗೆ ಮಾಡಬೇಕು ಎಂಬ ಶಿಫಾರಸುಗಳನ್ನು ಸರ್ಕಾರಕ್ಕೆ ಮತ್ತೊಮ್ಮೆ ನೆನಪಿಸಲಾಗಿದೆ’ ಎಂದರು.

ಜಿಲ್ಲೆಯಲ್ಲಿ ಎರಡು ವರ್ಷಗಳ ಅವಧಿಯಲ್ಲಿ 11 ಪ್ರಕರಣಗಳು ದಾಖಲಾಗಿದ್ದು, ಏಳು ಇತ್ಯರ್ಥಗೊಂಡಿವೆ ಎಂದು ಆಯೋಗದ ಸದಸ್ಯ ವೆಂಕಟೇಶ ನಾಯ್ಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.