ADVERTISEMENT

‘ಬೋಧನೆಗೆ ಏಕರೂಪದ ಚೌಕಟ್ಟು ಅಗತ್ಯ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 6:23 IST
Last Updated 24 ಸೆಪ್ಟೆಂಬರ್ 2013, 6:23 IST

ಕುಮಟಾ: ‘ಎಲ್ಲ ಭಾಷೆ ಅನ್ನ, ಜ್ಞಾನ ನೀಡುವಂತಿದ್ದರೂ ಅವುಗಳ ಬೋಧನೆಗೆ ಒಂದು ಸಂಪನ್ಮೂಲ ಚೌಕಟ್ಟು ನಿರ್ಮಾಣವಾದರೆ ವಿದ್ಯಾರ್ಥಿಗಳ ಮೌಲ್ಯಮಾಪನ ಸುಲಭ’ ಎಂದು ಬರಹಗಾರ ಡಾ. ಮಹಾಬಲೇಶ್ವರ ರಾವ್‌ ತಿಳಿಸಿದರು.

ಪಟ್ಟಣದ ಕಮಲಾ ಬಾಳಿಗಾ ಪ್ರಶಿಕ್ಷಣ ಮಹಾವಿದ್ಯಾಯದಲ್ಲಿ ಸೋಮವಾರ ನಡೆದ ಕನ್ನಡ ಭಾಷಾ ಬೋಧನಾ ಸಂಪನ್ಮೂಲ ಘಟಕ ತಯಾರಿಕೆ ಕುರಿತ ಮೂರು ದಿವಸಗಳ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಅವರು ಆಶಯ ಭಾಷಣ ಮಾಡಿದರು. ‘ಎಲ್ಲ ಪ್ರಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಭಾಷಾ ಬೋಧನೆಯಲ್ಲಿ ಏಕರೂಪತೆಯ ಚೌಕಟ್ಟು ತರಲು ಇಂಥ ಕಾರ್ಯಾಗಾರ ಸಹಕಾರಿ’ ಎಂದರು.

ಕಾರವಾರ ಶಿವಾಜಿ ಕಾಲೇಉ ಪ್ರಾಚಾರ್ಯ ಡಾ. ಶಿವಾನಮದ ನಾಯಕ, ‘ಕನ್ನಡ ಭಾಷಾ ಇತಿಹಾಸ ಗೊತ್ತಿಲ್ಲದ ಶಿಕ್ಷಕ ಆ ಭಾಷೆಯನ್ನು ವಿದ್ಯಾರ್ಥಿಗಳಿಗೆ ಕಲಿಸಲಾರ. ಕನ್ನಡ ಭಾಷಾ ಬೋಧನೆಯ ಬಗ್ಗೆ ಸಂಪನ್ಮೂಲ ಘಟಕ ಕಾರ್ಯಾಗಾರದಿಂದ ಕಲಿಸುವಿಕೆಲ್ಲಿ ಒಂದು ಸ್ಪಷ್ಟತೆ ದೊರೆಯಲು ಸಾಧ್ಯ’ ಎಂದರು.

ಕಾರ್ಯಾಗಾರ ಉದ್ಘಾಟಿಸಿದ ಕೆನರಾ ಕಾಲೇಜು ಉಪಾಧ್ಯಕ್ಷ ಎ.ಪಿ.ಶಾನಭಾಗ, ‘ ಭವಿಷ್ಯದ ಶಿಕ್ಷಕರಿಗೆ ಕನ್ನಡ ಭಾಷಾ ಬೋಧನೆ ಕುರಿತು ಹೆಚ್ಚಿನ ಜ್ಞಾನಕ್ಕಾಗಿ ಸಂಪನ್ಮೂಲ ಘಟಕ ಅಗತ್ಯ’ ಎಂದರು.

ಕಾರ್ಯಾಗಾರ ಸಂಚಾಲಕಿ ಡಾ. ಪ್ರೀತಿ ಭಂಡಾರಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಡಾ. ಕೆ.ಎನ್‌.ಬೈಲಕೇರಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಪ್ರಾಚಾರ್ಯ ಡಾ.ಎಸ್‌.ಜಿ.ರಾಯ್ಕರ್‌ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕಾಲೇಜು ಹಾಗೂ ಪ್ರೌಢ ಶಾಲಾಗಳ ಕನ್ನಡ ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.