ADVERTISEMENT

‘ಸಮತೆಯ ಆಶಯವೇ ಮಠದ ಧ್ಯೇಯ’

ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗೆ ಗುರುವಂದನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2014, 5:59 IST
Last Updated 6 ಫೆಬ್ರುವರಿ 2014, 5:59 IST
ಶ್ರೀಗಳು ಗೋಕರ್ಣದ ಮಹಾಬಲೇಶ್ವರನಿಗೆ ಪೂಜೆ ಸಲ್ಲಿಸಿದರು. ಪ್ರಸನ್ನಾನಂದ ಸ್ವಾಮೀಜಿ ಇತರರು ಜೊತೆಗೆ ಇದ್ದರು.
ಶ್ರೀಗಳು ಗೋಕರ್ಣದ ಮಹಾಬಲೇಶ್ವರನಿಗೆ ಪೂಜೆ ಸಲ್ಲಿಸಿದರು. ಪ್ರಸನ್ನಾನಂದ ಸ್ವಾಮೀಜಿ ಇತರರು ಜೊತೆಗೆ ಇದ್ದರು.   

ಗೋಕರ್: ಆದಿ ಚುಂಚನಗಿರಿ ಸಂಸ್ಥಾನದಲ್ಲಿ ಜಾತಿ, ಮತ,  ಬಡವ ಶ್ರೀಮಂತ ಎಂಬ ಬೇಧ ಭಾವವಿಲ್ಲ. ಇಲ್ಲಿ ಎಲ್ಲರೂ ಸಮಾನರು, ಸರ್ವ ಜನಾಂಗದವರಿಗೂ ಶಾಂತಿಯ ತೋಟ ಎಂದು ಆದಿ ಚುಂಚನಗಿರಿ ಸಂಸ್ಥಾನ ಮಠದ ಜಗದ್ಗುರು ಶ್ರೀಶ್ರೀಶ್ರೀ ನಿರ್ಮಲಾನಂದ ಸ್ವಾಮೀಜಿ ಹೇಳಿದರು.

ಅವರು ಬುಧವಾರ ಗೋಕರ್ಣದ ನೆಲಗುಣಿಯ ಕಾಶಿ ವಿಶ್ವನಾಥ ಸಭಾ ಭವನದಲ್ಲಿ ನಡೆದ ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು.

ಹಿಂದಿನ ಗುರುಗಳಾದ ಡಾ.ಬಾಲಗಂಗಾಧರ ನಾಥ ಸ್ವಾಮೀಜಿ ಅವರು ಬಡ ಜನರಿಗೆ ವಿದ್ಯೆ ಶಿಕ್ಷಣ ಕೊಟ್ಟ ಮಹಾನ್ ಚೇತನ. ಅವರು ಹಾಕಿಕೊಟ್ಟ ಹಾದಿಯಲ್ಲೇ ನಾವು ಇಂದು ಮುನ್ನಡೆಯುತ್ತಿದ್ದೇವೆ ಎಂದರು.

ಹಿಂದುಳಿದ ಸಮಾಜ ಒಮ್ಮೆ ಬೆಳಕನ್ನು ಕಂಡರೆ ಮತ್ತೆ ಕತ್ತಲೆಯಡಿಗೆ ಹೋಗಲು ಸಾಧ್ಯವಿಲ್ಲ. ಎಲ್ಲ ಸ್ತರದ ಮಕ್ಕಳಿಗೂ ಶಿಕ್ಷಣ ಸಿಗುವಂತೆ ಮಾಡಿದ್ದಾರೆ. ನಮ್ಮ ಮಠ ಬಡ ಮಕ್ಕಳಿಗೆ ತೀರಾ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ ಎಂದರು.
ಈ ಭಾಗದಲ್ಲಿ ಮಠದ ಶಾಖೆಯನ್ನು ತೆರೆದು ಉತ್ತಮ ದರ್ಜೆಯ ಶಿಕ್ಷಣ ಸಿಗುವಂತೆ ದಶಕಗಳ ಕಾಲ ಪರಿಶ್ರಮಪಟ್ಟ ಪ್ರಸನ್ನನಾಥ ಸ್ವಾಮೀಜಿ ಅವರ ಕಾರ್ಯ ವೈಖರಿಯನ್ನು ಸ್ವಾಮೀಜಿ ಶ್ಲಾಘಿಸಿದರು.

ಪ್ರಸನ್ನನಾಥ  ಸ್ವಾಮೀಜಿ ಮಾತನಾಡಿ, ನಿರ್ಮಲಾನಂದ ಸ್ವಾಮೀಜಿಯವರು ಪೀಠಾಧಿ ಪತಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲೆಯ ಸಮಸ್ತ ಒಕ್ಕಲಿಗ ಸಮಾಜ ಬಾಂಧವರು ಸೇರಿ ಗುರುವಂದನೆ ಸಲ್ಲಿಸಿದ್ದು ತುಂಬಾ ಸಂತೋಷದ ವಿಷಯ ಎಂದರು.

ಇದಕ್ಕೂ ಮೊದಲು ಶ್ರೀ ಸ್ವಾಮೀಜಿಗಳ ಪರ ವಾಗಿ ಗೋಕರ್ಣದ ವೈದಿಕ ವೃಂದ ಮೇಲಿನ ಕೇರಿಯ ವಾತ್ಸಲ್ಯ ಸದನದಲ್ಲಿ ಅಥರ್ವ ಶಿರ್ಷ, ರುದ್ರಹೋಮಗಳನ್ನು ನಡೆಸಿಕೊಟ್ಟರು. ಪೂರ್ಣಾಹುತಿಯಲ್ಲಿ ಭಾಗವಹಿಸಿದ ನಂತರ ಸ್ವಾಮೀಜಿ ಅವರನ್ನು ಮೇಲಿನಕೇರಿಯಿಂದ ಭವ್ಯ ರಥದಲ್ಲಿ ಕುಳ್ಳಿರಿಸಿ ಮಹಾಬಲೇಶ್ವರ ದೇವಸ್ಥಾನ ದವರೆಗೆ ಬೃಹತ್‌ ಮೆರವಣಿಗೆ ಮೂಲಕ ಕರೆತರ ಲಾಯಿತು.

ಮಹಾಗಣಪತಿ, ಮಹಾಬಲೇಶ್ವರ ಮತ್ತು ಪಾರ್ವತಿ ದೇವಿಗೆ ಶ್ರೀಗಳು ಪೂಜೆ ಸಲ್ಲಿಸಿದರು. ವೇ. ಗಣಪತಿ ಹಿರೆ, ವೇ. ಶ್ರೀಪಾದ ಅಡಿ, ರಾಜ ಗೋಪಾಲ ಅಡಿ ಮುಂತಾದವರು ಪೂಜಾ ಕಾರ್ಯಗಳನ್ನು ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಸಹಸ್ರಾರು ಜನ ಒಕ್ಕಲಿಗ ಸಮಾಜ ಬಾಂಧವರು, ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.