ADVERTISEMENT

ಹೋರಾಟಕ್ಕೆ ಮೂರು ದಶಕ: 30 ಸಾವಿರ ಗಿಡ ನೆಡುವ ಪಣ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 16:28 IST
Last Updated 15 ಜುಲೈ 2021, 16:28 IST
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ 30 ಸಾವಿರ ಗಿಡ ನೆಡುವ ಅಭಿಯಾನದ ಲಾಂಛನವನ್ನು ಗುರುವಾರ ಶಿರಸಿಯಲ್ಲಿ ಬಿಡುಗಡೆಗೊಳಿಸಲಾಯಿತು
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ 30 ಸಾವಿರ ಗಿಡ ನೆಡುವ ಅಭಿಯಾನದ ಲಾಂಛನವನ್ನು ಗುರುವಾರ ಶಿರಸಿಯಲ್ಲಿ ಬಿಡುಗಡೆಗೊಳಿಸಲಾಯಿತು   

ಶಿರಸಿ: ಅರಣ್ಯ ಭೂಮಿ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಸೆಪ್ಟೆಂಬರ್‌ನಲ್ಲಿ 30 ವರ್ಷ ಪೂರ್ಣಗೊಳ್ಳಲಿದ್ದು, ಜಿಲ್ಲೆಯಾದ್ಯಂತ ಸುಮಾರು 30 ಸಾವಿರ ಗಿಡ ನೆಡುವ ಅಭಿಯಾನ ಹಮ್ಮಿಕೊಳ್ಳಲಿದ್ದೇವೆ ಎಂದುಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ನಗರದಲ್ಲಿ ಗುರುವಾರ ಗಿಡ ನೆಡುವ ಅಭಿಯಾನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಅರಣ್ಯ ರಕ್ಷಣೆ ಮತ್ತು ಪರಿಸರ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಅರಣ್ಯವಾಸಿಗಳೇ ಹೆಚ್ಚಿನ ಪ್ರಮಾಣದಲ್ಲಿ ಗಿಡ ನೆಡಲಿದ್ದಾರೆ’ ಎಂದರು.

‘ಅರಣ್ಯವಾಸಿಗಳು ಅರಣ್ಯೀಕರಣಕ್ಕೆ ಪೂರಕ ಚಟುವಟಿಕೆ ಮಾಡುತ್ತಿದ್ದಾರೆ. ಅರಣ್ಯ ಸಂರಕ್ಷಣೆಯ ಕಾಳಜಿ ಅವರಲ್ಲಿ ಹೆಚ್ಚಿದೆ. ಅಭಿವೃದ್ಧಿ ಕಾರ್ಯ, ಬೆಂಕಿ, ಜಲವಿದ್ಯುತ್ ಯೋಜನೆ, ಸಾರಿಗೆ, ಅರಣ್ಯ ಇಲಾಖೆಯ ಕಾಮಗಾರಿ ಮುಂತಾದ ಉದ್ದೇಶಕ್ಕೆ ಅರಣ್ಯ ನಾಶವಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಪರಿಸರಕ್ಕೆ ಪೂರಕವಾಗುವಂತೆ ಅರಣ್ಯ ಬೆಳೆಸಲು ಅರಣ್ಯ ಇಲಾಖೆ ಮುಂದಾಗುತ್ತಿಲ್ಲ. ನಾವು ಜಿಲ್ಲೆಯ ಪರಿಸರಕ್ಕೆ, ಮಣ್ಣಿನ ಸಂರಕ್ಷಣೆಗೆ ಅನುಕೂಲವಾಗುವ ಗಿಡಗಳನ್ನು ನೆಟ್ಟು ಬೆಳೆಸಲು ನಿಶ್ಚಯಿಸಿದ್ದೇವೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ ಮಾಳಕ್ಕನವರ, ಜಿಲ್ಲಾ ಘಟಕದ ಸಂಚಾಲಕ ಉದಯ ನಾಯ್ಕ, ತಿಮ್ಮ ಮರಾಠಿ, ಶಿವಪ್ಪ ಹಂಚಿನಕೇರಿ, ಮಜೀದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.