ಕುಮಟಾ: ‘ದಟ್ಟ ಕಾಡಿನಲ್ಲಿರುವ ತಾಲ್ಲೂಕಿನ ಅತ್ಯಂತ ಎತ್ತರದಲ್ಲಿರುವ ಮೇದಿನಿ ಗ್ರಾಮ ಸಂಪರ್ಕಿಸುವ ಸುಮಾರು 7 ಕಿ.ಮೀ ಪೈಕಿ 2.5 ಕಿ.ಮೀ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ₹4 ಕೋಟಿ ಮಂಜೂರಾಗಿದೆ’ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.
ಮಂಗಳವಾರ ಪ್ರಜಾವಾಣಿ ಗೆ ಮಾಹಿತಿ ನೀಡಿದ ಅವರು, ‘ಮೇದಿನಿ ಗ್ರಾಮಕ್ಕೆ ವಿದ್ಯುತ್ ಹಾಗೂ ರಸ್ತೆ ಸೌಲಭ್ಯ ಕಲ್ಪಿಸುವುದು ಕನಸಾಗಿತ್ತು. ವಿದ್ಯುತ್ ಸಂಪರ್ಕ ಕಲ್ಪಿಸಿದ್ದರೂ ಆಗಾಗ ವಿದ್ಯುತ್ ತಂತಿಗಳ ಮೇಲೆ ಮರದ ಕೊಂಬೆ ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತ ಉಂಟಾಗುತ್ತದೆ. ಗ್ರಾಮವನ್ನು ಸಂಪರ್ಕಿಸುವ ರಸ್ತೆ ಕಾಡಿನಲ್ಲಿ ಹಾದು ಹೋಗುವುದರಿಂದ ಅಲ್ಲಿ ರಸ್ತೆ ಕಾಮಗಾರಿ ನಡೆಸುವುದು ಸವಾಲಾಗಿದ್ದು, ಮಳೆಗಾಲದ ನಂತರ ಕಾಮಗಾರಿ ಆರಂಭಿಸಲಾಗುವುದು’ ಎಂದರು.
ಹೆಚ್ಚಿನ ಮಾಹಿತಿ ನೀಡಿದ ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಪಿ. ನಾಯ್ಕ, ‘ರಸ್ತೆಗಾಗಿ ಸುಮಾರು ಎರಡೂವರೆ ಎಕರೆ ಅರಣ್ಯ ಭೂಮಿ ಬಳಕೆಯಾಗುತ್ತಿದ್ದು, ಅದಕ್ಕಾಗಿ ಅರಣ್ಯ ಇಲಾಖೆಗೆ ಸುಮಾರು₹ 40 ಲಕ್ಷ ಪಾವತಿಸಬೇಕಾಗಿದೆ. ಕಾಮಗಾರಿಯು 3.75 ಮೀಟರ್ ಅಗಲದ ಸಿಮೆಂಟ್ ಕಾಂಕ್ರೀಟ್ ರಸ್ತೆ, ಗುಡ್ಡದ ಬದಿಗೆ ಸಿಮೆಂಟ್ ಗಟಾರ ಒಳಗೊಂಡಿದೆ. ಒಂದು ವರ್ಷದ ಹಿಂದೆ ಶಾಸಕ ದಿನಕರ ಶೆಟ್ಟಿ ಅವರು ಮೇದಿನಿ ಗ್ರಾಮದ ರಸ್ತೆಗಾಗಿ ಪ್ರಸ್ತಾವನೆ ಕಳಿಸಲು ಸೂಚಿಸಿದ್ದರು’ ಎಂದರು.
ಡಾಂಬರೀಕರಣಕ್ಕೆ ಚಾಲನೆ: ತಾಲ್ಲೂಕಿನ ಮೂರೂರಿನಿಂದ ಕಲ್ಲಬ್ಬೆ ಗ್ರಾಮ ಸಂಪರ್ಕಿಸುವ 1.20 ಕೀ.ಮೀ ರಸ್ತೆಗೆ₹45 ಲಕ್ಷ ಮೊತ್ತದ ಡಾಂಡಬರೀಕರಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಮಂಗಳವಾರ ಚಾಲನೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ನಾಯ್ಕ, ಸದಸ್ಯರಾದ ಮಧುಸೂದನ ಹೆಗಡೆ, ಹರ್ಷ ಹೆಗಡೆ, ಕಲ್ಲಬ್ಬೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವಿ ಹೆಗಡೆ, ಮುಖಂಡ ಜಿ.ಐ. ಹೆಡಗೆ, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಸೋಮನಾಥ ಭಂಡಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.