ADVERTISEMENT

ಶಿಲ್ಪವನ: ಅಂತಿಮ ಹಂತ ತಲುಪಿದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 8:46 IST
Last Updated 28 ಜನವರಿ 2018, 8:46 IST
ಕಾರವಾರದಲ್ಲಿ ನಿರ್ಮಾಣವಾಗುತ್ತಿರುವ ಶಿಲ್ಪೋದ್ಯಾನದಲ್ಲಿ ಅಂತಿಮ ಹಂತದ ಕಾಮಗಾರಿಗಳಿಗೆ ಸಿದ್ಧತೆ ಮಾಡಿಕೊಂಡಿರುವುದು
ಕಾರವಾರದಲ್ಲಿ ನಿರ್ಮಾಣವಾಗುತ್ತಿರುವ ಶಿಲ್ಪೋದ್ಯಾನದಲ್ಲಿ ಅಂತಿಮ ಹಂತದ ಕಾಮಗಾರಿಗಳಿಗೆ ಸಿದ್ಧತೆ ಮಾಡಿಕೊಂಡಿರುವುದು   

ಕಾರವಾರ:‌ ಇಲ್ಲಿನ ಅರಬ್ಬೀ ಸಮುದ್ರದ ದಡದಲ್ಲಿ ನಿರ್ಮಾಣವಾಗುತ್ತಿರುವ ಶಿಲ್ಪವನ ಇನ್ನು 15 ದಿನಗಳಲ್ಲಿ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ತಿಳಿಸಿದ್ದಾರೆ.

ಶನಿವಾರ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಶಿಲ್ಪವನ ನಿರ್ಮಿಸುತ್ತಿರುವ ಕಲಾವಿದರ ತಂಡ ಕಲಾಕೃತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದೆ. ಅವುಗಳನ್ನು ಸಂಪೂರ್ಣಗೊಳಿಸಲು ಕಾಲಾವಕಾಶ ಕೇಳಿದ್ದಾರೆ. ಆದ್ದರಿಂದ ಉದ್ಘಾಟನೆಯ ದಿನಾಂಕವನ್ನು ಸ್ವಲ್ಪ ಮುಂದೂಡಲಾಗಿದೆ’ ಎಂದರು.

ಕಡಲ ತೀರದಲ್ಲಿ ಇರುವ ನೌಕಾದಳದ ಹಳೆಯ ಪೋರ್ಟ್ ಟವರ್‌ಗೆ ಮೊಟ್ಟೆಯಾಕಾರದಲ್ಲಿ ಲೋಹದ ಪಟ್ಟಿಗಳನ್ನು ಅಳವಡಿಸಲಾಗುತ್ತಿದೆ. ಅದರ ಸುತ್ತಲೂ ಬಳ್ಳಿಗಳನ್ನು ಹಬ್ಬಿಸಿ ಇಡೀ ಕಟ್ಟಡವನ್ನು ಆವರಿಸುವಂತೆ ಮಾಡಲಾಗುತ್ತದೆ. ಅದರ ತುದಿಯಲ್ಲಿ ನಿಂತು ದೂರದರ್ಶಕದಲ್ಲಿ ನೋಡಿದರೆ ಐದು ದ್ವೀಪಗಳು, ಬಂದರು, ಸಮುದ್ರದಲ್ಲಿ ಸಂಚರಿಸುವ ಹಡಗುಗಳು, ಮೀನುಗಾರಿಕೆ ಚಟುವಟಿಕೆಗಳನ್ನು ನೋಡಬಹುದು. ಮುಂದಿನ ದಿನಗಳಲ್ಲಿ ಇದು ಸಾಕಾರಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಉದ್ಯಾನದಲ್ಲಿ ಈಗಾಗಲೇ ಹುಲ್ಲುಹಾಸು ಅಳವಡಿಸಲಾಗಿದೆ. ಬೆಂಚು, ಕೃತಕ ಜಲಪಾತ ನಿರ್ಮಾಣ ಮಾಡಲಾಗುತ್ತದೆ. ಜಿಲ್ಲೆಯ ಬಗ್ಗೆ ಮೇಲ್ನೋಟಕ್ಕೇ ಪರಿಚಯಿಸುವ ರೀತಿಯಲ್ಲಿ ಶಿಲ್ಪವನವನ್ನು ವಿನ್ಯಾಸ ಮಾಡಲಾಗುತ್ತಿದೆ. ಹಾಲಕ್ಕಿ, ಡೊಂಗ್ರಿ, ಸಿದ್ಧಿ, ಕುಣಬಿ, ಗೌಳಿ ಸಮುದಾಯಗಳ ಜೀವನಶೈಲಿ, ಮೀನುಗಾರಿಕೆಯನ್ನು ಬಿಂಬಿಸುವ ಥೀಮ್ ಪಾರ್ಕ್ ಸಿದ್ಧವಾಗುತ್ತಿದೆ. ಒಟ್ಟಿನಲ್ಲಿ ಪ್ರವಾಸಿಗರು ಅರ್ಧ ದಿನ ಸಂತೋಷವಾಗಿ ಕಳೆಯುವಂತಹ ಜಾಗ ಇದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಲಾವಿದ ಮೋಹನ್ ಸೋನ ಮಾತನಾಡಿ, ‘ಜಿಲ್ಲೆಯ ಪ್ರಮುಖ ಕಲೆಯಾದ ಯಕ್ಷಗಾನ ಪಾತ್ರಗಳ ಪ್ರತಿಮೆಗಳನ್ನೂ ನಿರ್ಮಿಸಲಾಗುತ್ತಿದೆ. ಅದರಲ್ಲಿ ಮಂಟಪ ಉಪಾಧ್ಯಾಯರ ಸ್ತ್ರೀವೇಷದ ಕಲಾಕೃತಿ ಕೇಂದ್ರಬಿಂದುವಾಗಿದೆ’ ಎಂದರು.

ಶಿಲ್ಪವನದಲ್ಲಿ ಆಟವಾಡುವ ಪ್ರದೇಶದ ಉಸ್ತುವಾರಿ ವಹಿಸಿಕೊಂಡಿರುವ ಎಂ.ಜಿ.ಕಜೆ ಮಾತನಾಡಿ, ‘ಸಾರ್ವಜನಿಕರಿಗೆ ವಿಶಿಷ್ಟ ಅನುಭವ ನೀಡುವ ‘ಸಸ್ಪೆನ್ಷನ್ ಬ್ರಿಜ್’ ನಿರ್ಮಾಣವಾಗಿದೆ. ಅದರ ಸಮೀಪದಲ್ಲೇ ‘ಮಂಕಿ ಬ್ರಿಜ್’ ನಿರ್ಮಾಣ ಮಾಡಲಾಗುತ್ತದೆ. ಪಕ್ಕದಲ್ಲಿರುವ ಮರದಲ್ಲಿ ಗುಡಿಸಲು ನಿರ್ಮಾಣ ಮಾಡಲಿದ್ದೇವೆ’ ಎಂದು ತಿಳಿಸಿದರು.

ಅಂಕಿ ಅಂಶಗಳು

6 ಎಕರೆ ಒಟ್ಟು ಪ್ರದೇಶ

3 ಎಕರೆ ಶಿಲ್ಪ ಉದ್ಯಾನ

3 ಎಕರೆ ಅಮ್ಯೂಸ್‌ಮೆಂಟ್ ಪಾರ್ಕ್

‘ಇನ್ನಷ್ಟು ಅನುದಾನ ಅಗತ್ಯ’

ಉದ್ಯಾನವನ್ನು ಮೂಲ ಯೋಜನೆಯಂತೆ ಸಜ್ಜುಗೊಳಿಸಲು ಇನ್ನೂ ₨ 3 ಕೋಟಿಯಿಂದ ₨ 4 ಕೋಟಿ ಅಗತ್ಯವಿದೆ. ಮತ್ತಷ್ಟು ಅನುದಾನ ನೀಡುವಂತೆ ಪ್ರವಾಸೋದ್ಯಮ ಇಲಾಖೆಗೆ ಮನವಿ ಮಾಡಲಿದ್ದೇವೆ ಎಂದು ಪ್ರಸನ್ನ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ₹ 75 ಲಕ್ಷ ಅನುದಾನ ನೀಡಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚತುಷ್ಪಥ ಕಾಮಗಾರಿಯ ಗುತ್ತಿಗೆ ಪಡೆದಿರುವ ಐಡಿಯಲ್ ರೋಡ್ ಬಿಲ್ಡರ್ಸ್ (ಐಆರ್‌ಬಿ) ಕಂಪನಿಯು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ₹ 61 ಲಕ್ಷ ಧನ ಸಹಾಯ ಮಾಡಿದೆ. ಅಲ್ಲದೇ ಶಿಲ್ಪ ವನಕ್ಕೆ ಬೇಕಾದ ಕಲ್ಲುಗಳನ್ನು ಅದುವೇ ಪೂರೈಕೆ ಮಾಡಿದೆ ಎಂದು ತಿಳಿಸಿದರು.

* * 

ಇಲ್ಲಿ ಕೇವಲ ಉದ್ಯಾನ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಕರಾವಳಿ ನಿಯಂತ್ರಣ ವಲಯದ (ಸಿಆರ್‌ಜೆಡ್) ನಿಯಮದ ಉಲ್ಲಂಘನೆ ಆಗುವುದಿಲ್ಲ.
ಎಚ್.ಪ್ರಸನ್ನ 
ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.